ವಿಜಯವಾಣಿ ಸುದ್ದಿಜಾಲ ಹುಳಿಯಾರು
ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಸಹಕಾರ ಸಂಘ ಸ್ಥಾಪಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಹೋಬಳಿಯ ಯಳನಾಡು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಆಡಳಿತ ಮಂಡಳಿ ಕಚೇರಿ ಹಾಗೂ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈಗಾಗಲೇ ಕೋರಗೆರೆ, ಬೆಳಗುಲಿ, ತಿಮ್ಲಾಪುರ, ದೊಡ್ಡಬಿದರೆ, ಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ತುರ್ತು ಸಂದರ್ಭದಲ್ಲಿ ರೈತರಿಗೆ ಹಣದ ಅವಶ್ಯಕತೆ ಎದುರಾದಾಗ ಖಾಸಗಿಯವರಿಂದ ದುಬಾರಿ ಬಡ್ಡಿ ದರಕ್ಕೆ ಸಾಲ ತರುವ ಪರಿಸ್ಥಿತಿ ಇತ್ತು. ಈ ಹಣಕಾಸಿನ ಶೋಷಣೆ ತಪ್ಪಿಸಲು 2004ರಲ್ಲಿ ಡಿಸಿಎಂ ಆಗಿದ್ದ ಸಿದ್ಧರಾಮಯ್ಯ ಅವರು ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆ ಜಾರಿಗೊಳಿಸಿದ್ದರು. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ 10 ಗುಂಟೆ ಜಮೀನು ಇರುವ ರೈತನಿಗೂ ಕನಿಷ್ಟ 25 ಸಾವಿರ ರೂ. ಸಾಲ ಕೊಟ್ಟಿದ್ದರಿಂದ ಅನೇಕರು ಕುರಿ, ಹಸು ತಂದು ಬದುಕು ಕಟ್ಟಿಕೊಂಡರು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ರಾಜಣ್ಣ ಅವರು ಸಹಕಾರ ಸಚಿವರಾದ ಮೇಲೆ ಅನೇಕ ರೈತಪರ ಕೆಲಸ ಮಾಡಿದ್ದಾರೆ. ಇಡೀ ಜಿಲ್ಲೆಗೆ 25 ಗೋದಾಮು ಮಂಜೂರಾಗಿದ್ದರೂ ಚಿಕ್ಕನಾಯಕನಹಳ್ಳಿ ತಾಲೂಕಿಗೆ 12 ಗೋದಾಮು ಕೊಟ್ಟಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ ತಾಲೂಕಿನ ರೈತರಿಗೆ ಸಾಲಸೌಲಭ್ಯ ಸಿಗಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಯಳನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ರಾಮಲಿಂಗಯ್ಯ ಪಟೇಲ್, ಗ್ರಾಪಂ ಅಧ್ಯೆ ನಂದಿನಿ ರಂಗಸ್ವಾಮಿ, ಮಾಜಿ ಅಧ್ಯಕ್ಷ ದಿನೇಶ್ ಇದ್ದರು.