ಸರ್ಕಾರಕ್ಕೆ ಬಿಸಿ ಮುಟ್ಟಿಸಿ

ರಬಕವಿ/ ಬನಹಟ್ಟಿ:ಸೌಲಭ್ಯಗಳನ್ನು ಪಡೆಯಲು ಇಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸರ್ಕಾರಕ್ಕೆ ನೇಕಾರರ ಕೂಗು ಕೇಳಿಸುತ್ತಿಲ್ಲ. ಹೋರಾಟದ ಸ್ವರೂಪ ಬದಲಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಹುಬ್ಬಳ್ಳಿ ವೀರಭಿಕ್ಷಾವತಿ ಮಠದ ಶಿವಶಂಕರ ಸ್ವಾಮೀಜಿ ಹೇಳಿದರು.

ಬನಹಟ್ಟಿ ನಗರದ ಕೆಎಚ್​ಡಿಸಿ ಕಚೇರಿ ಆವರಣದಲ್ಲಿ ಕೈಮಗ್ಗ ನೇಕಾರರು ನಡೆಸುತ್ತಿರುವ 10ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಇಷ್ಟು ದಿನಗಳಿಂದ ಧರಣಿ ನಡೆಯುತ್ತಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ. ತಾಲೂಕಿನ ಎಲ್ಲ ಮಠಾಧೀಶರು ಕೈಮಗ್ಗ ನೇಕಾರರ ಹೋರಾಟದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಗಟ್ಟಿ ಧ್ವನಿ ಮುಟ್ಟಿಸಬೇಕು. 10 ದಿನಗಳಿಂದ ಸತ್ಯಾಗ್ರಹ ಸ್ಥಳದಲ್ಲಿ ನೇಕಾರರು ಗಂಜಿಯನ್ನೇ ಸ್ವೀಕರಿಸುತ್ತಿರುವುದು ಬೇಸರ ಸಂಗತಿ. ರಾಜಕಾರಣಿಗಳು ಮುಂಬೈ ಹಾಗೂ ದೆಹಲಿಯಲ್ಲಿ ಮಜಾ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಹರಿಹಾಯ್ದರು.

ಮುಖಂಡ ಸದಾಶಿವ ಗೊಂದಕರ ಮಾತನಾಡಿದರು. ನ್ಯಾಯವಾದಿ ರವೀಂದ್ರ ಕಾಮಗೊಂಡ, ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಇತರರು ಇದ್ದರು.