ಮೈಸೂರು: ನಂಜನಗೂಡಿನ ಜುಬಿಲೆಂಟ್ ಔಷಧ ಕಾರ್ಖಾನೆಯ ಮಾಲೀಕರು ನೀಡಿದ ಭಿಕ್ಷೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಣಿದಿದ್ದು, ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲಾಗಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆರೋಪಿಸಿದರು.
ಜಿಲ್ಲೆಯಲ್ಲಿ ಪತ್ತೆಯಾದ 91 ಕರೊನಾ ಪ್ರಕರಣಗಳ ಪೈಕಿ 74 ಜನರು ಈ ಕಾರ್ಖಾನೆಗೆ ಸಂಬಂಧಿಸಿದವರು. ಸೋಂಕು ಹರಡಿದ ಸಂಗತಿ ಬಹಿರಂಗವಾಗದ ಹಿಂದೆ ಭ್ರಷ್ಟಾಚಾರ ನಡೆದಿದ್ದು, ಮಾಲೀಕರಿಂದ ಕಿಕ್‌ಬ್ಯಾಕ್ ಸಂದಾಯವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಚೀನಾ, ಜಪಾನ್, ಸಿಂಗಾಪುರ, ಜರ್ಮನಿ ಸೇರಿ ವಿವಿಧ ದೇಶಗಳಿಂದ ಕಾರ್ಖಾನೆಗೆ ವಿದೇಶಿಯರು ಬಂದಿದ್ದು, ಇಲ್ಲಿಯವರು ವಿವಿಧ ದೇಶಗಳಿಗೆ ಭೇಟಿ ನೀಡಿ ವಾಪಸ್ ಆಗಿದ್ದಾರೆ. ಇವರಿಂದಲೇ ಸೋಂಕು ಹರಡಿರುವ ಕುರಿತು ದಾಖಲೆ ಇದೆ ಎಂದು ಸಚಿವರಾದ ವಿ.ಸೋಮಣ್ಣ, ಎಸ್.ಸುರೇಶ್‌ಕುಮಾರ್, ಡಾ.ಕೆ.ಸುಧಾಕರ ಹೇಳಿದ್ದರು. ಜತೆಗೆ, ‘ಈ ವಿಷಯದ ಕುರಿತು ಸುಮ್ಮನಿರಲು ದೆಹಲಿಯಿಂದ ಪ್ರಭಾವ, ಬಿಜೆಪಿಯಿಂದಲೇ ಒತ್ತಡ ಬರುತ್ತಿದ್ದು, ಪ್ರಕರಣದ ತನಿಖೆ ಹಾದಿ ತಪ್ಪುತ್ತಿದೆ’ ಎಂದು ಶಾಸಕ ಹರ್ಷವರ್ಧನ್ ಬಹಿರಂಗವಾಗಿ ಹೇಳಿದ್ದಾರೆ. ಹಾಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆ ನೀಡುವ 50 ಸಾವಿರ ಆಹಾರ ಕಿಟ್ ವಿತರಣೆ, 10 ಗ್ರಾಮಗಳನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿಪಡಿಸುವುದಕ್ಕೆ ಸರ್ಕಾರ ಸಮ್ಮತಿಸಿದೆ. ಇದರ ಅರ್ಥವೇನು? ಇದು ಆಮಿಷ ಅಲ್ವೇ? ಇದನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆಯ ಮಾಲೀಕರ ಒತ್ತಡಕ್ಕೆ ಸರ್ಕಾರ ಸಂಪೂರ್ಣವಾಗಿ ತಲೆಬಾಗಿದೆ. ಶ್ಯಾಮ್ ಎಸ್.ಬಾರ್ಟಿಯಾ, ಶೋಭನಾ ಬಾರ್ಟಿಯಾ ಇದರ ಮಾಲೀಕರು. ಹಿಂದುಸ್ತಾನ್ ಟೈಮ್ಸ್, ಮಿಂಟ್ ಎಂಬ ಮಾಧ್ಯಮ ಸಂಸ್ಥೆಗಳು ಸೇರಿ ಹತ್ತಾರು ಉದ್ದಿಮೆಗಳ ಮಾಲೀಕರಾಗಿದ್ದಾರೆ. ಇದರಲ್ಲಿ ಒಬ್ಬರು ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಇದರಿಂದಾಗಿಯೇ ಸತ್ಯ ಕತ್ತಲಿನಲ್ಲೇ ಇದೆ. ಹೀಗಾಗಿ, ಸಿಬಿಐ ತನಿಖೆಯಿಂದ ಮಾತ್ರ ನಿಜಾಂಶ ಹೊರಬರಲು ಸಾಧ್ಯ ಎಂದರು.
ಕರೊನಾ ಹರಡಿದ ಕಾರಣಕ್ಕೆ ತಬ್ಲಿಘಿ ಜಮಾತ್ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, 57 ದಿನಗಳು ಕಳೆದರೂ ಜುಬಿಲೆಂಟ್ ವಿರುದ್ಧ್ಧ ಎಫ್‌ಐಆರ್ ಸೇರಿ ಯಾವುದೇ ಕಾನೂನು ಕ್ರಮವಾಗಿಲ್ಲ. ಇದು ಕೇಂದ್ರ ಸರ್ಕಾರದ ಇಬ್ಬಗೆ ನೀತಿಗೆ ಸಾಕ್ಷಿ ಎಂದರು.
ಕಾರ್ಖಾನೆ ಪುನರಾರಂಭಕ್ಕೆ ನನ್ನ ವಿರೋಧವಿಲ್ಲ. ಈ ಕುರಿತು ಸರ್ಕಾರವೇ ನಿರ್ಧಾರ ಕೈಗೊಳ್ಳಲಿ. ಆದರೆ, ಕಾರ್ಖಾನೆಯಲ್ಲಿ ಸೋಂಕು ಹೇಗೆ? ಯಾರಿಂದ ಹರಡಿತು ಎಂಬುದು ಗೊತ್ತಾಗಬೇಕಿದೆ. ಈ ವಿಷಯವನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರು ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಲಿದ್ದಾರೆ ಎಂದು ತಿಳಿಸಿದರು.