ಅತೃಪ್ತ ಶಾಸಕರಿಂದ ಸರ್ಕಾರ ಪತನ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಬಿಜೆಪಿ ಯಾವುದೇ ಶಾಸಕರನ್ನು ಸೆಳೆಯುತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸಾಕಷ್ಟು ಗುಂಪುಗಳಾಗಿ ಚದುರಿ ಹೋಗಿದ್ದಾರೆ. ಆಡಳಿತ ಪಕ್ಷದ ಶಾಸಕರು ಕಚ್ಚಾಡುತ್ತಾ ಅನೇಕ ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಈ ಅತೃಪ್ತ ಶಾಸಕರು ತಾವೇ ಸರ್ಕಾರದಿಂದ ಹೊರಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಅವರೇ ಈ ಸರ್ಕಾರ ಪತನಕ್ಕೆ ಕಾರಣರಾಗುತ್ತಾರೆ ಎಂದು ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬೀಳುವ ಭಯದಿಂದ ಆಡಳಿತ ಪಕ್ಷದ ಕೆಲವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಲ್ಕೈದು ಗುಂಪುಗಳಾಗಿ ಅಸಮಾಧಾನ ಭುಗಿ ಲೆದ್ದಿದೆ. ಪರಿಸ್ಥಿತಿ ನೋಡಿ ಮುಖ್ಯಮಂತ್ರಿ ತಾವೇ ರಾಜೀನಾಮೆಗೆ ಮುಂದಾಗಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಶಾಸಕ ಗಣೇಶ್ ಅವರನ್ನು ಸರ್ಕಾರ ರಕ್ಷಿಸುತ್ತಿದೆ. ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಾ ಬಂದಿದೆ. ಅದನ್ನು ಈಗ ಮುಂದುವರಿಸಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭೆ ಸ್ಪರ್ಧೆ ಇಲ್ಲ: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ಪಕ್ಷದ ಎಲ್ಲ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ. ರಾಜ್ಯದ 25ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಿಸಿಕೊಡಬೇಕೆಂದು ನಿರ್ಧಾರ ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿಯೂ, ಮೋದಿ ಪ್ರಧಾನಿಯಾಗುತ್ತ್ತಾರೆ. ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ. ದೆಹಲಿ ಕಾರ‌್ಯಕಾರಿಣಿಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಶೀಘ್ರವೇ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ರಾಮುಲು ಹೇಳಿದರು.

ಮೋದಿ ಹಿತಕ್ಕೆ ಪ್ರಾರ್ಥನೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು. ಬಡವರ ಪರ ಉತ್ತಮ ಆಡಳಿತ ನೀಡುವಂತಾಗಬೇಕು. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋಧಿಯವರಿಗೆ ಶುಭವಾಗಲಿ ಎಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಶ್ರೀರಾಮುಲು ಹೇಳಿದರು.

ಕುಕ್ಕೆ ಕ್ಷೇತ್ರಕ್ಕೆ ಭೇಟಿ: ಶಾಸಕ ಶ್ರೀರಾಮುಲು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಶುಕ್ರವಾರ ರಾತ್ರಿಯೇ ಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಶನಿವಾರ ಮುಂಜಾನೆ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ದೇವಳಕ್ಕೆ ಆಗಮಿಸಿ ಸಂಕಲ್ಪ ನೆರವೇರಿಸಿದರು. ಬಳಿಕ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಮಹಾಪೂಜೆ ಮತ್ತು ನಾಗಪ್ರತಿಷ್ಠೆ ಸೇವೆ ನೆರವೇರಿಸಿ ಅನ್ನಪ್ರಸಾದ ಸ್ವೀಕರಿಸಿದರು. ಬಿಜೆಪಿ ಯುವ ಮುಖಂಡ ಶ್ರೀಕುಮಾರ್ ನಾಯರ್ ಬಿಲದ್ವಾರ, ಪ್ರಮುಖರಾದ ದಿನೇಶ್ ಕರ್ಕೇರ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.