ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್​ ಹಾಕಿದರೆ ಕಾದಿದೆ ಶಿಕ್ಷೆ !

ಬೆಂಗಳೂರು: ಎಂದಿನಂತೆ ಈ ಬಾರಿಯೂ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಬಾರಿಯ ಆಚರಣೆಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳಲಾಗಿದೆ.

ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಪರಮೇಶ್ವರ್​ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು, “ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ಒಳಗೆ ಆಚರಿಸಲಾಗುವುದು. ರಾಜ್ಯ ಸರಕಾರ ಕಳೆದ ಮೂರು ವರ್ಷದಿಂದ ಟಿಪ್ಪು ಜಯಂತಿ ಆಚರಿಸುತ್ತಾ ಬರುತ್ತಿದೆ. ಕೆಲವರು ಈ ಜಯಂತಿಗೆ ಭಂಗ ತರುವ ಹೇಳಿಕೆ ನೀಡುತ್ತಿರುವುದರಿಂದ ಇಷ್ಟೆಲ್ಲ ತೊಂದರೆಯಾಗುತ್ತಿದೆ,” ಎಂದು ಪರಮೇಶ್ವರ್​ ತಿಳಿಸಿದ್ದಾರೆ.

ಪರ, ವಿರೋಧದ ಮೆರವಣಿಗೆಗೆ ಅವಕಾಶವಿಲ್ಲ

“ಟಿಪ್ಪು‌ ಜಯಂತಿ‌ ವೇಳೆ ಪರ ಅಥವಾ ವಿರೋಧದ ಮೆರವಣಿಗೆಗಳಿಗೆ ಅವಕಾಶ ನೀಡುವುದಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಸಭಾಂಗಣದಲ್ಲಿ‌ ಮಾತ್ರ ಆಚರಣೆ ಮಾಡಬೇಕು. ಜಯಂತಿ ಆಚರಣೆಯ ಸ್ಥಳ ಹೊರತುಪಡಿಸಿ ಬೇರೆಡೆ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ,” ಎಂದು ಪರಂ ತಿಳಿಸಿದ್ದಾರೆ.

ಅವಹೇಳಕನಾರಿ ಪೋಸ್ಟ್ ಹಾಕಿದರೆ ಕಾನೂನು ಕ್ರಮ

ಸೋಶಿಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ, ಪ್ರಚೋದನಾಕಾರಿ ಪೋಸ್ಟ್‌ ಹಾಕುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಇದೇ ವೇಳೆ ಪೊಲೀಸರಿಗೆ ಪರಮೇಶ್ವರ್​ ಸೂಚನೆ ನೀಡಿದ್ದಾರೆ.

ಭದ್ರತೆ ಕಾರಣಕ್ಕೆ ಸ್ಥಳ ಬದಲಾವಣೆ

ಭದ್ರತೆ ದೃಷ್ಟಿಯಿಂದ ಈ ಬಾರಿಯ ಆಚರಣೆಯನ್ನು ರವೀಂದ್ರ ಕಲಾಕ್ಷೇತ್ರದಲ್ಲಿ‌ ಆಚರಿಸಲಾಗುತ್ತಿದೆ. ಕಳೆದ ಬಾರಿ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಆಚರಣೆ ಮಾಡಿದ್ದರಿಂದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸ್ಥಳ ಬದಲಾವಣೆ ಮಾಡಿದ್ದೇವೆ. ಸರಕಾರದ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳೂ ರವೀಂದ್ರ ಕಲಾಕ್ಷೇತ್ರದಲ್ಲಿಯೇ ಮಾಡುವುದರಿಂದ ಟಿಪ್ಪು ಜಯಂತಿ ಕೂಡ ಇಲ್ಲಿಯೇ ಅಚರಣೆ ಮಾಡಲು ಸೂಚಿಸಲಾಗಿದೆ ಎಂದರು.

ಭದ್ರತೆ ಕುರಿತಂತೆ ಎಲ್ಲ ಜಿಲ್ಲೆಗಳ ಎಸ್‌ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ.‌ ಅಚರಣೆಗೆ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ನಮ್ಮ ಕೆಎಸ್ ಆರ್‌ಪಿ‌ ಬೆಟಾಲಿಯನ್‌‌ ಅನ್ನು ಕಳುಹಿಸಿದ್ದೇವೆ. ಹೀಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕಳುಹಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಆಚರಣೆ ಸಂದರ್ಭದಲ್ಲಿ ಗಲಭೆ, ಶಾಂತಿ ಭಂಗ ಮಾಡಲು ಪ್ರಯತ್ನ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಭಂಗ ಮಾಡುವ ಹೇಳಿಕೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.