ಇಂಡಿ: ಕೇರಳ ರಾಜ್ಯದ ಗ್ರಾಮ ಪಂಚಾಯಿತಿ ವ್ಯವಸ್ಥೆ ದೇಶದಲ್ಲಿಯೇ ಮಾದರಿಯಾಗಿದೆ. ಅಂಥ ವ್ಯವಸ್ಥೆ ನಮ್ಮಲ್ಲಿಯೂ ಆಗಬೇಕು. ಈಗಾಗಲೇ 3 ಬಾರಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಇಂಡಿ ಪುರಸಭೆ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಕೇರಳ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ 13,000 ರೂ. ಗೌರವ ಧನ, ಉಪಾಧ್ಯಕ್ಷರಿಗೆ 7000 ರೂ. ಹಾಗೂ ಸದಸ್ಯರಿಗೆ 3000 ರೂ. ಗೌರವಧನ ನೀಡಲಾಗುತ್ತಿದೆ. ಅದರಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಇದೇ ಮಾದರಿಯನ್ನು ನಮ್ಮ ರಾಜ್ಯದಲ್ಲಿಯೂ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಕಳೆದ 3 ವರ್ಷಗಳಿಂದ ನನ್ನ ವ್ಯಾಪ್ತಿಯ ತಾಲೂಕು ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಗ್ಗೂಡಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಕ್ಷೇತ್ರದ ಶಾಸಕರ ಸಹಕಾರದೊಂದಿಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಕೊರತೆಯಿದ್ದು, ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ನಂದೀಪ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸಿ ಅಬೀದ ಗದ್ಯಾಳ ಮಾತನಾಡಿದರು. ಇಂಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ತಮ್ಮ ಗ್ರಾಮ ಪಂಚಾಯಿತಿಗೆ ಕಟ್ಟಡ ನಿರ್ಮಿಸಲು ಅನುದಾನದ ಅಗತ್ಯವಿದೆ, ರಸ್ತೆ ರಿಪೇರಿ ಮಾಡಬೇಕಿದೆ, ಸ್ವಶಾನಕ್ಕೆ ಸ್ಥಳವಕಾಶ ಬೇಕು, ಶುದ್ಧ ಕುಡಿಯುವ ನೀರಿನ ಘಟಕಗಳ ಅಗತ್ಯವಿದೆ, ಕೆರೆಯಲ್ಲಿ ಹೂಳು ತೆಗೆಸಬೇಕಿದೆ, ಹಳ್ಳಗಳಿಗೆ ಸೇತುವೆ ನಿರ್ಮಿಸಬೇಕಿದೆ, ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಿಸಬೇಕು, ಖಾಸಗಿ ಅನುದಾನರಹಿತ ಶಾಲೆಗಳಿಗೆ ಅನುದಾನ ನೀಡಬೇಕು, ಬಡವರಿಗೆ ಕೂಲಿ ಕೆಲಸಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನು ನಿಯೋಜಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ಇಲಿಯಾಸ ಬೋರಾಮಣಿ, ಭೀಮಣ್ಣ ಕವಲಗಿ, ಶೈಲಜಾ ರಾಠೋಡ, ಗುರನಗೌಡ ಪಾಟೀಲ ಇದ್ದರು. ಪಿಡಿಒ ಬಸವರಾಜ ಬಬಲಾದ ಸ್ವಾಗತಿಸಿದರು. ಎಸ್.ಎಸ್.ಬಿರಾದಾರ ನಿರೂಪಿಸಿದರು.