ಮೀಸಲು ಬಡ್ತಿಗೆ ಶಾಶ್ವತ ಸೂತ್ರ

| ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಮೀಸಲು ಬಡ್ತಿ ವಿಚಾರಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ವ್ಯಾಜ್ಯದಲ್ಲಿ ತೊಡಗಿದ್ದವರು ಈಗ ವಿವಾದವನ್ನು ಶಾಶ್ವತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಕೋರ್ಟ್​ನಲ್ಲಿರುವ ಈ ಪ್ರಕರಣಕ್ಕೆ ಸದ್ಯದಲ್ಲಿ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಡ್ತಿಯಲ್ಲಿ ಎಸ್ಸಿ ಎಸ್ಟಿ ನೌಕರರಿಗೆ ಶೇ.18 ಮೀಸಲು ಹಂಚಿಕೆ, ಮಾಡಿ ಶೇ.82 ಅನ್ನು ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವರ್ಗದವರಿಗೆ ಮೀಸಲು ನಿಗದಿ ಮಾಡುವ ಪ್ರಸ್ತಾಪದ ಬಗ್ಗೆ ಗಹನ ಚರ್ಚೆ ಆರಂಭವಾಗಿದೆ.

ನ್ಯಾಯಾಲಯದಲ್ಲಿ ಪರಸ್ಪರ ಹೋರಾಟ ನಡೆಸುತ್ತಿರುವ ಸರ್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳೇ ಕಳೆದೊಂದು ವಾರದಲ್ಲಿ ಎರಡು ಬಾರಿ ಅನೌಪಚಾರಿಕ ಸಭೆ ನಡೆಸಿದ್ದಾರೆ. ಸಂಘರ್ಷವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಸಂಬಂಧ ಚರ್ಚೆ ನಡೆಸಿದ್ದಾರೆ. ಆದರೆ ಈ ಮಾತುಕತೆ ಇನ್ನೂ ಒಂದು ಗಟ್ಟಿ ತಳಹದಿಯ ರೂಪ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಸಮಯ, ಹಣ ವ್ಯರ್ಥ

ನ್ಯಾಯಾಲಯದಲ್ಲಿ ಒಮ್ಮೆ ಎಸ್ಸಿ ಎಸ್ಟಿ ನೌಕರರಿಗೆ ಹೆಚ್ಚು ಅನುಕೂಲವಾದರೆ, ಮತ್ತೊಂದು ಸಂದರ್ಭದಲ್ಲಿ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಿದೆ. ಒಟ್ಟಾರೆ ಪ್ರಕರಣ ಮುಕ್ತಾಯ ಕಾಣುತ್ತಿಲ್ಲ. ಈಗಲೂ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿ (ಪವಿತ್ರಾ ಪ್ರಕರಣ) ವಿಚಾರಣೆಯಲ್ಲಿದೆ. ಸರ್ಕಾರಿ ನೌಕರರು ನ್ಯಾಯಾಲಯದ ಖರ್ಚು ವೆಚ್ಚಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಸುರಿಯುತ್ತಲೇ ಇದ್ದಾರೆ. ಸಮಯ ಕೂಡ ಸಾಕಷ್ಟು ವ್ಯರ್ಥವಾಗಿದೆ. ಸರ್ಕಾರ ಕೂಡ ವಕೀಲರನ್ನು ನೇಮಿಸಿ ಪ್ರಕರಣದ ಇತ್ಯರ್ಥಕ್ಕೆ ಪ್ರಯತ್ನ ನಡೆಸಿದೆ. ಇನ್ನೊಂದೆಡೆ ಇಂದೋ ನಾಳೆಯೋ ವಿವಾದ ಮುಕ್ತಾಯವಾಗಬಹುದೆಂಬ ನಿರೀಕ್ಷೆ ಹೊತ್ತಿದ್ದ ಸಾವಿರಾರು ನೌಕರರು ಸೇವಾ ನಿವೃತ್ತಿ ಹೊಂದಿದ್ದಾರೆ.

ಸರ್ಕಾರದ ಮೀಸಲು ಬಡ್ತಿ ನೀತಿಯಿಂದಾಗಿ ಎಸ್ಸಿ ಎಸ್ಟಿ ನೌಕರರಿಗೆ ಶೇ.18ಕ್ಕಿಂತ ಹೆಚ್ಚು ಮೀಸಲು ಸಿಗುತ್ತಿದೆ, ಕೆಲವು ಇಲಾಖೆಗಳಲ್ಲಿ ಶೇ.100 ಪ್ರಾತಿನಿಧ್ಯ ಸಿಗುತ್ತಿದೆ ಎಂದು ಸಾಮಾನ್ಯ ವರ್ಗದವರು (ಅಹಿಂಸಾ) ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಾರೆ. ಕೊರ್ಟ್ ಇತ್ತೀಚೆಗೆ ಕೊಟ್ಟ ಆದೇಶದ ಪ್ರಕಾರ ಎಸ್ಸಿ ಎಸ್ಟಿ ನೌಕರರಿಗೆ ಶೇ.18 ಮೀಸಲು ಸೀಮಿತಗೊಳ್ಳುತ್ತದೆ. ಹೀಗಾಗಿ ಶೇ.18ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲು ಬಡ್ತಿ ಹೊಂದಿದ್ದವರನ್ನು ರಕ್ಷಿಸಲು ಸರ್ಕಾರ ಕಾಯ್ದೆ ತಂದಿದೆ.

ಪರಿಹಾರ ಸೂತ್ರವೇನು?

1. ಕ್ಲಾಸ್ 1ರ ಕೆಳಹಂತದಲ್ಲಿ ಬಡ್ತಿ ನೀಡುವಾಗ ಶೇ.18 ಮೀಸಲು ಕೊಡಬಹುದೆಂದು ನ್ಯಾಯಾಲಯದ ಆದೇಶವಿದೆ. ಕ್ಲಾಸ್ 1 ಮೇಲ್ಪಟ್ಟು ಕೂಡ ಶೇ.18 ಮೀಸಲು ಕೊಡುವುದು ಪರಿಹಾರ ಸೂತ್ರದ ಪ್ರಮುಖ ಅಂಶ.

2. ಮೀಸಲು ಬಡ್ತಿ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಅಹಿಂಸಾ ಮತ್ತು ಎಸ್ಸಿಎಸ್ಟಿ ನೌಕರರ ಸಂಘಟನೆಯನ್ನು ಸರ್ಕಾರ ಕರೆದು ಮಾತನಾಡಿ ಒಮ್ಮತಾಭಿಪ್ರಾಯ ರೂಪಿಸುವುದು.

3. ಇತ್ತೀಚೆಗೆ ಮಂಡಿಸಿದ ತತ್ಪರಿಣಾಮ ಬಡ್ತಿ ರಕ್ಷಿಸುವ ಕಾನೂನು ಹಿಂಪಡೆದು, ಶೇ.18, ಶೇ.82 ಸೂತ್ರದ ಹೊಸ ಕಾನೂನು ರಚಿಸಿ ಅದನ್ನು ನ್ಯಾಯಾಲಯದ ಮುಂದೆ ಸಲ್ಲಿಸಬೇಕು.

4. ಒಂದೊಮ್ಮೆ ಶೇ.18-ಶೇ.82 ಸೂತ್ರ ಜಾರಿಗೆ ಬಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತೆ.

5. ಮುಂದೆ ಯಾವ ವರ್ಗದವರು ನಿವೃತ್ತರಾಗುತ್ತಾರೋ ಅಥವಾ ನಿಧನ ಹೊಂದಿದಲ್ಲಿ ಆ ಸ್ಥಾನಕ್ಕೆ ಆ ವರ್ಗದವರನ್ನೇ ಬಡ್ತಿಗೊಳಿಸುವಂತಾಗಬೇಕು.

ಏನಿದು ವಿವಾದ?

ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ಎಸ್ಟಿ ಎಸ್ಟಿ ನೌಕರರಿಗೆ ಮೀಸಲು ನೀಡಲಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಮುಂಬಡ್ತಿ ಪಡೆದವರ ಪ್ರಮಾಣ ಶೇ.18ಕ್ಕಿಂತ ಹೆಚ್ಚಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದೆ. 2017ರ ಫೆಬ್ರವರಿಯಲ್ಲಿ ನ್ಯಾಯಾಲಯ ಮುಂಬಡ್ತಿಗೊಂಡವರನ್ನು ಹಿಂಬಡ್ತಿಗೊಳಿಸಿ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿ ಆ ಮೂಲಕ ಬಡ್ತಿ ನೀಡುವಂತೆ ಸೂಚಿಸಿತ್ತು. ಹಿಂಬಡ್ತಿಗೊಂಡವರನ್ನು ರಕ್ಷಿಸಲು ಸರ್ಕಾರ ಕಾನೂನು ಮಾಡಿದ್ದು, ಅದರ ಅನುಷ್ಠಾನಕ್ಕೆ ನ್ಯಾಯಾಲಯದ ಅನುಮತಿಗೆ ಕಾಯ್ದಿದೆ.

ಬಡ್ತಿ ಮೀಸಲಿಗೆ ಅಹಿಂಸಾ ವಿರೋಧ ವ್ಯಕ್ತಪಡಿಸಿಲ್ಲ. ಶೇ.18 ಮೀಸಲು ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಶೇ.18 ಮೀಸಲು ದಾಟಬಾರದೆಂಬುದು ನಮ್ಮ ವಾದ. ಈ ಕಾರಣಕ್ಕೆ 26 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಶೇ.18ಕ್ಕೆ ಮುಂಬಡ್ತಿ ಸೀಮಿತಗೊಳಿಸಿ ಕ್ರಮಕೈಗೊಂಡರೆ ನಮ್ಮ ಅಭ್ಯಂತರವಿಲ್ಲ.

| ಎಂ.ನಾಗರಾಜ್, ಅಹಿಂಸಾ ಸಂಘಟನೆ

 

ಈ ವ್ಯಾಜ್ಯ ಸಾಕಾಗಿದೆ. ಒಮ್ಮತಾಭಿಪ್ರಾಯ ಮೂಡಿ ಪ್ರಕರಣ ಬಗೆಹರಿದರೆ ಸಾಕು. ಎರಡೂ ಕಡೆಯವರು ಕುಳಿತು ಒಂದೇ ಮನಸ್ಸಿನಲ್ಲಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.

| ರಾಜಶೇಖರ ಯಡಹಳ್ಳಿ, ಎಸ್ಸಿಎಸ್ಟಿ ನೌಕರರ ಸಂಘ