ಬೆಳಗಾವಿ: ಕಪ್ಪ ಕೇಳಿದ ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿ, ವಿಜಯ ದುಂಧುಬಿ ಮೊಳಗಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ 200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವಕ್ಕೆ ಬುಧವಾರ ಅದ್ದೂರಿ ಚಾಲನೆ ದೊರೆಯಿತು.
ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಚನ್ನಮ್ಮನ ಕಿತ್ತೂರಿನ ಚನ್ನಮ್ಮನ ವೃತ್ತದಲ್ಲಿ ಬರಮಾಡಿಕೊಂಡು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಎಲ್ಲ ಗಣ್ಯರು ಪುಷ್ಪಾಲಂಕೃತ ಅಶ್ವಾರೂಢ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಚನ್ನಮ್ಮನ ಕಿತ್ತೂರಿನ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಅಮಟೂರ ಬಾಳಪ್ಪ ಮತ್ತು ಶೂರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಗಳಿಗೆ ಕೂಡ ಗಣ್ಯರು ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಚನ್ನಮ್ಮಳ ಶೌರ್ಯದ ಸಂದೇಶ ರಾಜ್ಯಕ್ಕೆ ಹೋಗಬೇಕೆಂಬುದು ನಮ್ಮ ಉದ್ದೇಶ. ಅಂಚೆ ಚೀಟಿಯಲ್ಲಿ ಚೆನ್ನಮ್ಮಳ ಹೆಸರು ಸೇರ್ಪಡೆಗೆ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅಂಚೆ ಚೀಟಿಯಲ್ಲಿ ಚೆನ್ನಮ್ಮಳ ಹೆಸರು ಹಾಕಿದ್ದು ಒಳ್ಳೆಯ ನಿರ್ಧಾರ. ಹಾಗಾಗಿ, ಸ್ವಾಗತಿಸುತ್ತೇವೆ ಎಂದರು.
ಜನಾಕರ್ಷಿಸಿದ ಜಾನಪದ ಕಲಾವಾಹಿನಿ:
ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ಚಿಟ್ಟಿಮೇಳ, ಮಹಿಳಾ ವೀರಗಾಸೆ, ಈಶ್ವರ ವೇಷ, ಗಾರುಡಿ ಗೊಂಬೆ, ಮೀನು ನೃತ್ಯ, ಮಹಿಳಾ ಡೊಳ್ಳು ಕುಣಿತ, ಚೆಂಡೆವಾದ್ಯ, ಕುದುರೆ ಕುಣಿತ, ಕಂಸಾಳೆ, ನಂದಿಧ್ವಜ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಕರಡಿಮಜಲು, ಕಂಸಾಳೆ, ಜಗ್ಗಲಗಿ ಸೇರಿ 50 ಪ್ರಕಾರಗಳ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಆಕರ್ಷಿಸಿದವು.
ಬೀದಿಯಲ್ಲಿ ಎಲ್ಲಿ ನೋಡಿದರೂ ಜನವೋ ಜನ, ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ. ಕಲಾವಿದರು, ವಾದ್ಯಗಾರರು, ನೃತ್ಯಪಟುಗಳು, ಮಕ್ಕಳು, ಹಿರಿಯರು, ಮಹಿಳೆಯರೆಲ್ಲ ಸೇರಿ ಕಳೆ ತಂದರು. ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದ ರಾಣಿ ಚನ್ನಮ್ಮನಿಗೆ ಜಯವಾಗಲಿ, ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ, ಅಮಟೂರು ಬಾಳಪ್ಪ, ಸರ್ದಾರ್ ಗುರುಸಿದ್ದಪ್ಪನವರಿಗೆ ಜಯವಾಗಲಿ ಎಂದು ಘೋಷಣೆ ಕೇಳಿಬಂತು. ಸಾವಿರಾರು ಧ್ವನಿಗಳು ಏಕಕಾಲಕ್ಕೆ ಕಿತ್ತೂರು ಕ್ರಾಂತಿಯನ್ನು ಹಾಡಿ ಹೊಗಳಿದವು.
ಅಂಗ್ಲೋ- ಕಿತ್ತೂರು ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಹುರಿದುಂಬಿಸಲು ರಾಣಿ ಚನ್ನಮ್ಮ ಕೂಗಿದ ‘ಹರಹರ ಮಹಾದೇವ’ ಘರ್ಜನೆಯನ್ನು ನಿರಂತರ ಮೊಳಗಿಸಿದರು.
ಆಕರ್ಷಕ ಕಲಾ ತಂಡಗಳು, ಕಲಾವಾಹಿನಿಗಳು, ಅಲಂಕೃತ ವಾಹನಗಳು ಒಂದರ ಹಿಂದೆ ಒಂದು ಸಾಗಿದವು. ನೂರಡಿ ವಿಸ್ತಾರದ ಬೀದಿಯಲ್ಲಿ ಜನ ಹರಿದು ಬಂದರು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಪುಷ್ಪವೃಷ್ಟಿ ಮಾಡಿ, ಬಾವುಟ ಹಾರಿಸಿ ಕಳೆ ತಂದರು. ಫಲಪುಷ್ಪ ಪ್ರದರ್ಶನವ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಭಾಗವಹಿಸುವ 5 ಸಾವಿರಕ್ಕೂ ಹೆಚ್ಚು ಜನರಿಗೆ ಬೆಳಗಾವಿ ಹಾಲು ಒಕ್ಕೂಟದಿಂದ ಉಚಿತ ನಂದಿನಿ ಲಸ್ಸಿ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಶಾಸಕರಾದ ಬಾಬಾಸಾಹೇಬ್ ಪಾಟೀಲ, ಮಹಾಂತೇಶ ಕೌಜಲಗಿ, ಆಸಿಫ್ ಸೇಠ್, ವಿಧಾನಪರಿಷತ್ ಸದಸ್ಯ ಚನ್ಮರಾಜ ಹಟ್ಟಿಹೊಳಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಪಾರ ಜನಸ್ತೋಮ:
ಐತಿಹಾಸಿಕ ಉತ್ಸವ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ಆಗಮಿಸಿತು. ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಉತ್ಸವ ನಡೆಯುತ್ತಿರುವುದರಿಂದ ಇನ್ನು ಎರಡು ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಈ ಕಾರಣ ಮುಖ್ಯ ಕಾರ್ಯಕ್ರಮ ನಡೆಯುವ ಕೋಟೆ ಆವರಣದಲ್ಲಿ ವೀರರಾಣಿ ಕಿತ್ತೂರು ಚನ್ನಮಾಜಿ ವೇದಿಕೆ ನಿರ್ಮಿಸಿ 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಹತ್ತಿರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸರದಾರ ಗುರುಸಿದ್ದಪ್ಪ ವೇದಿಕೆ ನಿರ್ಮಿಸಿ ಸಾವಿರಾರು ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಬಂದೋಬಸ್ತ್:
ಮೂರು ದಿನ ಉತ್ಸವದಲ್ಲಿ ಇಬ್ಬರು ಡಿವೈಎಸ್ಪಿ, 9 ಸಿಪಿಐ, 26 ಪಿಎಸ್‌ಐ, 56 ಎಎಸ್ ಐ, 500ಕ್ಕೂ ಹೆಚ್ಚು ಸಿಬ್ಬಂದಿ, ಸಂಚಾರಿ ಪೊಲೀಸ್, 4 ಕೆಎಸ್ ಆರ್ ಪಿ, 4 ಡಿಎಆರ್ ತುಕಡಿ, ಮಪ್ತಿಯಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಒದಗಿಸಿದ್ದಾರೆ. ಪಟ್ಟಣದ ವಿವಿಧ ಭಾಗ, ಕೋಟೆ ಆವರಣ, ರಸ್ತೆಗಳಿಗೆ 50ಕ್ಕೂ ಹೆಚ್ಚುಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಮನಸೆಳೆದ ಜಲಸಾಹಸ ಕ್ರೀಡೆ:
ರಾಷ್ಟ್ರೀಯ ಪಕ್ಕದ ತುಂಬುಗೆರೆಯಲ್ಲಿ ಜಲಸಾಹಸ ಕ್ರೀಡೆಗಳು ಹಾಗೂ ದೋಣಿ ವಿಹಾರ ಆಯೋಜಿಸಲಾಗಿತ್ತು. ರ್ಯಾಪ್ಟಿಂಗ್, ಸ್ಪೀಡ್ ಬೋಟ್, ಕಯಾಕಿಂಗ್, ಬನಾನ ರೈಡ್ ಗಮನ ಸೆಳೆದವು. ಕೋಟೆ ಆವರಣದಲ್ಲಿ ವಸ್ತು ಪ್ರದರ್ಶನ ಉದ್ಘಾಟನೆ, ಆರೋಗ್ಯ ಮೇಳ, ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಯಾಂಡಲ್ ವುಡ್ ನಟ ದಿಗಂತ, ಐಂದ್ರಿತಾ ರೇ, ಚಂದನ್ ಶೆಟ್ಟಿ ಹಾಗೂ ಹಾಸ್ಯ ಕಲಾವಿದ ಯೋಗಿಗೌಡ ತಂಡದಿಂದ ರಸಮಂಜರಿ ಕಾರ್ಯಕ್ರಮ ಮನಸೆಳೆಯಿತು.