ಹೆರಿಗೆ ರಜೆಗೆ ಸರ್ಕಾರಿ ವೇತನ

ನವದೆಹಲಿ: ಉದ್ಯೋಗಸ್ಥ ಮಹಿಳೆಯರಿಗೆ ನೀಡುವ 26 ವಾರಗಳ ಹೆರಿಗೆ ರಜೆಯ ಪೈಕಿ 7 ವಾರದ ರಜೆಯ ವೇತನ ಹಾಗೂ ಮತ್ತಿತರ ಭತ್ಯೆಯನ್ನು ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾತೃತ್ವ ಸೌಲಭ್ಯ (ತಿದ್ದುಪಡಿ) ಕಾಯ್ದೆ, 2017 ಪ್ರಕಾರ ಮಹಿಳಾ ಉದ್ಯೋಗಿಗಳ ಮಾತೃತ್ವ ರಜೆ 12 ವಾರದಿಂದ 26 ವಾರಗಳಿಗೆ ಹೆಚ್ಚಳವಾಗಿದೆ. ಈ ಹೆಚ್ಚುವರಿ 14 ವಾರಗಳ ಪೈಕಿ 7 ವಾರಗಳ ವೇತನ ಮತ್ತಿತರ ಭತ್ಯೆಯನ್ನು ಪರಿಹಾರ ರೂಪದಲ್ಲಿ ಉದ್ಯೋಗದಾತರಿಗೆ ಮರುಪಾವತಿಸಲು ಸರ್ಕಾರ ಬಯಸಿದ್ದು, ಈ ಕುರಿತ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಈ ಸಂಬಂಧ ಕೇಂದ್ರ ಕಾರ್ವಿುಕ ಇಲಾಖೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಕನಿಷ್ಠ 15 ಸಾವಿರ ರೂ. ವೇತನ ಹೊಂದಿರುವ ಮಹಿಳೆಯರಿಗೆ ಈ ನಿಯಮ ಅನ್ವಯವಾಗುತ್ತದೆ.

ಪ್ರಸ್ತಾವನೆಗೆ ಕಾರಣ: ಮಾತೃತ್ವ ಸೌಲಭ್ಯ (ತಿದ್ದುಪಡಿ) ಕಾಯ್ದೆ, 2017 ಜಾರಿಗೆ ಬಂದ ನಂತರದಲ್ಲಿ ರಾಷ್ಟ್ರದ ಶೇ.11ಕ್ಕೂ ಹೆಚ್ಚು ಉದ್ಯೋಗದಾತರು ಮಹಿಳಾ ಸಿಬ್ಬಂದಿ ನೇಮಕಕ್ಕೆ ನಿರಾಕರಿಸಿದ್ದರು. ಇನ್ನು ಶೇ.46 ಸಂಸ್ಥೆಗಳು ನೇಮಕಾತಿಯಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದವು. ಮಾತೃತ್ವ ರಜೆ ಪಡೆವ ಮಹಿಳೆಯರಿಗೆ ಆ ಅವಧಿಯಲ್ಲಿ ಪೂರ್ಣ ಪ್ರಮಾಣದ ಸಂಬಳ ಮತ್ತಿತರ ಭತ್ಯೆಗಳನ್ನು ಪಾವತಿಸಬೇಕಾಗುತ್ತದೆ. ಇದು ಹೆಚ್ಚುವರಿ ವೆಚ್ಚ ಎಂಬುದು ಉದ್ಯೋಗದಾತರ ಪ್ರತಿಪಾದನೆ. ಇನ್ನು ಕೆಲವು ಸಂಸ್ಥೆಗಳು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡರೂ, ಮಾತೃತ್ವ ರಜೆ ಪಡೆಯುವ ಸುಳಿವು ದೊರೆಯುತ್ತಲೇ ರಾಜೀನಾಮೆ ನೀಡುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದವು. ಇಲ್ಲವೇ ಕ್ಷುಲ್ಲಕ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದವು. ಉದ್ಯೋಗದಾತರ ಇಂತಹ ಕ್ರಮದಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ 11ರಿಂದ 18 ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಾರ್ವಿುಕ ಇಲಾಖೆ ಈ ಪ್ರಸ್ತಾವನೆ ಸಿದ್ಧಪಡಿಸಿದೆ.