ಉರ್ಜಿತ್ ಪದತ್ಯಾಗ?

ನವದೆಹಲಿ: ಸಾಲ ಹಂಚಿಕೆ ವಿಚಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಆರಂಭಗೊಂಡಿರುವ ಸಂಘರ್ಷ ಬುಧವಾರ ಇನ್ನಷ್ಟು ಉಲ್ಬಣಿಸಿದೆ. ಆರ್​ಬಿಐಯನ್ನು ನಿಯಂತ್ರಿಸುವ ಉದ್ದೇಶದಿಂದ ಸೆಕ್ಷನ್ 7ರ ಅಸ್ತ್ರ ಪ್ರಯೋಗಿಸಲು ಕೇಂದ್ರ ಸರ್ಕಾರ ಚಿಂತನೆ ಆರಂಭಿಸಿರುವುದು ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರನ್ನು ಕೆರಳಿಸಿದೆ. ಒಂದೊಮ್ಮೆ ಸೆಕ್ಷನ್ 7 ಜಾರಿಯಾದಲ್ಲಿ ಇಂಥ ಕಠಿಣ ಕ್ರಮ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಗಲಿದೆ. ಹೀಗಾಗಿ ಸಂಭಾವ್ಯ ಮುಜುಗರದಿಂದ ಪಾರಾಗಲು ರಾಜೀನಾಮೆ ನೀಡಲು ಉರ್ಜಿತ್ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.

ಏನಿದು ಬಿಕ್ಕಟ್ಟು

2008 ಹಾಗೂ 2014ರ ನಡುವಿನ ಅವಧಿಯಲ್ಲಿ ಬೇಕಾಬಿಟ್ಟಿ ಸಾಲ ವಿತರಣೆ ಆಗುತ್ತಿದ್ದರೂ ಆರ್​ಬಿಐ ಅದನ್ನು ತಡೆಯದೇ ಇದ್ದುದರಿಂದಾಗಿ ಬ್ಯಾಂಕಿಂಗ್ ವಲಯಕ್ಕೆ ಕೆಟ್ಟಕಾಲ ಎದುರಾಗುವಂ ತಾಯಿತೆಂಬುದು ಕೇಂದ್ರದ ಆರೋಪ. ಇದರ ಜತೆಗೆ ಬ್ಯಾಂಕೇತರ ಹಣಕಾಸು ವಲಯಕ್ಕೆ ಹಣ ಪೂರೈಕೆ, ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಯೂ ಸರ್ಕಾರ ಮತ್ತು ಆರ್​ಬಿಐ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಏನಿದು ಸೆಕ್ಷನ್ 7

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಆರ್​ಬಿಐಗೆ ನಿರ್ದೇಶನ ನೀಡುವ ಅಧಿಕಾರವನ್ನು ಆರ್​ಬಿಐ ಕಾಯ್ದೆ 7ನೇ ಸೆಕ್ಷನ್ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಈ ಕಾಯ್ದೆಯ ಮೊದಲ ಅಂಶದಂತೆ, ಸಲಹೆ, ಸೂಚನೆ ನೀಡಿ ಸಮಾಲೋಚನೆ ನಡೆಸಬಹುದಾಗಿದೆ.


ವಿವಾದ ಇನ್ನಷ್ಟು ಉಲ್ಬಣ

ನವದೆಹಲಿ: ಆರ್​ಬಿಐ ಉಪ ಗವರ್ನರ್ ವಿರಳ್ ಆಚಾರ್ಯ ಸಂಸ್ಥೆಯ ಸ್ವಾಯತ್ತತೆ ಕುರಿತು ನೀಡಿದ ಹೇಳಿಕೆಯ ಬಳಿಕ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವೆ ಉಲ್ಬಣಿಸಿದ್ದ ಶೀತಲ ಸಮರ ಮುಂದುವರಿದಿದೆ. ಈ ಮಧ್ಯೆ ಆರ್​ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆರ್​ಬಿಐ ಕಾಯ್ದೆಯ ಸೆಕ್ಷನ್ 7ರ ಅನ್ವಯ ಕೇಂದ್ರ ಸರ್ಕಾರ ಕೇಂದ್ರೀಯ ಬ್ಯಾಂಕ್​ಗೆ ಪತ್ರ ಬರೆದು ಹಲವು ನಿರ್ದೇಶನಗಳನ್ನು ನೀಡಿದೆ. ಕೇಂದ್ರ ಸರ್ಕಾರ ಆರ್​ಬಿಐನ ಸ್ವಾಯತ್ತತೆಗೆ ಧಕ್ಕೆ ತರಲು ಹೊರಟಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹಣಕಾಸು ಸಚಿವಾಲಯ, ಆರ್​ಬಿಐನ ಸ್ವಾಯತ್ತತೆ ಉಳಿಯಬೇಕು ಎಂದು ಹೇಳಿಕೆ ನೀಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲ ಮತ್ತು ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಿಸಿ ಸರ್ಕಾರ ಮತ್ತು ಆರ್​ಬಿಐ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಪತ್ರದಲ್ಲೇನಿದೆ?: ಕಳೆದ ಕೆಲ ವಾರಗಳಲ್ಲೇ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಆರ್​ಬಿಐಗೆ ಪ್ರತ್ಯೇಕ ಮೂರು ಪತ್ರಗಳನ್ನು ಬರೆದಿರುವ ಹಣಕಾಸು ಸಚಿವಾಲಯ, ನಗದು ನಿರ್ವಹಣೆ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್(ಪಿಸಿಯ) ಅನ್ವಯ ರೂಪುರೇಷೆ ಸಿದ್ಧಪಡಿಸುವ ವಿಷಯಕ್ಕೆ ಸಂಬಂಧಿಸಿ ಆರ್​ಬಿಐ ಕಾಯ್ದೆಯ ಸೆಕ್ಷನ್ 7ರ ಅನ್ವಯ ಸಮಾಲೋಚನೆ ನಡೆಸಲು ಪತ್ರದಲ್ಲಿ ಕೋರಲಾಗಿದೆ ಎಂದು ಮೂಲಗಳು ಹೇಳಿವೆ. ಅನುತ್ಪಾದಕ ಸಾಲದ ಘೋಷಣೆ ವೇಳೆ ವಿದ್ಯುತ್ ಕಂಪನಿಗಳಿಗೆ ಪಿಸಿಎ ಅನ್ವಯ ಆರ್​ಬಿಐ ವಿನಾಯಿತಿ ನೀಡಬೇಕು ಎಂದು ಸರ್ಕಾರ ಮೊದಲ ಪತ್ರದಲ್ಲಿ ಕೋರಿದೆ. ಮಾರುಕಟ್ಟೆಯ ನಗದು ನಿರ್ವಹಣೆಗೆ ಆರ್​ಬಿಐ ಮೀಸಲು ಬಂಡವಾಳ ಬಳಸಬೇಕು ಎಂದು ಎರಡನೇ ಪತ್ರದಲ್ಲಿ ಮನವಿ ಮಾಡಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿಕೆ ನಿರ್ಬಂಧಗಳನ್ನು ನಿವಾರಿಸಬೇಕು ಎಂದು ಮೂರನೇ ಪತ್ರದಲ್ಲಿ ಕೋರಲಾಗಿದೆ.

ಮುಂದೇನು?

ಹಣಕಾಸು ಸಚಿವಾಲಯ ಹೊರಡಿಸಿರುವ ಹೇಳಿಕೆ ಗಮನಿಸಿದರೆ ಸದ್ಯಕ್ಕೆ ಸರ್ಕಾರ ಆರ್​ಬಿಐಗೆ ಸ್ಪಷ್ಟ ನಿರ್ದೇಶನಗಳನ್ನು ನೀಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ. ಮಾತುಕತೆ ಮೂಲಕವೂ ಎನ್​ಪಿಎ, ನಗದು ನಿರ್ವಹಣೆ ಸಮಸ್ಯೆಗೆ ಸೂಕ್ತ ಮಾಗೋಪಾಯ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ಮಾತ್ರ ಸೆಕ್ಷನ್ 7ರ 2ನೇ ಅಂಶದಂತೆ ನಿರ್ದೇಶನಗಳನ್ನು ನೀಡಬಹುದು.

ಸೆಕ್ಷನ್ 7 ಎಂದರೆ?

ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಆರ್​ಬಿಐಗೆ ನಿರ್ದೇಶನ ನೀಡುವ ಅಧಿಕಾರವನ್ನು ಆರ್​ಬಿಐ ಕಾಯ್ದೆಯ 7ನೇ ಸೆಕ್ಷನ್ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಮೊದಲು ಸಲಹೆ, ಸೂಚನೆ ನೀಡಿ ಸಮಾಲೋಚನೆ ನಡೆಸಬಹುದು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿ ನಿರ್ದಿಷ್ಟ ನಿರ್ಧಾರ ಕೈಗೊಳ್ಳುವಂತೆ ಎರಡನೇ ಹಂತದಲ್ಲಿ ಆರ್​ಬಿಐಗೆ ಸೂಚನೆ ನೀಡಲಾಗುತ್ತದೆ. ಆರ್​ಬಿಐ ಇದನ್ನು ಪಾಲಿಸಲೇಬೇಕು. ಈಗಾಗಲೇ ಸೆಕ್ಷನ್ 7ರ ಮೊದಲ ಅಂಶದ ಪ್ರಕಾರ ಸಮಾಲೋಚನೆ ನಡೆದಿದೆ. ಎರಡನೇ ಹಂತದಲ್ಲಿ ನಿರ್ದೇಶನಗಳನ್ನು ನೀಡಿದರೆ ಆರ್​ಬಿಐ -ಕೇಂದ್ರ ಸರ್ಕಾರ ನಡುವಿನ ಶೀತಲಸಮರ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ.

ಸಾರ್ವಜನಿಕ ಹಿತಾಸಕ್ತಿ ಉದ್ದೇಶ

ಆರ್​ಬಿಐ ಸ್ವಾಯತ್ತತೆಯನ್ನು ಸರ್ಕಾರ ಗೌರವಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೊಂಡಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಬಗ್ಗೆ ಆರ್​ಬಿಐನೊಂದಿಗೆ ನಿರಂತರ ಚರ್ಚೆ, ಸಮಾಲೋಚನೆ ನಡೆಸಲಾಗುತ್ತಿದೆ. ಇಂಥ ಚರ್ಚೆಗಳ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ. ಆದರೆ, ಆ ಸಮಾಲೋಚನೆಗಳಿಂದ ಹೊರಹೊಮ್ಮುವ ನಿರ್ಧಾರಗಳನ್ನು ತಿಳಿಸಲಾಗುವುದು. ಸೆಕ್ಷನ್ 7ರ ಅನುಸಾರ ಸರ್ಕಾರ ಯಾವುದೇ ನಿರ್ಧಾರಗಳನ್ನು ತಳೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಚಿದು ಟ್ವೀಟ್

ಕೇಂದ್ರ ಸರ್ಕಾರ ಸೆಕ್ಷನ್ 7ನ್ನು ಪ್ರಯೋಗಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವಾಸ್ತವಗಳನ್ನು ಮುಚ್ಚಿಡಲು ಸರ್ಕಾರ ಹೀಗೆ ಮಾಡುತ್ತಿದೆ ಎಂದು ಭಾವಿಸಬೇಕಾಗುತ್ತೆ-ಹೀಗೆ ಟ್ವಿಟ್ ಮೂಲಕ ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೆಕ್ಷನ್ 7ನ್ನು ಪ್ರಯೋಗಿಸುವಂಥ ಸ್ಥಿತಿ ಸೃಷ್ಟಿಯಾಗಿಲ್ಲ ಎಂದಿದ್ದಾರೆ.