ಕೇಂದ್ರದ ತಂತ್ರಾಂಶಕ್ಕೆ ಗ್ರಾಪಂ ಕಾಮಗಾರಿ ವಿವರ ಕಡ್ಡಾಯ

ಅವಿನ್ ಶೆಟ್ಟಿ, ಉಡುಪಿ
ಗ್ರಾಮ ಪಂಚಾಯಿತಿಗಳಿಗೆ 14ನೇ ಹಣಕಾಸು ಯೋಜನೆ ಅನುದಾನ ಬಿಡುಗಡೆಗಾಗಿ ಕೇಂದ್ರ ಸರ್ಕಾರ ತನ್ನದೇ ತಂತ್ರಾಂಶದಲ್ಲಿ ಪಂಚಾಯಿತಿಗಳು ಅಭಿವೃದ್ಧಿ ಕಾಮಗಾರಿ ವಿವರಗಳನ್ನು ಅಪ್ಲೋಡ್ ಮಾಡಬೇಕು ಎಂದು ಕಡ್ಡಾಯ ಸೂಚನೆ ಹೊರಡಿಸಿದೆ.

ಆರ್ಥಿಕ ವರ್ಷ ಮುಗಿಯುತ್ತ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಈ ಸೂಚನೆ ಹೊರೆಯಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳು ತಲೆದೋರಬಹುದು ಎಂದು ಗ್ರಾಪಂ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿ ವಿವರವನ್ನು ರಾಜ್ಯ ಸರ್ಕಾರದ ಪಂಚತಂತ್ರ ತಂತ್ರಾಂಶದ ಒಳಗಿನ ವರ್ಕ್‌ಸಾಫ್ಟ್‌ಗೆ ಸಲ್ಲಿಸಲಾಗುತಿತ್ತು. ಈಗ ಕೇಂದ್ರ ಸರ್ಕಾರ ತನ್ನ 14ನೇ ಹಣಕಾಸು ಯೋಜನೆ ಅನುದಾನವನ್ನು ಗ್ರಾ.ಪಂಗಳಿಗೆ ಬಿಡುಗಡೆ ಮಾಡಬೇಕಿದ್ದರೆ ತನ್ನದೇ ಆದ ಪ್ರಿಯ (ಪಿಆರ್‌ಐಎ, ಪಂಚಾಯತ್‌ರಾಜ್ ಇನ್‌ಸ್ಟಿಟ್ಯೂಶನ್ಸ್ ಆಫ್ ಅಕೌಂಟಿಂಗ್ ಸಾಫ್ಟ್‌ವೇರ್) ತಂತ್ರಾಂಶದಲ್ಲಿ ವಿವರ ದಾಖಲಿಸಲು ಕಡ್ಡಾಯ ಮಾಡಿದೆ. ಇದರ ಅನುಷ್ಠಾನ ಇತರೆ ರಾಜ್ಯಗಳಲ್ಲಿ ಆಗಿದ್ದರೂ, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ. ಈಗ ಡಿಸೆಂಬರ್ ತಿಂಗಳಿನಿಂದ ತರಾತುರಿಯಲ್ಲಿ ಸಂಪೂರ್ಣ ಅನುಷ್ಠಾನಕ್ಕೆ ಮುಂದಾಗುತ್ತಿದೆ. ದೇಶದಾದ್ಯಂತ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿ ವಿವರವನ್ನು ಏಕರೂಪ ವ್ಯವಸ್ಥೆಯಲ್ಲಿ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ.

ಹೀಗಿತ್ತು ವ್ಯವಸ್ಥೆ: ಈ ಹಿಂದೆ ರಾಜ್ಯ ಸರ್ಕಾರದ ತಂತ್ರಾಂಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಕ್ರಿಯಾ ಯೋಜನೆ, ಎಸ್ಟಿಮೇಟ್, ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಅನುಮೋದನೆ, ಕಾಮಗಾರಿ ಪ್ರಗತಿ ಛಾಯಾಚಿತ್ರ ಸಹಿತ ವಿವರ, ಗುತ್ತಿಗೆದಾರರ ಸಮಗ್ರ ವಿವರವನ್ನು ಸಲ್ಲಿಸಬೇಕಾಗಿತ್ತು. ತಾಲೂಕು ಪಂಚಾಯಿತಿಯಲ್ಲಿ ಈ ಪ್ರಕ್ರಿಯೆ ಪರಿಶೀಲನೆಗೊಂಡ ಬಳಿಕ ಪಂಚಾಯಿತಿಗಳಿಗೆ ಆರ್ಥಿಕ ಪಾವತಿ ಆದೇಶ ಬರುತ್ತದೆ. ಬಳಿಕ ಗುತ್ತಿಗೆದಾರರಿಗೆ ಪಂಚಾಯಿತಿ ಹಣ ಬಿಡುಗಡೆ ಆಗುತ್ತಿತ್ತು.

ಸಿಕ್ಕಿಲ್ಲ ಲಾಗಿನ್ ಐಡಿ, ಪಾಸ್‌ವರ್ಡ್: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಪ್ರಿಯ ತಂತ್ರಾಂಶದಲ್ಲಿ ಕಾಮಗಾರಿ ವಿವರ ದಾಖಲಿಸಬೇಕು. ಕಳೆದ 3 ವರ್ಷದ ಅನುದಾನ ಬಳಕೆಯ ವಿವರವನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಆದರೆ ಇನ್ನೂ ಪಾಸ್‌ವರ್ಡ್ ಮತ್ತು ಲಾಗಿನ್ ಐಡಿ ಪಂಚಾಯಿತಿಗೆ ನೀಡಲಾಗಿಲ್ಲ. ಡಿಸೆಂಬರ್ ತಿಂಗಳಾರಂಭದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ವಿವರವನ್ನು ತಂತ್ರಾಂಶಕ್ಕೆ ಸಲ್ಲಿಸಬೇಕಿದೆ.

ಅಲ್ಲದೆ ತಂತ್ರಾಂಶ ಬಳಕೆ ಮಾಡುವ ಬಗ್ಗೆ ಪಿಡಿಒ, ಸಿಬ್ಬಂದಿಗೆ ತರಬೇತಿಯನ್ನೂ ನೀಡಿಲ್ಲ, ಇನ್ನು ತಂತ್ರಾಂಶದಲ್ಲಿ ಯಾವ ರೀತಿಯ ತಾಂತ್ರಿಕ ಸಮಸ್ಯೆ ಇರುತ್ತದೆ ಗೊತ್ತಿಲ್ಲ. ಆರ್ಥಿಕ ವರ್ಷದ ಕೊನೆಯಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿದ್ದು ಮಾತ್ರ ಪಿಡಿಒ, ಸಿಬ್ಬಂದಿಗೆ ಮತ್ತಷ್ಟು ಒತ್ತಡ ಹೆಚ್ಚಲು ಕಾರಣವಾಗಿದೆ.

ಗ್ರಾಪಂಗಳಿಗೆ 14ನೇ ಹಣಕಾಸು ಯೋಜನೆಯಲ್ಲಿ ಪ್ರಸ್ತುತ ಆರ್ಥಿಕ ವರ್ಷದ ಬಾಕಿ ಉಳಿದಿರುವ ನವೆಂಬರ್ ತಿಂಗಳ ಅಂತ್ಯದ ಅಭಿವೃದ್ಧಿ ಕಾಮಗಾರಿಗೆ ಹಣ ಪಾವತಿಗೆ ಯಾವುದೇ ಸಮಸ್ಯೆ ಇಲ್ಲ. ಡಿಸೆಂಬರ್‌ನಿಂದ ಪಂಚತಂತ್ರ ತಂತ್ರಾಂಶ ಬಳಕೆ ಬದಲು ಕೇಂದ್ರ ಸರ್ಕಾರದ ಪ್ರಿಯ ತಂತ್ರಾಂಶಕ್ಕೆ ಕಾಮಗಾರಿ ವಿವರ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಅನುಷ್ಠಾನ ಕಾರ್ಯ ನಡೆಯುತ್ತಿದ್ದು, ಗ್ರಾಪಂಗಳಿಗೆ ಯೂಸರ್ ಐಡಿ, ಪಾಸ್‌ವರ್ಡ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
|ಶ್ರೀನಿವಾಸ್ ರಾವ್, ಯೋಜನಾಧಿಕಾರಿ, ಜಿಪಂ ಉಡುಪಿ