ಅಡಕೆ ಮಂಡಳಿ ರಚನೆ ಸರ್ಕಾರ ಪರಿಶೀಲನೆ

< ಮುಂದಿನ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ>

ಪಿ.ಬಿ.ಹರೀಶ್ ರೈ ಮಂಗಳೂರು
ಅಡಕೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರವೇ ನೇಮಿಸಿದ ತಾಂತ್ರಿಕ ತಜ್ಞರ ಸಮಿತಿ ವರದಿ ಸಲ್ಲಿಸಿ ಮೂರು ವರ್ಷ ಕಳೆದಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಂಡಳಿ ರಚಿಸುವ ಭರವಸೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಮೈತ್ರಿ ಸರ್ಕಾರ ಮಂಡಳಿ ರಚನೆ ಬಗ್ಗೆ ಪರಿಶೀಲನೆ ನಡೆಸಿದೆ ಎನ್ನುವ ಮಾಹಿತಿ ಇದೆ. ಮುಂದಿನ ಬಜೆಟ್‌ನಲ್ಲಿ ಅಡಕೆ ಮಂಡಳಿ ಘೋಷಣೆಯಾಗುವ ನಿರೀಕ್ಷೆ ಇದೆ.
ಕೃಷಿ ಬೆಲೆ ಆಯೋಗದ ಶಿಫಾರಸಿನ ಮೇರೆಗೆ ಅಡಕೆ ಮಂಡಳಿ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ವರದಿ ಸಲ್ಲಿಸಲು ಬಾಗಲಕೋಟ ತೋಟಗಾರಿಕೆ ವಿವಿ ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಅಧ್ಯಕ್ಷತೆಯ ತಾಂತ್ರಿಕ ತಜ್ಞರ ಸಮಿತಿಯನ್ನು ರಾಜ್ಯ ಸರ್ಕಾರ 2015ರಲ್ಲಿ ರಚಿಸಿತ್ತು. ಮ್ಯಾಮ್ಕೊಸ್ ಅಧ್ಯಕ್ಷರು, ಕ್ಯಾಂಪ್ಕೊ ಅಧ್ಯಕ್ಷರು, ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥರು ಸಹಿತ ಒಟ್ಟು 14 ಮಂದಿ ಸಮಿತಿ ಸದಸ್ಯರಾಗಿದ್ದರು. ವಿವಿಧ ಮೂಲಗಳಿಂದ ಅಭಿಪ್ರಾಯ ಕ್ರೋಡೀಕರಿಸಿದ ಸಮಿತಿ ಅಡಕೆ ಮಂಡಳಿ ಸ್ಥಾಪನೆ ಕುರಿತು ಎಂಟು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಸಮಿತಿ ಶಿಫಾರಸು: ಅಡಕೆ ಬೆಳೆಯಲ್ಲಿ ಮೌಲ್ಯವರ್ಧನೆ, ಪರ್ಯಾಯ ಬಳಕೆಗೆ ಸಂಬಂಧಿಸಿ ಸಂಶೋಧನೆ, ಅಡಕೆ ಬೆಳೆ ವಲಯ ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆ, ರೋಗ ಮತ್ತು ಕೀಟ ನಿರ್ವಹಣೆ, ಅಡಕೆಗೆ ಉದ್ಯಮದ ಸ್ಥಾನಮಾನ ಒದಗಿಸಿಕೊಡಲು ಮಂಡಳಿ ಪೂರಕವಾಗಲಿದೆ. ಅಡಕೆ ರಫ್ತು ಮೂಲಕ ವಿದೇಶಿ ವಿನಿಯಮ ಹೆಚ್ಚಳ, ಮಾರುಕಟ್ಟೆ ಬಲವರ್ಧನೆ ಮೂಲಕ ಬೆಲೆ ಸ್ಥಿರೀಕರಣ, ಅಡಕೆ ಬೆಳೆ ಅವಲಂಬಿತ ಸಣ್ಣ ಮತ್ತು ಅತೀ ಸಣ್ಣ ರೈತರ ಶ್ರೇಯೋಭಿವೃದ್ಧಿಯಲ್ಲಿ ಮಂಡಳಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿತ್ತು.
* ಬೆಲೆ ಕುಸಿತ ಸಮಸ್ಯೆ: ಕರ್ನಾಟಕದಲ್ಲಿ 2.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ದೇಶದ ಶೇ.49) ಅಡಕೆ ಬೆಳೆಯಿದ್ದು, 4.48 ಲಕ್ಷ ಟನ್ ಉತ್ಪಾದನೆಯೊಂದಿಗೆ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ. ವಿದೇಶಿ ವಿನಿಮಯ, ಜೀವನೋಪಾಯ ಹಾಗೂ ಉದ್ಯೋಗಳಿಗೆ ಸಾಕಷ್ಟು ದೊಡ್ಡ ಕೊಡುಗೆ ಹೊರತಾಗಿಯೂ ಅಡಕೆ ಬೆಳೆಯಲ್ಲಿ ರೋಗಗಳ ಬಾಧೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಲೆ ಕುಸಿತ, ಆಮದು ಹೆಚ್ಚಳ ಸಹಿತ ಹಲವು ಸಮಸ್ಯೆಗಳನ್ನು ಕೃಷಿಕರು ಎದುರಿಸುತ್ತಿದ್ದಾರೆ. ಕಾಫಿ, ತೆಂಗು, ಟೀ, ಸಾಂಬಾರು ಬೆಳೆಗಳು, ನಾರು, ತಂಬಾಕು ಮತ್ತು ರೇಷ್ಮೆ ಬೆಳಗಳ ಉತ್ತೇಜನ ಹಾಗೂ ಬೆಳೆಗಾರರ ಹಿತ ರಕ್ಷಣೆಗೆ ವಿವಿಧ ಕಾಯ್ದೆಗಳ ಮೂಲಕ ಮಂಡಳಿ ರಚಿಸಲಾಗಿದೆ. ಇದೇ ಮಾದರಿಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆಗಳ ನಿರ್ವಹಣೆಗೆ ಮಂಡಳಿ ರಚನೆ ಸೂಕ್ತ ಪರಿಹಾರ ನೀಡಬಲ್ಲದು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದರು.

ಅಡಕೆ ಮಂಡಳಿ ರಚಿಸಲು ನೀಡಿದ ವರದಿ ಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಲನೆಯಲ್ಲಿದೆ. ಅಡ್ಡಿ ಆತಂಕಗಳು ಮತ್ತು ಕಾರ್ಯಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಮಂಡಳಿ ರಚನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಿಲ್ಲ.
|ಎಂ.ಸಿ.ಮನಗೂಳಿ, ತೋಟಗಾರಿಕಾ ಸಚಿವ

ಅಡಕೆ ಮಂಡಳಿ ರಚನೆ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸತತವಾಗಿ ಸರ್ಕಾರದ ಗಮನ ಸೆಳೆದಿದ್ದೇನೆ. ಪ್ರಸ್ತುತ ಮಂಡಳಿ ರಚನೆ ಪ್ರಸ್ತಾವನೆ ಸರ್ಕಾರದ ಮುಂದಿದೆ ಎನ್ನುವ ಉತ್ತರ ಕಳೆದ ಅಧಿವೇಶನದಲ್ಲಿ ದೊರೆತಿದೆ. 2018-19ರ ಬಜೆಟ್‌ನಲ್ಲಿ ಸರ್ಕಾರ ಅಡಕೆ ಮಂಡಳಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಂಡಳಿಯ ಕೇಂದ್ರ ಕಚೇರಿಯನ್ನು ದಕ್ಷಿಣ ಕನ್ನಡದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಲಾಗಿದೆ.
|ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ

ಅಡಕೆ ಮಂಡಳಿ ರಚನೆಯಿಂದ ಕೃಷಿಕರಿಗೆ ಪ್ರಯೋಜವಾಗುತ್ತದೆ ಎನ್ನುವ ನಿರೀಕ್ಷೆ ಇಲ್ಲ. ಐಎಎಸ್ ಅಧಿಕಾರಿಗಳು ಇರುವ ಮಂಡಳಿ ರಚಿಸಿದರೆ ಸರ್ಕಾರದ ಹಣ ಮಾತ್ರ ಖರ್ಚಾಗಬಹುದು. ಹೆಚ್ಚು ರೈತರ ಪ್ರಾತಿನಿಧ್ಯ ಒಳಗೊಂಡ ಮಂಡಳಿ ರಚಿಸಿದರೆ ಪ್ರಯೋಜನವಾಗಬಹುದು.
|ಕೊಂಕೋಡಿ ಪದ್ಮನಾಭ, ಸಹಕಾರಿ ತಜ್ಞ