ಇವಿಎಂ ಸಾಗಾಟ ವಾಹನಕ್ಕೆ ಜಿಪಿಎಸ್

ಉಡುಪಿ: ಚುನಾವಣೆ ಏ.18ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ನಡೆಯಲಿದ್ದು, ವ್ಯವಸ್ಥಿತ ಮತದಾನಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದ್ದು, ಪಾರದರ್ಶಕತೆ ಕಾಪಾಡಲು ಮತಗಟ್ಟೆ ಅಧಿಕಾರಿಗಳು ಮತ್ತು ಮತಯಂತ್ರ ಸಾಗಾಟ ವಾಹಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮತದಾನ ಕರ್ತವ್ಯಕ್ಕಾಗಿ 996 ಅಧ್ಯಕ್ಷಾಧಿಕಾರಿ, 996 ಸಹಾಯಕ ಅಧ್ಯಕ್ಷಾಧಿಕಾರಿ, 1972 ಮತಗಟ್ಟೆ ಅಧಿಕಾರಿ, 952 ಡಿ ದರ್ಜೆ ನೌಕರರು, 1367 ಭದ್ರತಾ ಸಿಬ್ಬಂದಿ, 206 ಮೈಕ್ರೋ ಅಬ್ಸರ್ವರ್ ಸಹಿತ 6,489 ಸಿಬ್ಬಂದಿ ನೇಮಿಸಲಾಗಿದೆ.

1379 ಬ್ಯಾಲೆಟ್ ಯುನಿಟ್, 1280 ಕಂಟ್ರೋಲ್ ಯುನಿಟ್, 1477 ವಿವಿ ಪ್ಯಾಟ್‌ಗಳನ್ನು ಚುನಾವಣೆಯಲ್ಲಿ ಉಪಯೋಗಿಸಲಾಗುತ್ತಿದ್ದು, ಮತಯಂತ್ರಗಳ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಬಿಇಎಲ್ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. 54 ಮತಗಟ್ಟೆಗಳಿಗೆ ವೆಬ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿದ್ದು, 15 ಮತಗಟ್ಟೆಗಳಿಗೆ ವೀಡಿಯೋಗ್ರಾಫರ್, 21 ಮತಗಟ್ಟೆಗಳಿಗೆ ಕೇಂದ್ರಿಯ ಭದ್ರತಾ ಪಡೆ ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ 25 ಸಖೀ ಮತಗಟ್ಟೆ , 2 ವಿಶೇಷ ಚೇತನ ಮತಗಟ್ಟೆ, 1 ಎಥ್ನಿಕ್ ಬೂತ್ ತೆರೆಯಲಾಗುವುದು. ಅಂಗವಿಕಲ ಮತದಾರರಿಗೆ ಗಾಲಿಕುರ್ಚಿ, ಬೂತ ಕನ್ನಡಿ, ಬ್ರೈಲ್ ಮಾದರಿ ಮತಪತ್ರ, ರ‌್ಯಾಂಪ್ ಮತ್ತು ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಒದಗಿಸಲಾಗುವುದು ಎಂದರು. ಜಿಲ್ಲೆಯಲ್ಲಿ 1738 ರೌಡಿಶೀಟರ್‌ಗಳಿದ್ದು, ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಹೇಳಿದರು.

Leave a Reply

Your email address will not be published. Required fields are marked *