ಸಾಲಿಗ್ರಾಮ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿತ್ತನೆ ಬೀಜ ಮತ್ತು ಕೃಷಿ ಸಲಕರಣೆಗಳಿಗೆ ಹೆಚ್ಚಿನ ಸಬ್ಸಿಡಿ ನೀಡುತ್ತಿಲ್ಲ, ರೈತರನ್ನು ಕಡೆಗಣಿಸಿದರೆ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದು ಹೊಸೂರು ಡೇರಿ ಅಧ್ಯಕ್ಷ ಬಿ.ರಮೇಶ್ ಎಚ್ಚರಿಕೆ ನೀಡಿದರು.
ತಾಲೂಕಿನ ಹೊಸೂರು ಗ್ರಾಮದ ಮಧು ಅವರ ಜಮೀನಿನಲ್ಲಿ ಭಾನುವಾರ ಆಯೋಜಿಸಿದ್ದ ಅಟಲ್ ಭತ್ತದ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನಿಗಳಿಗಿಂತ ರೈತ ಯಾವುದರಲ್ಲೂ ಹಿಂದೆ ಇಲ್ಲ. ಹೊಸ ತಳಿಗಳು ರೈತನ ಕೈಹಿಡಿದರೆ, ಕಂಪನಿಗಳು ಬೆಳೆಯುತ್ತವೆ. ಅದೇ ರೀತಿ ಲಿವಿಂಗ್ ಸೀಡ್ ಕಂಪನಿ ಚುಂಚನಕಟ್ಟೆ ಭಾಗದಲ್ಲಿ ನೀಡಿರುವ ಆರೋಹ ಮತ್ತು ಅಟಾಲ್ ಸ್ಥಳೀಯ ಭತ್ತ ಉತ್ಕೃಷ್ಟವಾಗಿ ಬೆಳೆದಿವೆ ಎಂದು ತಿಳಿಸಿದರು.
ಕಂಪನಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಅಟಲ್ ಭತ್ತದ ಬೆಳೆ ಬ್ಲಾಸ್ಟ್ ಮತ್ತು ಬೆಂಕಿ ರೋಗ ಸೇರಿದಂತೆ ಇತರ ರೋಗಗಳಿಂದ ಮುಕ್ತವಾದ ಬೆಳೆಯಾಗಿದ್ದು, ಹಳೆಯ ತಳಿಗಳ ಇಳುವರಿಗಿಂತ ಶೇ.15ರಿಂದ 20ರಷ್ಟು ಇಳುವರಿ ಹೆಚ್ಚಾಗಿದ್ದು, ಅಟಲ್ ಭತ್ತಕ್ಕೆ ಉತ್ತಮ ಪ್ರತಿಕ್ರಿಯೆ ರೈತರಿಂದ ಬರುತ್ತಿದೆ ಎಂದು ಮಾಹಿತಿ ನೀಡಿದರು.
ರೈತರು ಕೃಷಿ ಮಾಡುವಾಗ ಉತ್ತಮ ಬಿತ್ತನೆ ಬೀಜ ಪಡೆದು ಕೃಷಿ ಇಲಾಖೆ ಮತ್ತು ಕೃಷಿ ತಜ್ಞರಿಂದ ತರಬೇತಿ ಪಡೆದು ಗುಣಮಟ್ಟದ ಕೃಷಿ ಮಾಡಿದರೆ ಕೃಷಿಯಲ್ಲಿ ನಷ್ಟವಾಗಿದ ರೈತ ಇದುವರೆಗೆ ಯಾರೂ ಇಲ್ಲ. ಕಳಪೆ ಬಿತ್ತನೆ ಬೀಜ ಹಾಕಿದಾಗ ಹಾಗೂ ಪ್ರಕೃತಿ ವಿಕೋಪಕ್ಕೆ ಬೆಳೆ ಸಿಲುಕಿದಾಗ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂದು ಹೇಳಿದರು.
ಪ್ರಗತಿಪರ ರೈತರಾದ ಮಧು ಮತ್ತು ಎಚ್.ಕೆ.ಶಿವಣ್ಣ ಅವರನ್ನು ಸನ್ಮಾನಿಸಿ ಸ್ಪ್ರೇಯರ್ ವಿತರಿಸಲಾಯಿತು. ಹೊಸೂರು ಡೇರಿ ಅಧ್ಯಕ್ಷ ಎಚ್.ವಿ ಸ್ವಾಮಿ, ಕೃಷಿಕ ಸಮಾಜದ ನಿರ್ದೇಶಕ ಡಿಸಿ ರಾಮೇಗೌಡ, ಸಂಘದ ಮಾಜಿ ಅಧ್ಯಕ್ಷ ಯಶ್ವಂತ್ ಗೋಪಾಲ್, ಹರೀಶ್, ಕಂಪನಿಯ ವೆಂಕಟೇಶ್, ವಿತರಕ ಶಿವಕುಮಾರ್, ಉದ್ಯಮಿ ಸುದರ್ಶನ್ ಇತರರು ಇದ್ದರು.