ನೆರೆ ಆಘಾತದಲ್ಲಿ ಗಣೇಶ ಚತುರ್ಥಿ ಸಂಭ್ರಮ

ಚಿಕ್ಕಮಗಳೂರು: ಗೌರಿ ಹಾಗೂ ಗಣೇಶನ ಹಬ್ಬ ಒಂದೇ ದಿನ ಬಂದಿದ್ದು, ನಗರದಲ್ಲಿ ಹಬ್ಬದಾಚರಣೆಗೆ ಭಾನುವಾರ ಖರೀದಿ ಭರಾಟೆ ಜೋರಾಗಿತ್ತು.

ಅತಿವೃಷ್ಟಿ ಸಾಕಷ್ಟು ಜನರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದರೆ, ಹಬ್ಬಕ್ಕೆ ಹೂವು, ಹಣ್ಣು ಮತ್ತಿತರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದರೂ ಜನರಲ್ಲಿ ಉತ್ಸಾಹ ಕುಂದಿಲ್ಲ. ನಗರದ ಹನುಮಂತಪ್ಪ ವೃತ್ತ, ತೊಗರಿ ಹಂಕಲ್ ವೃತ್ತ, ಆಜಾದ್​ಪಾರ್ಕ್ ವೃತ್ತ ಹಾಗೂ ಎಂ.ಜಿ.ರಸ್ತೆಯ ಕೆಲವು ಕಡೆಗಳಲ್ಲಿ ಜನರು ಅಗತ್ಯವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡು ಬಂದಿತು.

ಗೌರಿ ಪೂಜೆಗಾಗಿ ಅರಿಶಿಣ-ಕುಂಕುಮದ ಜತೆಗೆ ಬಳೆಗಳ ಖರೀದಿ ಜೋರಾಗಿ ನಡೆಯಿತು. ಗೌರಿ ಹಾಗೂ ಗಣೇಶನ ಮೂರ್ತಿಗಳನ್ನು ಖರೀದಿಸಿದರು.

ಉತ್ಸವ ಸಮಿತಿಗಳು ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ತಳಿರು-ತೋರಣಗಳಿಂದ ದೇವಾಲಯಗಳು, ನಿವಾಸಗಳು ಸಿಂಗಾರಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ದರವೇನೂ ಕಡಿಮೆ ಇರಲಿಲ್ಲ. ಮಾರೊಂದಕ್ಕೆ ಸೇವಂತಿಗೆ ಹೂವು 100 ರೂ., ಮಲ್ಲಿಗೆ 80 ರಿಂದ 100 ರೂ.ಗೆ ಮಾರಾಟವಾಗುತ್ತಿದ್ದರೆ, ಚೆಂಡು ಮಾರೊಂದಕ್ಕೆ 30 ರಿಂದ 60 ರೂ.ಗೆ ಬಿಕರಿಯಾಗುತ್ತಿತ್ತು.

ಹಣ್ಣುಗಳು ಕೆ.ಜಿ.ಗೆ ಸೇಬು 80, 120, 140 ರೂ., ದ್ರಾಕ್ಷಿ 150 ರಿಂದ 200 ರೂ., ದಾಳಿಂಬೆ 140 ರೂ., ಸಪೋಟ 80 ರೂ., ಸೀಬೆ 120 ರೂ., ಪೂಜೆ ಬಾಳೆ 100 ರೂ.ಗೆ ವಿಲೇವಾರಿಯಾಗುತ್ತಿತ್ತು.