More

  ವಿಆರ್​ಎಸ್​ನತ್ತ ಸರ್ಕಾರಿ ನೌಕರರು

  ಹರೀಶ್ ಬೇಲೂರು ಬೆಂಗಳೂರು
  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೆಲಸದ ಒತ್ತಡ ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಸ್ವಯಂ ನಿವೃತ್ತಿ ಪಡೆಯಲು ಒಲವು ತೋರುತ್ತಿದ್ದಾರೆ.

  ಶಾಲಾ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಒಳಾಡಳಿತ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರ್ಥಿಕ, ಕೃಷಿ, ಸಮಾಜ ಕಲ್ಯಾಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸೇರಿ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಹಾಲಿ ನೌಕರರು ಅಧಿಕ ಕಾರ್ಯದೊತ್ತಡದಿಂದ ಬಳಲುವಂತಾಗಿದೆ.

  ರಾಜ್ಯದಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಕಾಯುತ್ತಿರುವ ವಿವಿಧ ವೃಂದದ ಅಧಿಕಾರಿಗಳು, ಆರೋಗ್ಯ, ಅಧಿಕ ಕಾರ್ಯದೊತ್ತಡ ಕಾರಣ ಕೊಟ್ಟು 3-4 ವರ್ಷ ಸೇವಾವಧಿ ಬಾಕಿ ಇರುವಾಗಲೇ ವಿಆರ್​ಎಸ್ ಪಡೆಯಲು ಆಲೋಚಿಸುತ್ತಿದ್ದಾರೆ. ಸರ್ಕಾರಿ ಹುದ್ದೆಯಲ್ಲಿ 30 ವರ್ಷ ಕಾರ್ಯನಿರ್ವಹಿಸಿದವರಿಗೆ ಆರೋಗ್ಯ ಸೇರಿ ಇತರ ಕಾರಣಗಳಿಗೆ ಸ್ವಯಂನಿವೃತ್ತಿ ಪಡೆದರೆ ಸರ್ಕಾರದಿಂದ ಅಧಿಕ ಸವಲತ್ತು ಸಿಗುತ್ತದೆ.

  ಕನಿಷ್ಠ 15 ವರ್ಷ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಿದವರು ಸ್ವಯಂಪ್ರೇರಿತವಾಗಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆಯುವ ಅವಕಾಶವಿದೆ. ಇಂಥವರು ವಿಆರ್​ಎಸ್ ಪಡೆದರೆ ವೇತನ ಆಧಾರದ ಮೇರೆಗೆ ಪಿಂಚಣಿ, ಗ್ರಾಚ್ಯುಟಿ, ಪರಿವರ್ತಿತ ವೇತನ ಸೇರಿ ಇತರ ಸರ್ಕಾರಿ ಸೌಲಭ್ಯಗಳು ಸಿಗುತ್ತದೆ. ಕಡಿಮೆ ವೇತನ ಪಡೆಯುತ್ತಿರುವವರು ವಿಆರ್​ಎಸ್ ಪಡೆದರೆ ಕಡಿಮೆ ವೇತನ ಆಧಾರದಲ್ಲಿ ಪಿಂಚಣಿ ಸೇರಿ ಸರ್ಕಾರಿ ಸೌಲಭ್ಯವೂ ದೊರೆಯಲಿದೆ.

  ಯುವ ಶಕ್ತಿ ಕೊರತೆ: ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮಂಜೂರಾತಿ ಆಗಬೇಕಿತ್ತು. ಆದರೆ, ಅಂದಾಜು 26 ವರ್ಷಗಳಿಂದ ಹುದ್ದೆಗಳ ಮಂಜೂರಾತಿ ಆಗಿಲ್ಲ. 1991ರ ಜನಗಣತಿ ಆಧರಿಸಿ ಒಟ್ಟು 7,63,063 ಹುದ್ದೆಗಳ ಮಂಜೂರಾತಿ ಆಗಿತ್ತು. ಪ್ರಸ್ತುತ ಜನಸಂಖ್ಯೆ ಹಾಗೂ ಇಲಾಖೆಗಳ ಸಂಖ್ಯೆ ಹೆಚ್ಚಾಗಿದ್ದರೂ ಹೆಚ್ಚುವರಿ ಹುದ್ದೆ ಮಂಜೂರಾತಿಯಾಗಿಲ್ಲ. ಮಂಜೂರಾದ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಇದರಿಂದಾಗಿ ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ ದುಪ್ಪಟ್ಟಾಗಿದೆ. ಮತ್ತೊಂದೆಡೆ, ನೌಕರಶಾಹಿಗೆ ಹೊಸ ಆಲೋಚನೆ, ಉತ್ಸಾಹಿ ಯುವಶಕ್ತಿಯ ಸೇರ್ಪಡೆಯಾಗುತ್ತಿಲ್ಲ. ಹಲವು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿದ್ದು, ನಿವೃತ್ತರಾಗುವವರ ಹುದ್ದೆಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. ವಿಶೇಷವಾಗಿ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಬದಲಿಗೆ ಸರ್ಕಾರ, ಹೊರಗುತ್ತಿಗೆ ಮೊರೆ ಹೋಗಿದೆ. ಈ ಕ್ರಮದಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ, ಸೂಕ್ಷ್ಮ ಕಡತಗಳ ನಿರ್ವಹಣೆಯಲ್ಲೂ ಹೊಣೆಗಾರಿಕೆ ನಿರೀಕ್ಷಿಸಲಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

  2.52 ಲಕ್ಷ ಹುದ್ದೆ ಖಾಲಿ: ಇಲಾಖೆ, ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳು ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾಗಿರುವ ಪೈಕಿ 5,11,272 ನೌಕರರು ಕಾರ್ಯನಿರ್ವಹಿಸುತ್ತಿದ್ದು, 2,58,709 ಲಕ್ಷ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಶ್ರೇಣೀಕೃತ ನೌಕರಶಾಹಿ ಪಿರಮಿಡ್ ತಲೆಕೆಳಗಾಗಿದೆ. ಎಲ್ಲ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಿದರೆ ವೇತನ, ಭತ್ಯೆಗಾಗಿ ಸರ್ಕಾರಕ್ಕೆ ವಾರ್ಷಿಕ 8,531 ಕೋಟಿ ರೂ.ಹೆಚ್ಚುವರಿ ಖರ್ಚಾಗಲಿದೆ. ಆರ್ಥಿಕ ಮಿತವ್ಯಯ ಲೆಕ್ಕಾಚಾರದಲ್ಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಹಾಲಿ ನೌಕರರಿಗೆ ಕಾರ್ಯದೊತ್ತಡ ಸಮಸ್ಯೆ ಎದುರಾದರೆ, ಸಾರ್ವಜನಿಕರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗದಂತಾಗಿದೆ.

  7ನೇ ವೇತನ ಆಯೋಗದ ವರದಿ ಅನುಷ್ಠಾನ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ. ಆದರೆ, ನೌಕರ ವಲಯದಲ್ಲಿ ವಿಆರ್​ಎಸ್ ಪಡೆದುಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. 60 ವರ್ಷದವರೆಗೆ ನೌಕರರು ಕಾರ್ಯನಿರ್ವಹಿಸುವಂತಾಗಬೇಕು.

  | ಸಿ.ಎಸ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts