ಎರಡು ತಿಂಗಳಿಲ್ಲ ಶಿಕ್ಷಕರ ನೇಮಕ ಭಾಗ್ಯ

| ಶ್ರೀಕಾಂತ ಶೇಷಾದ್ರಿ ಬೆಂಗಳೂರು

ಶಿಕ್ಷಕರಾಗಬೇಕೆಂಬ ಆಸೆ ಹೊತ್ತು ಸರ್ಕಾರದ ಆದೇಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಲಕ್ಷಾಂತರ ಅಭ್ಯರ್ಥಿಗಳ ಕನಸು ಸದ್ಯಕ್ಕಂತೂ ನನಸಾಗುವ ಲಕ್ಷಣ ಕಾಣುತ್ತಿಲ್ಲ. ಶಿಕ್ಷಕರ ನೇಮಕ ಗೊಂದಲದಲ್ಲಿ ಸಿಲುಕಿ ನರಳುತ್ತಿರುವ ರಾಜ್ಯ ಸರ್ಕಾರ ಅದರಿಂದ ಹೊರಬರಲು ಹರಸಾಹಸ ಪಡುತ್ತಿರುವುದರಿಂದ ನವೆಂಬರ್​ವರೆಗೆ ಪ್ರಕ್ರಿಯೆಗೆ ಚಾಲನೆ ಸಿಗುವುದೇ ಅನುಮಾನವಾಗಿದೆ.

ಸರಣಿ ಗೊಂದಲ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ತುಂಬುವ ಕಾರಣಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಮುಂದಿನ ಮೂರು ವರ್ಷ ತಲಾ 18 ಸಾವಿರ ಶಿಕ್ಷಕರನ್ನು ನೇಮಿಸುವುದಾಗಿ 2016-17ರಲ್ಲಿ ನಿರ್ಧಾರ ಕೈಗೊಂಡಿತು. ಬಳಿಕ 2017ರಲ್ಲಿ 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನೂ ಆರಂಭಿಸಿತು. ಈ ಮುನ್ನ ಶಿಕ್ಷಣ ಇಲಾಖೆ, (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳನ್ನು ಹೊರಡಿಸಿತು.

ಮೊದಲು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕ ಮಾಡಲು ಹೊರಡಿಸಿದ ನೇಮಕ ಅಧಿಸೂಚನೆ ಹಾಗೂ ವೃಂದ ಮತ್ತು ನೇಮಕ ನಿಯಮಾವಳಿಯಲ್ಲಿನ ಹಲವು ಅಂಶಗಳ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಯಿತು. ಇಷ್ಟರ ನಡುವೆಯೂ ಸರ್ಕಾರ ಮತ್ತೆ ನೇಮಕ ಪ್ರಕ್ರಿಯೆಗೆ ಕೈಹಾಕಿತು. 10 ಸಾವಿರ ಶಿಕ್ಷಕರ ನೇಮಕಕ್ಕೆ ನಾಲ್ಕು ಹಂತ ಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಯಿತು. ಒಟ್ಟು 50,633 ಮಂದಿ ಪರೀಕ್ಷೆ ಬರೆದರೆ, 2500 ಮಂದಿ ಅರ್ಹತೆ ಪಡೆದರು.

ಫಲಿತಾಂಶದಿಂದ ಆತಂಕಗೊಂಡ ಅನರ್ಹ ಅಭ್ಯರ್ಥಿಗಳು ಕಳೆದ ತಿಂಗಳು ಸಿಎಂ, ಶಿಕ್ಷಣ ಸಚಿವರನ್ನು ಭೇಟಿಯಾಗಿ ನಿಯಮ ಸಡಿಲಿಸಿ ತಮ್ಮನ್ನೂ ನೇಮಕ ಮಾಡಿಕೊಳ್ಳುವಂತೆ ಕೋರಿದ್ದರು. ಕೋರಿಕೆ ಆಲಿಸಿದ ಸಿಎಂ, ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದ್ದರು.

2017ರ ಜು.17ರಂದು ಸರ್ಕಾರ ಅಧಿಸೂಚನೆ ಹೊರಡಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್-2ನಲ್ಲಿ ಶೇಕಡ 50 ಹಾಗೂ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕ ಪಡೆಯಬೇಕೆಂಬ ನಿಯಮ ಸಡಿಲಗೊಳಿಸಿತು. ಬಳಿಕ ಗೊಂದಲ ಏರ್ಪಟ್ಟ ಕಾರಣ ಜು.27ರಂದು ಮತ್ತೊಂದು ಆದೇಶ ಹೊರಡಿಸಿ, 17ರಂದು ಹೊರಡಿಸಿದ ಆದೇಶ ಎಲ್ಲ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂಬ ಟಿಪ್ಪಣಿ ಹೊರಡಿಸಿದೆ. ಜತೆಗೆ ಆಯುಕ್ತರ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಎಂದು ಸ್ಪಷ್ಟಪಡಿಸಿದೆ.

ವೃಂದ ನೇಮಕದ್ದೇ ಭೀತಿ: ವೃಂದ ನೇಮಕ ನಿಯಮಕ್ಕೆ ವಿರುದ್ಧವಾಗಿ ಹೊರಡಿಸುವ ಆದೇಶ ಕಾನೂನಿಗೆ ವಿರುದ್ಧವಾಗುತ್ತದೆ, ಒಂದು ವೇಳೆ ಈ ಆದೇಶದಂತೆ ಮುಂದುವರಿದು ನೇಮಕ ಮಾಡಿದರೆ ಕಾನೂನಾತ್ಮಕವಾಗಿ ಸಮಸ್ಯೆಯಾಗುತ್ತದೆಂದ ಅರಿತ ಶಿಕ್ಷಣ ಸಚಿವರು ಆದೇಶ ಹಿಂಪಡೆಯಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹರಿಯಾಣದಲ್ಲಿ ವೃಂದ ನೇಮಕ ನಿಯಮಾವಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡ ಅಲ್ಲಿನ ಸಿಎಂ ಜೈಲು ಪಾಲಾದ ವಿಚಾರ ಹಸಿರಾಗಿರುವಾಗಲೇ ಮತ್ತೆ ಇಂಥ ಸಾಹಸಕ್ಕೆ ಕೈಹಾಕುವುದು ಬೇಡವೆಂಬ ತೀರ್ವನಕ್ಕೆ ಶಿಕ್ಷಣ ಇಲಾಖೆ ಬಂದಿದೆ.

ಸಿಇಟಿ ಗೊಂದಲ: ಶಿಕ್ಷಕರ ನೇಮಕ ಮಾಡಲು ನಡೆಸಿದ ಸಿಇಟಿ ಫಲಿತಾಂಶದ ಬಗ್ಗೆಯೂ ಗೋಜಲು ಸೃಷ್ಟಿಯಾಗಿದೆ. ಅರ್ಹತೆ ಪಡೆಯದ ಅಭ್ಯರ್ಥಿಗಳಿಗೂ ಅರ್ಹತೆ ಸಿಕ್ಕಿರುವ ಬಗ್ಗೆ ಎಸ್​ಎಂಎಸ್ ಸಂದೇಶ ತಲುಪಿದೆ.

ಸಮಿತಿ ರಚನೆ: ಒಟ್ಟಾರೆ ಎಲ್ಲ ಗೊಂದಲ ಸಮಸ್ಯೆ ಬಗೆಹರಿಸಿಕೊಳ್ಳಲು ಶಿಕ್ಷಣ ಇಲಾಖೆ ಮೂರು ಅಧಿಕಾರಿಗಳ ಸಮಿತಿ ರಚಿಸಿದ್ದು, ಸರಿಯಾದ ಫಲಿತಾಂಶ ಪ್ರಕಟಣೆ, ವೃಂದ ಮತ್ತು ನೇಮಕ ನಿಯಮಾವಳಿ ಗೊಂದಲದಿಂದ ಹೊರಬರುವ ಬಗ್ಗೆ ಈ ತಂಡ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಮುಂದೇನು?

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ 2500 ಮಂದಿಗಷ್ಟೇ ನೇಮಕ ಆದೇಶ ನೀಡುವುದು ಅಥವಾ ಮುಂದಿನ ಅಧಿವೇಶನದವರೆಗೆ ಕಾಯ್ದು ಕಾನೂನು ತಿದ್ದುಪಡಿ ತರುವ ಮೂಲಕ ಅರ್ಹತಾ ನಿಯಮ ಸಡಿಲಿಸುವುದೊಂದೇ ಸರ್ಕಾರದ ಮುಂದಿರುವ ದಾರಿ. ಇತ್ತ ತಾವು ಶಿಕ್ಷಕರಾಗಬಹುದೆಂದು ಈ ಹಿಂದೆ ಪರೀಕ್ಷೆ ಬರೆದ 50 ಸಾವಿರ ಮಂದಿ ಮತ್ತು 2018ರ ಆ.14ರ ಆದೇಶದಂತೆ ಅರ್ಜಿ ಹಾಕಲು ಕಾಯ್ದಿರುವ ಸಾವಿರಾರು ಅಭ್ಯರ್ಥಿಗಳು ಇಡೀ ಬೆಳವಣಿಗೆಯಿಂದ ದಿಕ್ಕು ತೋಚದಂತಾಗಿದ್ದಾರೆ.

ನೇಮಕ ನಿಯಮಾವಳಿಯ ನ್ಯೂನತೆ ಬಗ್ಗೆ ವರ್ಷದ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೂ ಸರ್ಕಾರ ಗೊಂದಲ ಸೃಷ್ಟಿಸಿಕೊಂಡಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಸರ್ಕಾರದ ತೀರ್ವನಕ್ಕೆ ಕಾಯುತ್ತಿದ್ದಾರೆ.

| ಅರುಣ್ ಶಹಾಪೂರ ಪರಿಷತ್ ಸದಸ್ಯ

ನೇಮಕಕ್ಕೆ ಆದೇಶ

ಗೊಂದಲಗಳ ನಡುವೆಯೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 4 ಸಾವಿರ ಪದವೀಧರ (6ರಿಂದ 8) ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಆ.14ರಂದು ಆದೇಶ ಹೊರಡಿಸಿದೆ. 2018ರ ಮಾರ್ಚ್ ಅಂತ್ಯಕ್ಕೆ ಖಾಲಿ ಇರುವ ಹುದ್ದೆಗಳ ಮಾಹಿತಿಯೊಂದಿಗೆ ಸವಿವರ ಪ್ರಸ್ತಾವನೆ ಆಧಾರದಲ್ಲಿ ಈ ನೇಮಕ ಮಾಡಲು ಶಿಕ್ಷಣ ಇಲಾಖೆ ಆಸಕ್ತಿ ವಹಿಸಿದೆಯಾದರೂ 2017ರ ಆಗಸ್ಟ್​ನಲ್ಲಿ ಆರಂಭಿಸಿದ ಪ್ರಕ್ರಿಯೆಯನ್ನು ಈವರೆಗೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.