ಚೀನಾ ಗಡಿಯಲ್ಲಿ 44 ರಸ್ತೆಗಳನ್ನು ನಿರ್ಮಿಸಲಿದೆ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಗಡಿಯಲ್ಲಿ 44 ಪ್ರಮುಖ ರಸ್ತೆಗಳು ಹಾಗೂ ಪಾಕಿಸ್ತಾನ ಗಡಿಯಲ್ಲಿ 2100 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲ ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲುಡಿ) 2018-19ನೇ ವಾರ್ಷಿಕ ವರದಿ ಪ್ರಕಟವಾಗಿದೆ. ಅದರಲ್ಲಿ ಚೀನಾ ಗಡಿಯಲ್ಲಿ ಸೇನೆಯ ಓಡಾಟಕ್ಕೆ ಮತ್ತು ತುರ್ತು ಸಂದರ್ಭದಲ್ಲಿ ಸೇನೆ ಜಮಾವಣೆಗೆ ಅನುಕೂಲವಾಗುವಂತೆ ತಂತ್ರಗಾರಿಕೆಯಿಂದ ಮಹತ್ವ ಪಡೆದಿರುವ 44 ಪ್ರಮುಖ ರಸ್ತೆಗಳನ್ನು ಸುಮಾರು 21,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿರುವುದಾಗಿ ವರದಿ ತಿಳಿಸಿದೆ.

ಚೀನಾ ಭಾರತ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ಹೆಚ್ಚಿನ ಮಹತ್ವ ನೀಡಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ಗಡಿಯಲ್ಲಿ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ರಸ್ತೆ ನಿರ್ಮಿಲಾಗುವುದು ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಜತೆಗೆ ಸುಮಾರು 5400 ಕೋಟಿ ರೂ. ವೆಚ್ಚದಲ್ಲಿ ಪಾಕಿಸ್ತಾನ ಗಡಿಯಲ್ಲಿ ಒಟ್ಟು 2100 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಯೋಜನೆ ರೂಪಿಸಿದೆ. (ಏಜೆನ್ಸೀಸ್​)

One Reply to “ಚೀನಾ ಗಡಿಯಲ್ಲಿ 44 ರಸ್ತೆಗಳನ್ನು ನಿರ್ಮಿಸಲಿದೆ ಕೇಂದ್ರ ಸರ್ಕಾರ”

  1. ಇದನ್ನು ನಾನು ಅನುಮೋದಿಸುತ್ತೇನೆ. ಶತ್ರುಗಳು ಬಾಲ ಬಿಚ್ಚಲು ಬಿಡಲೇಬಾರದು. ಶುಭವಾಗಲಿ!

Leave a Reply

Your email address will not be published. Required fields are marked *