ಸರ್ಕಾರ-ಆರ್​ಬಿಐ ಹಗ್ಗಜಗ್ಗಾಟದ ಹಕೀಕತ್ ಏನು?

ಆರ್ಥಿಕ ಸುಧಾರಣೆ ಸೇರಿದಂತೆ ಕೆಲ ನೀತಿಗಳ ಬಗ್ಗೆ ಸರ್ಕಾರ ಮತ್ತು ಆರ್​ಬಿಐ ನಡುವೆ ಬಿಕ್ಕಟ್ಟು ಉಲ್ಬಣವಾಗಿದ್ದು, ಕೇಂದ್ರೀಯ ಬ್ಯಾಂಕ್​ನ ಸೆಕ್ಷನ್ 7ರ ಅನ್ವಯ ಕೇಂದ್ರ ಸರ್ಕಾರ ಹಲವು ಪತ್ರಗಳನ್ನು ಬರೆದಿದೆ. ಈ ಬಿಕ್ಕಟ್ಟಿಗೆ ಮೂಲಕಾರಣ ಏನು? ಇವುಗಳ ಪರಿಣಾಮ ಏನು? ಈ ಕುರಿತಾದ ವಿವರ ಇಲ್ಲಿದೆ.

ಬಿಕ್ಕಟ್ಟಿಗೇನು ಕಾರಣ?

ಆರ್ಥಿಕ ನೀತಿಗಳ ಅಥವಾ ಯೋಜನೆಗಳ ರೂಪುರೇಷೆಯ ಸಂದರ್ಭದಲ್ಲಿ ಆರ್​ಬಿಐ ತನ್ನ ಇಶಾರೆಗೆ ತಕ್ಕಂತೆ ವರ್ತಿಸಲಿ ಎಂದು ಕೇಂದ್ರ ಸರ್ಕಾರ ಬಯಸುವುದು ವಾಡಿಕೆ. ಈ ಗ್ರಹಿಕೆ ಇಟ್ಟುಕೊಂಡು ಆರ್​ಬಿಐ ಕಾಯ್ದೆಯ ಪರಿಚ್ಛೇದ 7ರ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಆರ್​ಬಿಐಗೆ ಒಂದಷ್ಟು ಸೂಚನೆ/ನಿರ್ದೇಶನಗಳನ್ನು ರವಾನಿಸಿದೆ. ದುರ್ಬಲ ಬ್ಯಾಂಕುಗಳ ಬಂಡವಾಳದ ಅಗತ್ಯಗಳು, ಬ್ಯಾಂಕಿಂಗೇತರ ವಿತ್ತೀಯ ಸಂಸ್ಥೆಗಳ ಲಿಕ್ವಿಡಿಟಿ, ಸಣ್ಣ ಹಾಗೂ ಮಧ್ಯಮ ಕಂಪನಿಗಳಿಗೆ ಸಾಲನೀಡಿಕೆ ಇವೇ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರವು ಆರ್​ಬಿಐಗೆ ಒಂದಷ್ಟು ಪತ್ರಗಳನ್ನು ಬರೆದಿತ್ತು. ಇಂಥ ಕ್ರಮಕ್ಕೆ ಮುಂದಾಗುವಾಗ ಅದು ಆರ್​ಬಿಐ ಗವರ್ನರ್ ಜತೆ ಚರ್ಚೆ/ಸಮಾಲೋಚನೆ ನಡೆಸಬೇಕಿತ್ತು. ಆದರೆ, ಸಾರ್ವಜನಿಕ ಹಿತರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ, ಹೀಗೆ ಯಾವತ್ತೂ ಬಳಸದಿದ್ದ ಸದರಿ ಕಾಯ್ದೆಯ ನಿಯಮಗಳ ಬಲದೊಂದಿಗೆ ಹೀಗೆ ನಿರ್ದೇಶನ ನೀಡಿರುವುದರಿಂದ ಊರ್ಜಿತ್ ಪಟೇಲ್ ಸಹಜವಾಗೇ ಮುನಿಸಿಕೊಂಡಿದ್ದಾರೆ. ಆರ್​ಬಿಐನ ಅಧಿಕಾರದಲ್ಲಿ ಸರ್ಕಾರ ಹೀಗೆ ಹಸ್ತಕ್ಷೇಪ ಮಾಡುವುದು ಅಥವಾ ಆದರ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವುದು ಪಟೇಲ್ ಅವರಿಗೆ ಅಪಥ್ಯವಾಗಿ ಕಂಡಿದೆ, ಅದೇ ಸರ್ಕಾರ-ಆರ್​ಬಿಐ ನಡುವಿನ ಬಿಕ್ಕಟ್ಟಿಗೆ ಮೂಲವಾಗಿದೆ.

ವಿವಾದದ ಹಾದಿ ಹೊಸದೇನಲ್ಲ

ಸರ್ಕಾರ-ಆರ್​ಬಿಐ ನಡುವಿನ ವಿವಾದ ಹೊಸದೇನಲ್ಲ; ಸ್ವಾತಂತ್ರ್ಯಾನಂತರದಲ್ಲಿ ಸುದೀರ್ಘ ಅವಧಿಗೆ (1949-57) ಆರ್​ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯ ಬೆನೆಗಲ್ ರಾಮರಾವ್ ಕೂಡ ಅಂದಿನ ವಿತ್ತ ಸಚಿವ ಟಿ.ಟಿ. ಕೃಷ್ಣಮಾಚಾರಿಯವರೊಂದಿಗಿನ ಘರ್ಷಣೆಯಿಂದಾಗಿ ಹುದ್ದೆಯನ್ನು ತ್ಯಜಿಸಬೇಕಾಗಿ ಬಂದಿತ್ತು. ಸಂಪುಟ ಸಹೋದ್ಯೋಗಿಯ ಬೆನ್ನಿಗೆ ನಿಂತ ಪ್ರಧಾನಿ ಜವಾಹರಲಾಲ್ ನೆಹರು, ‘ಆರ್​ಬಿಐಗೂ ಉನ್ನತ ಸ್ಥಾನಮಾನ ಮತ್ತು ಹೊಣೆಗಾರಿಕೆಗಳಿವೆ ಎಂಬುದರಲ್ಲೇನೂ ಸಂಶಯವಿಲ್ಲ; ಅದು ಸರ್ಕಾರಕ್ಕೆ ಸಲಹೆ ನೀಡುವುದರ ಜತೆಜತೆಗೆ, ಸರ್ಕಾರಕ್ಕೆ ಅನುಸಾರವಾಗಿಯೂ ನಡೆದುಕೊಂಡು ಹೋಗಬೇಕಾಗುತ್ತದೆ’ ಎಂದು ಪತ್ರ ಬರೆದಿದ್ದರಂತೆ! ಟಿ.ಟಿ. ಕೃಷ್ಣಮಾಚಾರಿ 1964ರ ಏಪ್ರಿಲ್​ನಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತ, ‘ಆರ್​ಬಿಐಗೆ ತರುವಾಯದಲ್ಲಿ ಬಂದಿರುವ ಗವರ್ನರ್​ಗಳು, ತಮ್ಮ ಮೇಲಿನ ಹೆಚ್ಚುವರಿ ಹೊಣೆಗಾರಿಕೆಗಳಿಗೆ ಹೆಗಲುಕೊಡುವ ನಿಟ್ಟಿನಲ್ಲಿ ಸಮರ್ಥರಾಗಿರುವುದು ನನಗೆ ಖುಷಿ ತಂದಿದೆ…’ ಎಂದು ಟಾಂಗ್ ಕೊಟ್ಟಿದ್ದರು. ಇನ್ನು, ರಾಷ್ಟ್ರದಲ್ಲಿ ತುರ್ತಪರಿಸ್ಥಿತಿ ಜಾರಿಯಾಗಿ ಒಂದೆರಡು ತಿಂಗಳ ನಂತರ ಆರ್​ಬಿಐ ಗವರ್ನರ್ ಆಗಿ ಇಂದಿರಾ ಗಾಂಧಿ ಸರ್ಕಾರದಿಂದ ನೇಮಕಗೊಂಡಿದ್ದ ಕೆ.ಆರ್. ಪುರಿ, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ 1977ರ ಮೇ ತಿಂಗಳಲ್ಲಿ ಹುದ್ದೆಯಿಂದ ಹೊರನಡೆಯಬೇಕಾಯಿತು. ಇಷ್ಟೇ ಅಲ್ಲ, 1985ರಲ್ಲಿ ಗವರ್ನರ್ ಆಗಿ ನೇಮಕಗೊಂಡು, ಅಧಿಕಾರಾವಧಿ ಮುಗಿದ ನಂತರವೂ ‘ವಿಸ್ತರಣೆ-ಭಾಗ್ಯ’ ಪಡೆದಿದ್ದ ಆರ್.ಎನ್. ಮಲ್ಹೋತ್ರಾ, ಚಂದ್ರಶೇಖರ್ ಪ್ರಧಾನಮಂತ್ರಿಯಾದ ನಂತರ 1990ರಲ್ಲಿ ಹುದ್ದೆಯನ್ನು ಬಿಡಬೇಕಾಗಿ ಬಂತು.

ಕೊಡು-ಕೊಳ್ಳುವ ನೀತಿ

ಸರ್ಕಾರ ಮತ್ತು ಆರ್​ಬಿಐ ನಡುವೆ ಹೀಗೊಂದು ಬಿಕ್ಕಟ್ಟು ರೂಪುಗೊಂಡಾಗಲೂ, ಸೂಕ್ಷ್ಮತೆಯೊಂದಿಗೆ ಅದನ್ನು ನಿಭಾಯಿಸಿದ ನಿದರ್ಶನಗಳಿವೆ. ವಿತ್ತೀಯ ನೀತಿ-ನಿರೂಪಕರ ಜತೆಗಿನ ಅಭಿಪ್ರಾಯಭೇದಗಳನ್ನು ಹೊಮ್ಮಿಸುವಾಗಲೂ ಭಾಷಾಬಳಕೆಯಲ್ಲಿ ಸಂಯಮ ಕಾಯ್ದುಕೊಂಡ ಹಾಗೂ ಬಹಿರಂಗವಾಗಿ ಕೆಂಡಕಾರುವ ಪ್ರವೃತ್ತಿಯನ್ನು ಹತ್ತಿಕ್ಕಿದ ಆರ್​ಬಿಐ ಗವರ್ನರ್​ಗಳು ಸಾಕಷ್ಟಿದ್ದಾರೆ. ‘ಅತಿರೇಕದ ನಿರ್ಬಂಧ ಹೇರಿದಾಗ ಅಥವಾ ಮೂಲೆಗುಂಪಾಗಿಸಲ್ಪಟ್ಟಾಗ ನಿಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕೆಂಬುದೇನೋ ಸರಿ; ಆದರೆ ಇಂಥ ಅಭಿವ್ಯಕ್ತಿಯ ವೇಳೆ ಪದಗಳನ್ನು ಎಚ್ಚರದಿಂದ ಬಳಸಬೇಕು’ ಎಂಬ ಆರ್​ಬಿಐ ಮಾಜಿ ಗವರ್ನರ್ ಒಬ್ಬರ ಮಾತು ಇಲ್ಲಿ ಉಲ್ಲೇಖನೀಯ. 1982-85ರ ಅವಧಿಯಲ್ಲಿ ಆರ್​ಬಿಐ ಗವರ್ನರ್ ಆಗಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಸರ್ಕಾರದೊಂದಿಗಿನ ಮಾತುಕತೆಗಳು ಹೇಗಿರಬೇಕು ಎಂಬುದಕ್ಕೊಂದು ಒಳನೋಟ ನೀಡಿದ್ದಾರೆ- ‘ಇಲ್ಲಿ ಯಾವಾಗಲೂ ಪ್ರಯೋಜನಕ್ಕೆ ಬರುವುದು ‘ಕೊಡು-ಕೊಳ್ಳುವ’ ಚಿತ್ತಸ್ಥಿತಿ; ನಾನು ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿ ಬರುತ್ತಿತ್ತು. ಆರ್​ಬಿಐ ಗವರ್ನರ್ ಎಂದಮಾತ್ರಕ್ಕೆ ಆತ ಅಧಿಕಾರದಲ್ಲಿರುವ ಅರ್ಥ ಸಚಿವರಿಗಿಂತ ಪರಮೋಚ್ಚನೇನಲ್ಲ’ ಎನ್ನುತ್ತಾರೆ ಮನಮೋಹನ್ ಸಿಂಗ್.

ಮುಂದೇನು?

ಬಿಕ್ಕಟ್ಟು ತಾರಕಕ್ಕೇರಿರುವ ಈ ಸಂದರ್ಭದಲ್ಲಿ, 1934ರ ಆರ್​ಬಿಐ ಕಾಯ್ದೆಯ ಪರಿಚ್ಛೇದ 7ರ ಅನುಸಾರ ತನಗಿರುವ ಅಧಿಕಾರವನ್ನು ಚಲಾಯಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ಕ್ರಮಗಳಿಗೆ ಮುಂದಾಗುವಂತೆ ಆರ್​ಬಿಐಗೆ ನಿರ್ದೇಶನ ನೀಡಲು ಸರ್ಕಾರಕ್ಕೆ ಅನುವುಮಾಡಿಕೊಡುವ ಉಪಬಂಧ ಇದಾಗಿದೆ. ಆರ್​ಬಿಐ ಮಾತ್ರವಲ್ಲದೆ, ಮಿಕ್ಕ ಇತರ ನಿಯಂತ್ರಕ ಪ್ರಾಧಿಕಾರಗಳಿಗೆ ಸಂಬಂಧಿಸಿಯೂ ಅಧಿಕಾರ ಚಲಾಯಿಸಲು ಅವಕಾಶ ಕಲ್ಪಿಸುವ ಈ ಉಪಬಂಧವನ್ನು ಸರ್ಕಾರ ಇದುವರೆಗೂ ಬಳಸಿಕೊಂಡಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಸರ್ಕಾರದ ಈ ನಡೆಯಿಂದ ಅಸಮಾಧಾನಗೊಂಡಿರುವ ಆರ್​ಬಿಐ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ, ‘ಆರ್​ಬಿಐಗಿರುವ ಸ್ವಾತಂತ್ರ್ಯಕ್ಕೆ ಬೆಲೆಕೊಡದ ಸರ್ಕಾರಗಳು, ಹಣಕಾಸು ಮಾರುಕಟ್ಟೆಗಳ ಕಡುಕೋಪಕ್ಕೆ ಇವತ್ತಲ್ಲ ನಾಳೆ ಗುರಿಯಾಗಬೇಕಾಗುತ್ತದೆ; ಆರ್ಥಿಕತೆಗೇ ಕೊಳ್ಳಿಯಿಡುವ ಇಂಥ ಕ್ರಮದಿಂದಾಗಿ ಮಹತ್ವದ ನಿಯಂತ್ರಕ ಸಂಸ್ಥೆಯೊಂದನ್ನು ಒಳಗೊಳಗೇ ಹಾಳುಮಾಡಿದಂತಾಯಿತಲ್ಲ ಎಂದು ಅವು ನಂತರ ಪಶ್ಚಾತ್ತಾಪ ಪಡುವಂತಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಅನಿವಾರ್ಯ ಕ್ರಮ

ಬಿಕ್ಕಟ್ಟು ತೀವ್ರವಾಗಿರುವ ಸಂದರ್ಭದಲ್ಲೂ ಮಾತುಕತೆಯಲ್ಲಿ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ನಿರಾಕರಿಸುತ್ತಿರುವ ಊರ್ಜಿತ್ ಪಟೇಲ್, ಬ್ಯಾಂಕರ್​ಗಳು, ಉದ್ಯಮ ವಲಯದವರು ಹಾಗೂ ಮಾರುಕಟ್ಟೆಯ ಅತಿರಥ-ಮಹಾರಥರಿಗೂ ಲಭ್ಯವಾಗದಿರುವ ಕಾರಣದಿಂದ ವಿಧಿಯಿಲ್ಲದೆ ಪರಿಚ್ಛೇದ 7ರಡಿ ಲಭ್ಯವಿರುವ ಅಧಿಕಾರವನ್ನು ಚಲಾಯಿಸಬೇಕಾಗಿ ಬಂದಿದೆ ಎಂಬುದು ಸರ್ಕಾರದ ವಿವರಣೆ. ಇದರನುಸಾರ ಸರ್ಕಾರದೊಂದಿಗಿನ ಆರ್​ಬಿಐ ಸಮಾಲೋಚನೆ ಹಾಗೂ ಔಪಚಾರಿಕ ಚರ್ಚೆಗಳ ಸಂದರ್ಭದಲ್ಲಿ ಆರ್​ಬಿಐ ‘ಡೋಲಾಯಮಾನವಾಗಿ’ ವರ್ತಿಸಿದಲ್ಲಿ, ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ನಿರ್ದೇಶನ ನೀಡಲಾಗುತ್ತದೆ ಮತ್ತು ಮುಂದಿನ ಸಭೆಯಲ್ಲಿ 15ಕ್ಕೂ ಹೆಚ್ಚಿನ ಚರ್ಚಾವಿಷಯಗಳ ಕುರಿತು ನಿರ್ದೇಶಕರ ಮಂಡಳಿ ರ್ಚಚಿಸಲಿದೆ.