ಶ್ರೀಕೃಷ್ಣನಿಗೆ ವೈಭವದ ಬ್ರಹ್ಮರಥೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಸಂಜೆ 7.30ಕ್ಕೆ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವದ ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಹಾಗೂ ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಅಷ್ಟಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆದರು. ರಥೋತ್ಸವ ವಿಶೇಷ ಆಕರ್ಷಣೆಯಾಗಿ ಸುಡುಮದ್ದು ಪ್ರದರ್ಶನ ನಡೆಯಿತು. ಆಚಾರ್ಯ ಮಧ್ವರು 13ನೇ ಶತಮಾನದಲ್ಲಿ ಮಕರ ಸಂಕ್ರಾಂತಿಯಂದು ಕೃಷ್ಣ ವಿಗ್ರಹ ಪ್ರತಿಷ್ಠಾಪಿಸಿದ್ದ ನೆನೆಪಿಗಾಗಿ ವಾರ್ಷಿಕ ಜಾತ್ರೆ ಆಚರಿಸಲಾಗುತ್ತದೆ.

ಆನ್‌ಲೈನ್ ಮಹಾಭಾರತ: ರಥಬೀದಿಯಲ್ಲಿ ಬ್ರಹ್ಮರಥೋತ್ಸವ ಮೆರವಣಿಗೆ ಸಂದರ್ಭದಲ್ಲಿ ಪರ್ಯಾಯ ಪಲಿಮಾರು ಮಠದ ತತ್ವಸಂಶೋಧನಾ ಸಂಸತ್‌ನಿಂದ ಪ್ರಕಾಶಿತವಾದ ಮಹಾಭಾರತ ಕನ್ನಡ ಸಂಪುಟ ಮತ್ತು ಸಂಸ್ಕೃತ ಇ-ಬುಕ್ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳಿಂದ ಬಿಡುಗಡೆಗೊಂಡಿತು.

ಬಳಿಕ ಮಾತನಾಡಿದ ಅವರು, ಆಚಾರ್ಯ ಮಧ್ವರು ಸ್ವತಃ ವಿದ್ವಾಂಸರಾಗಿದ್ದರೂ, ದೇಶಾದ್ಯಂತ ಹಸ್ತಪ್ರತಿಗಳನ್ನು ಪರಿಷ್ಕರಿಸಿ ಶುದ್ಧಪಾಠವನ್ನು ತೋರಿಸಿಕೊಟ್ಟಿದ್ದಾರೆ. ನೈಜಾರ್ಥವನ್ನು ತಿಳಿಸಲು ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು ರಚಿಸಿದ್ದರು. ವಾದಿರಾಜ ಶ್ರೀಗಳು ಲಕ್ಷಾಲಂಕಾರ ಗ್ರಂಥವನ್ನು ಬರೆದಿದ್ದು, ಈ ಹಿನ್ನೆಲೆಯಲ್ಲಿ ಪಲಿಮಾರು ಶ್ರೀಗಳ ಹೊಸ ಪುಸ್ತಕ ಪ್ರಕಾಶನ ಕಾರ್ಯ ಶ್ಲಾಘನೀಯ. ನಿತ್ಯ ಪಾರಾಯಣಕ್ಕೆ ಈ ಪುಸ್ತಕಗಳನ್ನೇ ಉಪಯೋಗಿಸುತ್ತೇನೆ ಎಂದರು.

ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಬನ್ನಂಜೆ ರಾಘವೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ವಿಜಯೀಂದ್ರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ತತ್ವ ಸಂಶೋಧನಾ ಸಂಸತ್ ನಿರ್ದೇಶಕ ಡಾ. ವಂಶೀಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಇಂದು ಚೂರ್ಣೋತ್ಸವ: ಜ.15ರಂದು ಹಗಲು ರಥೋತ್ಸವ (ಚೂರ್ಣೋತ್ಸವ) ನಡೆಯಲಿದ್ದು, ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿ ಇರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮರಥೋತ್ಸವ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಪಲ್ಲಪೂಜೆ, ಮಧ್ವ ಸರೋವರದಲ್ಲಿ ಶ್ರೀಕಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವ ನಡೆಯಲಿದೆ. ಈ ಬಾರಿ ಹಗಲು ರಥೋತ್ಸವ ಹಾಗೂ ಸೌರ ಮಧ್ವನವಮಿ ಒಂದೇ ದಿನವಾಗಿದ್ದು, ಉತ್ಸವದ ವೈಭವ ಹೆಚ್ಚಿಸಲಿದೆ.