More

    ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿಗೆ 22072 ಮಂದಿ ನೋಂದಣಿ

    ತುಮಕೂರು: 2011ರ ಜನಗಣತಿ ಪ್ರಕಾರ ಜಿಲ್ಲೆಯಾದ್ಯಂತ 120601ಕ್ಕೂ ಹೆಚ್ಚು ಪದವೀಧರರಿದ್ದು, ಈವರೆಗೆ ಕೇವಲ 22072 ಪದವೀಧರರು ಮತ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮತಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2020 ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿಗೆ ನೋಂದಣಿ ಸಂಖ್ಯೆಯ ಪ್ರಮಾಣ ಕಡಿಮೆಯಾಗಿದ್ದು, 2016ರ ಅ.31ರೊಳಗೆ ಪದವಿ ಪೂರ್ಣಗೊಳಿಸಿರುವ ಅರ್ಹ ಪದವೀಧರು, ಸರ್ಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿಯನ್ನು ಮತಪಟ್ಟಿಗೆ ನೋಂದಾಯಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.

    ಅರ್ಹ ಪದವೀಧರ ಮತದಾರರು ನಿಗಧಿತ ನಮೂನೆ-18ನ್ನು ಭರ್ತಿ ಮಾಡಿ ಪದವಿ ತೇರ್ಗಡೆ ಪ್ರಮಾಣಪತ್ರ, ಕಾನ್ವೋಕೇಷನ್ ಸರ್ಟಿಫಿಕೇಟ್ ಅಥವಾ ಅನುಚ್ಛೇಧ-3 ಹಾಗೂ ಭಾವಚಿತ್ರವನ್ನು ಸಲ್ಲಿಸುವ ಮೂಲಕ ಮತಪಟ್ಟಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ 2019ರ ಜ.11ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಪದವೀಧರರ ಕ್ಷೇತ್ರದ ಮತಪಟ್ಟಿ ತಯಾರಿಸಲಾಗುವುದು. ಡಿ.7ರಂದು ಕರಡು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದರು.

    ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಉಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ನರಸಿಂಹಮೂರ್ತಿ, ಚುನಾವಣಾ ತಹಸೀಲ್ದಾರ್ ನಾಗಭೂಷಣ್, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಜಿಲ್ಲಾ ನೋಂದಣಾಧಿಕಾರಿ ಎಂ.ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.

    6-8 ರವರೆಗೆ ಮಿಂಚಿನ ನೋಂದಣಿ : ಮತಪಟ್ಟಿ 2020ರ ಪರಿಷ್ಕರಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ 1104451 ಪುರುಷ, 1093094 ಮಹಿಳೆಯರು ಸೇರಿ ಒಟ್ಟು 2197545 ಮತದಾರರು ನೋಂದಣಿಯಾಗಿರುತ್ತಾರೆ. ಕರಡು ಮತಪಟ್ಟಿಗೆ ಸಂಬಂಧಿಸಿದಂತೆ ಜ.15ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಜಿಲ್ಲೆಯಲ್ಲಿ 18 ರಿಂದ 19 ವರ್ಷ ವಯಸ್ಸಿನ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಸಲುವಾಗಿ ಜ.6 ರಿಂದ 8ರವರೆಗೆ 3 ದಿನಗಳ ಕಾಲ ಎಲ್ಲ ಮತಗಟ್ಟೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಶಿಕ್ಷಣ ಸಂಸ್ಥೆ, ಪ್ರಮುಖ ಸ್ಥಳಗಳಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಡಿಸಿ ಚನ್ನಬಸಪ್ಪ ತಿಳಿಸಿದರು.

    ಎಲ್ಲ ರಾಜಕೀಯ ಪಕ್ಷದವರು, ಇಲಾಖಾ ಮುಖ್ಯಸ್ಥರು, ಖಾಸಗಿ ಉದ್ದಿಮೆಗಳ ಮಾಲೀಕರು, ಸರ್ಕಾರಿ ಅರೆ ಸರ್ಕಾರಿ ಕಚೇರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ, ಇತರೆ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಪದವೀಧರರನ್ನು ತಪ್ಪದೇ ಮತಪಟ್ಟಿಗೆ ನೋಂದಾಯಿಸಲು ಕ್ರಮ ಕೈಗೊಳ್ಳಿ.
    ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts