ಯಾದಗಿರಿ: ಜಿಲ್ಲೆಯಲ್ಲಿ ಕೊರತೆ ಇರುವ ಯೂರಿಯಾ ರಸಗೊಬ್ಬರ ಮತ್ತು ಶೇಂಗಾ ಬೀಜ ಪೂರೈಕೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಕೃಷಿ ಇಲಾಖೆ ಯೋಜನೆಗಳ ಅನುಷ್ಠಾನ ಕುರಿತು ತನಿಖೆ ನಡೆಸಿ ವರದಿ ನೀಡಲು ಮತ್ತು ಸಾಮಾನ್ಯ ಸಭೆಗೆ ಅನುಪಾಲನಾ ವರದಿ ಸಲ್ಲಿಸದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಶಿಲ್ಪಾ ಶಮರ್ಾ ಅವರಿಗೆ ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲವಾದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಪ್ರತಿವರ್ಷ ಕೊನೆಯ ಸ್ಥಾನ ಪಡೆಯುತ್ತಿದೆ. ಕಾರಣ ಶಿಕ್ಷಣ ಇಲಾಖೆ ಅಧಿಕಾರಿಗಳು ಫಲಿತಾಂಶ ಸುಧಾರಣೆ ಹಾಗೂ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಶಿಕ್ಷಕರ ಹುದ್ದೆ ಖಾಲಿ ಇದ್ದಲ್ಲಿ ವಿಷಯವಾರು ಪರಿಣತ ಹೊಂದಿದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ವಿಜ್ಞಾನ ವಿಷಯಕ್ಕೆ ಕಲಾ ವಿಭಾಗದ ಪರಿಣತರನ್ನು ನೇಮಿಸಿದರೆ ಪ್ರಯೋಜನವಿಲ್ಲ ಇಂತಹ ತಾಂತ್ರಿಕ ಕಾರಣಗಳಿಂದ ಶಿಕ್ಷಣ ಗುಣಮಟ್ಟ ಕುಂಠಿತವಾಗುತ್ತಿದೆ. ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಕಲಿಕಾ ವಾತಾವರಣ ನಿಮರ್ಿಸಬೇಕು. ಮಕ್ಕಳಿಗೆ ವಿಶೇಷ ತರಬೇತಿ ನೀಡಬೇಕು ಎಂದು ನಿದರ್ೇಶನ ನೀಡಿದರು.
ಶಶಿಕಲಾ ಕ್ಯಾತನಾಳ ಮಾತನಾಡಿ, ಎಸ್ಸೆಸ್ಸೆಲ್ಸಿಯ ಅರ್ಧದಷ್ಟು ಮಕ್ಕಳಿಗೆ ಪತ್ರಿಕೆ ಮತ್ತು ಪಠ್ಯಪುಸ್ತಕದ ಪಾಠ ಓದಲು ಬರುವುದಿಲ್ಲ. ಅಂಕಿ-ಅಂಶದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳ ತೋರಿಸಿದರೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯಡಿಯಾಪುರ, ಕೆಲ ಮಕ್ಕಳ ಹಾಜರಾತಿ ಸಕರ್ಾರಿ ಶಾಲೆಯಲ್ಲಿ ಇರುತ್ತದೆ. ವಾಸ್ತವದಲ್ಲಿ ಅವರು ಸಕರ್ಾರಿ ಶಾಲೆಗೆ ಬರುವುದಿಲ್ಲ. ಪೋಷಕರು ಖಾಸಗಿ ಶಾಲೆ ಅಥವಾ ಕೋಚಿಂಗ್ಗೆ ಕಳುಹಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ನಾಗಮ್ಮ ಶಿರವಾಳ ಮಾತನಾಡಿ, ಇಲಾಖೆಗೆ 2016ರಲ್ಲಿ ಬಿಡುಗಡೆಯಾದ 54 ಲಕ್ಷ ಅನುದಾನ ವಾಪಸ್ ಹೋಗಿದೆ. ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಶಾಲೆ ಗೋಡೆಗೆ ಹೊಂದಿಕೊಂಡಂತೆ ಮದ್ಯದಂಗಡಿ ತೆರೆಯಲಾಗಿದೆ. ಇದನ್ನು ತೆರವುಗೊಳಿಸಲು ಮನವಿ ಸಲ್ಲಿಸಿ ವರ್ಷ ಕಳೆದಿದೆ. ಕಳೆದ ಸಾಮಾನ್ಯ ಸಭೆಯಲ್ಲಿ ಕ್ರಮಕ್ಕೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಜ್ಜಲ್, ಸಂಬಂಧಿತರು ಕೂಡಲೇ ಮದ್ಯದಂಗಡಿ ತೆರವುಗೊಳಿಸಿ ವರದಿ ಸಲ್ಲಿಸಲು ಸೂಚಿಸಿದರು.
ಡಿಡಿಪಿಐ ಶ್ರೀಶೈಲ್ ಬಿರಾದಾರ ಮಾತನಾಡಿ, ನಿಯಮಿತ ಬಾರದ ಯರಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸುಮತಿಬಾಯಿ ಅವರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 210 ಕಂಪೌಂಡ್ ಕಾಮಗಾರಿ ಮಂಜೂರಾಗಿದ್ದು, ಅದರಲ್ಲಿ 57 ಪೂರ್ಣ, 153 ಕೆಲಸ ಪ್ರಗತಿಯಲ್ಲಿವೆ. ಶೀಘ್ರ ಪೂರ್ಣಗೊಳಿಸಲು ಪಿಆರ್ಇ ವಿಭಾಗದ ಇಂಜಿನಿಯರ್ರನ್ನು ಕೋರಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ತಜ್ಞರಿಂದ ತರಬೇತಿ ಪಡೆದ 20 ತಜ್ಞ ಶಿಕ್ಷಕರ ಮೂಲಕ ಉಳಿದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದೆ ಎಂದು ಅನುಪಾಲನಾ ವರದಿ ಒಪ್ಪಿಸಿದರು.
ಅಧ್ಯಕ್ಷ ವಜ್ಜಲ್ ಮಾತನಾಡಿ, ಕಳೆದ ಕೆಡಿಪಿ ಸಭೆಯಲ್ಲಿ ಸೂಚಿಸಿರುವಂತೆ ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕಾಮಗಾರಿಗಳ ಸ್ಥಳ ಪರಿಶೀಲಿಸಬೇಕು. ಜಿಪಂ ಸದಸ್ಯರ ಗಮನಕ್ಕೆ ತರದೆ ಫಲಾನುಭವಿಗಳ ಆಯ್ಕೆ, ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವುದನ್ನು ಕೈಬಿಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ರೊಟ್ನಡಗಿ, ಉಪ ಕಾರ್ಯದಶರ್ಿ ಮುಕ್ಕಣ್ಣ ಕರಿಗಾರ ಇತರರಿದ್ದರು.