ಸರ್ಕಾರಿ ಕಾರಿನಲ್ಲಿ ಭವಾನಿ ರೇವಣ್ಣ ಓಡಾಟ

ಚಿಕ್ಕಮಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬಕ್ಕೆ ಸರ್ಕಾರಿ ಕಾರುಗಳ ಮೇಲಿನ ಅತೀವ ಮೋಹ ಪದೇಪದೆ ಸಾಬೀತಾಗುತ್ತಿದೆ.

ವಾರದ ಹಿಂದಷ್ಟೇ ಸಚಿವರ ಪುತ್ರ ಪ್ರಜ್ವಲ್ ರೇವಣ್ಣ ಜೆಡಿಎಸ್ ಕಾರ್ಯಕರ್ತರ ಸಭೆಗೆ ಹೋಗಲು ಸರ್ಕಾರಿ ಕಾರು ಬಳಕೆ ಮಾಡಿ ಸಾರ್ವಜನಿಕರ ಆಕ್ಷೇಪಕ್ಕೆ ಒಳಗಾಗಿದ್ದರು. ಈ ಸುದ್ದಿ ತಣ್ಣಗಾಗುವ ಮೊದಲೇ ಸಚಿವರ ಪತ್ನಿ ಭವಾನಿ ರೇವಣ್ಣ ಈಗ ಸರ್ಕಾರಿ ಕಾರು ಬಳಕೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ನಗರದ ಪ್ರವಾಸಿ ಮಂದಿರಕ್ಕೆ ಶನಿವಾರ ಬೆಳಗ್ಗೆ 11 ಗಂಟೆಗೆ ಕೆಎ-01, ಜಿಎ8009 ನೋಂದಣಿ ಕಾರಿನಲ್ಲಿ ಭವಾನಿ ರೇವಣ್ಣ ಆಗಮಿಸಿದ್ದರು. ಕಾರು ಚಾಲಕ ಹಾಗೂ ಗನ್​ವ್ಯಾನ್ ಭವಾನಿ ರೇವಣ್ಣ ಜತೆಗಿದ್ದರು. ಪ್ರವಾಸಿ ಮಂದಿರದಲ್ಲಿ ಭವಾನಿ ರೇವಣ್ಣ ಅವರ ಸಂಬಂಧಿಕರು ಎರಡು ದಿನಗಳಿಂದ ಇದ್ದರು. ಸಂಬಂಧಿಕರ ಮಕ್ಕಳು ನಗರ ಹೊರವಲಯದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಮಧ್ಯಾಹ್ನ ಸಂಬಂಧಿಕರ ಜತೆ ಸರ್ಕಾರಿ ಕಾರಿನಲ್ಲೇ ಭವಾನಿ ರೇವಣ್ಣ ಹೊರಹೋದರು.

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಅವರು ಸರ್ಕಾರಿ ಕಾರು ಬಳಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ವಿಡಿಯೋ ಮಾಡಿದರು. ಇದನ್ನು ಗಮನಿಸಿದ ಭವಾನಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ಪ್ರವಾಸಿ ಮಂದಿರದಲ್ಲಿ ಕೆಎ-01, ಜಿ-5338 ನೋಂದಣಿಯ ಮತ್ತೊಂದು ಸರ್ಕಾರಿ ಇನೋವಾ ಕಾರು ಕೂಡ ಅಲ್ಲಿತ್ತು. ಇದನ್ನು ಯಾರು ತಂದಿದ್ದಾರೆಂಬ ಮಾಹಿತಿ ಪ್ರವಾಸಿ ಮಂದಿರದ ನೌಕರರಿಗೂ ಗೊತ್ತಿರಲಿಲ್ಲ.

ಭವಾನಿ ರೇವಣ್ಣ ಹಾಸನ ಜಿಪಂ ಸದಸ್ಯರಾಗಿದ್ದರೂ ಸರ್ಕಾರಿ ಕಾರು ಬಳಸಲು ಅವಕಾಶವಿಲ್ಲ. ಸರ್ಕಾರಿ ಕಾರನ್ನು ಬಳಸಿದ ಸಚಿವರ ಪತ್ನಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *