ಸರ್ಕಾರಿ ಶಾಲೆಗೆ ದುರಸ್ತಿ ಭಾಗ್ಯ!

ಬೆಂಗಳೂರು: ಜೀವ ಬಲಿಗೆ ಕಾದಿರುವ ರಾಜ್ಯದ ಸರ್ಕಾರಿ ಶಾಲೆಗಳ ಶಿಥಿಲ ಕಟ್ಟಡಗಳತ್ತ ಕೊನೆಗೂ ದೃಷ್ಟಿ ಹರಿಸಿರುವ ಸರ್ಕಾರ ದುರಸ್ತಿ ಕಾರ್ಯಕ್ಕಾಗಿ 36 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ವಿಜಯವಾಣಿ ವರದಿ ಫಲಶ್ರುತಿ! ‘ನೆತ್ತಿಯ ಮೇಲೆ ಜವರಾಯ’ ಶೀರ್ಷಿಕೆಯಡಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಕಟ್ಟಡಗಳ ದುಸ್ಥಿತಿಯ ದರ್ಶನ ಮಾಡಿಸಿದ್ದ ವಿಜಯವಾಣಿ ರಿಯಾಲಿಟಿ ಚೆಕ್​ನ ವರದಿ ಬಳಿಕ ಎಚ್ಚೆತ್ತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಶಾಲಾ ಕೊಠಡಿಗಳ ದುರಸ್ತಿಗೆ ಮುಂದಾಗಿದೆ. ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಅದರ ಅನುಷ್ಠಾನಕ್ಕಾಗಿ ಮಂಗಳವಾರ ಅನುದಾನ ಬಿಡುಗಡೆ ಮಾಡಿದೆ. 2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 16 ಕೋಟಿ ರೂ. ಮತ್ತು ಪ್ರೌಢಶಾಲೆಗಳಿಗೆ 19 ಕೋಟಿ ರೂ. ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈಗಾಗಲೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿಗಳಿಗಾಗಿ 2018-19ನೇ ಸಾಲಿನ ಬಜೆಟ್​ನಲ್ಲಿ 25.51 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದನ್ನು ನಿಯಮಾನುಸಾರ ಭರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಿದೆ. ಇದೀಗ ಒದಗಿಸಲಾದ ಅನುದಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ, ಕ್ಯಾಮರಾ, ಬಯೋಮೆಟ್ರಿಕ್ ಸಾಧನ ಅಳವಡಿಸಲು 1 ಕೋಟಿ ರೂ. ಮತ್ತು ಪಾರಂಪರಿಕ ಶಾಲೆಗಳಿಗಾಗಿ 5 ಕೋಟಿ ರೂ. ಮೀಸಲಿಟ್ಟಿದೆ. ಇದರ ಅನುದಾನದ ಬಳಕೆಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಕಾಮಗಾರಿಗಳನ್ನು ಆಯಾ ಜಿಲ್ಲೆಯಲ್ಲಿ ಗುಣಮಟ್ಟವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಾದ ಎಸ್​ಡಿಎಂಸಿ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಗಳಿಂದ ನಿಯಮಾನುಸಾರ ನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಹಾಗೆಯೇ ಸರ್ಕಾರ ಪೂರ್ವಾನುಮತಿ ಇಲ್ಲದೇ ಅನುಮೋದಿತ ಕ್ರಿಯಾ ಯೋಜನೆಯ ಯಾವುದೇ ಕಾಮಗಾರಿಗಳಲ್ಲಿ ಬದಲಾವಣೆ ಮಾಡುವಂತಿಲ್ಲ. ಉಪಯೋಗಿಸಿದ ಅನುದಾನಕ್ಕೆ ಲೆಕ್ಕಪತ್ರಗಳನ್ನು ಒದಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಆರ್.ಎಸ್.ನಾಧನ್ ಆದೇಶದಲ್ಲಿ ತಿಳಿಸಿದ್ದಾರೆ.

ದುರಸ್ತಿಗಷ್ಟೇ ಸೀಮಿತ: ಶಿಕ್ಷಣ ಇಲಾಖೆ ಸದ್ಯ ಬಿಡುಗಡೆ ಮಾಡಿರುವ ಮೊತ್ತ ಕೇವಲ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಿಗಾಗಿದೆ. ಶಾಲೆಗಳ ಕೊಠಡಿ ಮರು ನಿರ್ವಣಕ್ಕೆ ಶೀಘ್ರದಲ್ಲೇ ಪತ್ಯೇಕವಾಗಿ ಅನುದಾನ ಬಿಡುಗಡೆ ಮಾಡಲಿದೆ.

Leave a Reply

Your email address will not be published. Required fields are marked *