ಬೆಂಗಳೂರು:
ಸಚಿವಾಲಯದ ಕಾರ್ಯದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಗತ್ಯತೆ ಇಂದು ಹೆಚ್ಚಾಗಿದೆ ಎಂದು ರಾಜ್ಯಪಾಲರ ಸಚಿವಾಲಯದ ಸರ್ಕಾರದ ಜಂಟಿ ಕಾರ್ಯದರ್ಶಿ ಪ್ರಭುಶಂಕರ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮೂರು ದಶಕಗಳ ಹಿಂದೆ ನಾನು ಸರ್ಕಾರಿ ಸೇವೆಗೆ ಸೇರಿದ ಸಂದರ್ಭದಲ್ಲಿ ಸಚಿವಾಲಯವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು. ಕ್ರಮೇಣ ಅದರ ಕಾರ್ಯ ದಕ್ಷತೆ ಕಡಿಮೆಯಾಗುತ್ತಾ ಬಂದಿದೆ ಎಂದು ಹೇಳಿದರು.
ಈಗಲೂ ನಮ್ಮ ಕಾರ್ಯ ದಕ್ಷತೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಇನ್ನಷ್ಟು ಕಾಲಜಿ ಜೊತೆಗೆ ನಮ್ಮ ಕೆಲಸ ಕಾರ್ಯಗಳ ವೇಗ ಹೆಚ್ಚಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸಲು ಎಲ್ಲರೂ ಕಾಯೋನ್ಮೂಖರಾಗಬೇಕು ಎಂದು ಕರೆ ನೀಡಿದರು.
ನನ್ನ ಸರ್ಕಾರಿ ಸೇವೆ ಉದ್ದಕ್ಕೂ ನಾನಾ ರೀತಿಯ ಅನುಭವಗಳು ಆಗಿವೆ. ವಿಶೇಷವಾಗಿ ಎಲ್.ಕೆ.ಅತೀಕ್ ಅವರು ನನಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು.
ನಿವೃತ್ತಿಯಾಗುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಾಯಕ ಖುಷ್ಕಾರಾ ಬೇಗಂ, ಲೋಕೋಪಯೋಗಿ ಇಲಾಖೆ ಹಿರಿಯ ಕಚೇರಿ ಪರಿಚಾರಕರಾದ ಎಂ.ನಾಗರಾಜ್ ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪ್ರಧಾನ ಕಾರ್ಯದರ್ಶಿ ಎ.ಎಸ್.ಹರ್ಷ, ಜಂಟಿ ಕಾರ್ಯದರ್ಶಿಗಳಾದ ಸಿದ್ದರಾಜು, ಆರ್.ಚೇತನ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.