ಸುಳ್​ಸುದ್ದಿ ತಡೆಗೆ ಕಾಯ್ದೆ?

ನವದೆಹಲಿ: ಸಾಮಾಜಿಕ ಜಾಲತಾಣ ಹಾಗೂ ಸಂವಹನ ಆಪ್​ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಆನ್​ಲೈನ್ ಸಂವಹನ ವೇದಿಕೆಗಳಲ್ಲಿನ ಎಂಡ್ ಟು ಎಂಡ್ ಎನ್ಕ್ರಿಪ್ಶನ್​ಗಳ ವ್ಯವಸ್ಥೆಗೆ ತಿಲಾಂಜಲಿ ಹಾಡಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲಿಡಲು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಸೂಚಿಸಿದೆ. ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಸಂಬಂಧಿಸಿ ವಾಟ್ಸ್​ಆಪ್ ಸಿಇಒ ಕ್ರಿಸ್ ಡೇನಿಯಲ್ ಅವರು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್​ಪ್ರಸಾದ್ ಭೇಟಿಯಾಗಿದ್ದಾಗಲೂ ಇದೇ ವಿಚಾರ ಪ್ರಸ್ತಾಪಿಸಿದ್ದರು. ಆದರೆ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಬಹಿರಂಗ ಪಡಿಸಲು ಅಸಾಧ್ಯ ಎಂದ ಹಿನ್ನೆಲೆಯಲ್ಲಿ ಈ ತಿದ್ದುಪಡಿಗೆ ಕೇಂದ್ರ ಮುಂದಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 66(ಎ)ಯನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳ ಬಗ್ಗೆ ಕಾನೂನು ನಿಯಂತ್ರಣವಿರಲಿಲ್ಲ. ಹೀಗಾಗಿ ಐಟಿ ಕಾಯ್ದೆ ಸೆಕ್ಷನ್ 79ಕ್ಕೆ ನಿಯಮ 3(4), 3(5) ಸೇರಿಸಲು ಕೇಂದ್ರ ಸಿದ್ಧವಾಗಿದೆ. ಕಾಯ್ದೆ ಕರಡು ಪ್ರತಿಯನ್ನು ಎಲ್ಲ ಸಂವಹನ ಕಂಪನಿಗಳಿಗೆ ರವಾನಿಸಿದೆ. ಜ. 7ರೊಳಗೆ ಈ ಕಂಪನಿಗಳು ಪ್ರತಿಕ್ರಿಯೆ ನೀಡಬೇಕು. ಬಳಿಕ ಕರಡು ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಜನಾಭಿಪ್ರಾಯ ಕೇಳಲಾಗುತ್ತದೆ.

ಕಣ್ಗಾವಲಿನ ವಿರುದ್ಧ ಅರ್ಜಿ

ಸಾರ್ವಜನಿಕರ ಕಂಪ್ಯೂಟರ್​ಗಳ ಮೇಲಿನ ಕಣ್ಗಾವಲು ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿವೆ. ಖಾಸಗಿ ಹಕ್ಕಿಗೆ ವಿರುದ್ಧವಾಗಿ ಈ ಆದೇಶ ಹೊರಡಿಸಿದ್ದು, ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ತಿದ್ದುಪಡಿಯಲ್ಲಿ ಏನಿರಲಿದೆ?

# ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವ್ಯವಸ್ಥೆಗೆ ತೆರೆ
# ಈ ಮೂಲಕ ಸಂದೇಶಗಳ ಮೂಲ ಹುಡುಕುವುದು ಸುಲಭ
# ಕಾನೂನು ಬಾಹಿರ, ದೇಶ ವಿರೋಧಿ ಅಥವಾ ಇತರ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿ ಭಾರತೀಯ ಆಯ್ದ ಏಜೆನ್ಸಿಗಳು ಮಾಹಿತಿ ಕೇಳಿದಾಗ 72 ಗಂಟೆಯೊಳಗೆ ದಾಖಲೆ ಬಹಿರಂಗ
# ಸುಳ್ಳು ಸುದ್ದಿಗಳ ಮೂಲ ಹುಡುಕಲು ಎಲ್ಲ ಕಂಪನಿಗಳಲ್ಲಿ ತಾಂತ್ರಿಕ ವ್ಯವಸ್ಥೆ ?ಸರ್ಕಾರ ಹಾಗೂ ಕಂಪನಿ ಮಟ್ಟದಲ್ಲಿ 24ಗಿ7 ಸಹಾಯವಾಣಿ
# ಕಾನೂನು ಬಾಹಿರ ಚಟುವಟಿಕೆಗೆ ಸಂಬಂಧಿಸಿ 180 ದಿನಗಳವರೆಗೆ ದಾಖಲೆಗಳ ಸಂಗ್ರಹ

ಕೇಂದ್ರದ ವಾದವೇನು?

# ಸುಳ್ಳು ಸುದ್ದಿಗಳ ಪತ್ತೆಗೆ ಪರ್ಯಾಯ ಮಾರ್ಗವಿಲ್ಲ
# ಸುಳ್ಳು ಸುದ್ದಿಗಳ ಮೂಲ ಪತ್ತೆ ಮಾಡಬೇಕಿದ್ದರೆ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವ್ಯವಸ್ಥೆಗೆ ಅಂತ್ಯ ಅನಿವಾರ್ಯ
# ಸಂವಹನ ಕಂಪನಿಗಳು ಅಸಹಾಯಕತೆ ತೋರಿದ ಹಿನ್ನೆಲೆಯಲ್ಲಿ ಕೇಂದ್ರವೇ ಕಾನೂನು ರಚಿಸುತ್ತಿದೆ.

ಏನಿದು ಎಂಡ್-ಟು- ಎಂಡ್ ಎನ್ಕ್ರಿಪ್ಶನ್?

ವಾಟ್ಸ್​ಆಪ್​ನ ಪ್ರತಿಯೊಬ್ಬ ಬಳಕೆದಾರರ ಸಂದೇಶಗಳು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಆಗಿರುತ್ತದೆ. ಈ ಪ್ರಕಾರ ‘ಎ’ ಎನ್ನುವ ವ್ಯಕ್ತಿ ಕಳುಹಿಸಿದ ಸಂದೇಶವು ‘ಬಿ’ ಎನ್ನುವ ವ್ಯಕ್ತಿಗೆ ಹೋಗುವ ಮಧ್ಯದಲ್ಲಿ ಅಥವಾ ನಂತರ ಯಾವುದೇ ಹ್ಯಾಕರ್, ಏಜೆನ್ಸಿ ಹಾಗೂ ಖುದ್ದು ವಾಟ್ಸ್​ಆಪ್ ಸರ್ವರ್ ಕೂಡ ಆ ಸಂದೇಶಗಳನ್ನು ಡಿಕೋಡ್ ಮಾಡಿ ಓದುವ ಸೌಲಭ್ಯವಿರುವುದಿಲ್ಲ. ಸಂದೇಶ ಕಳುಹಿಸಿದವರು ಹಾಗೂ ಸ್ವೀಕರಿಸಿದವರ ಮೊಬೈಲ್​ನಲ್ಲಿ ಮಾತ್ರ ಅದು ಡಿಕೋಡ್ ಆಗುತ್ತದೆ.