More

    ಕೊಟ್ಟ ಜಾಗ ವಾಪಸ್ ಪಡೆದ ಸರ್ಕಾರ!

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ನಿವಾಸಿ, ಪೆರ್ಲ ಸನಿಹದ ಕೆ.ಕೆ ರಸ್ತೆ ಅಜಿಲಡ್ಕದಲ್ಲಿ ವಾಸಿಸುತ್ತಿರುವ ಇಬ್ರಾಹಿಂ-ಸಾಹಿರ ದಂಪತಿಯ ಪುತ್ರಿ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿದ್ದು, ಆಕೆಯ ಸ್ವಂತ ಮನೆಯ ಕನಸು ಇನ್ನೂ ಕನಸಾಗಿಲ್ಲ. ಆಕೆಗೆ ಜಾಗ ಮಂಜೂರು ಮಾಡಿ ನೀಡಲಾಗಿದ್ದ ಹಕ್ಕುಪತ್ರವನ್ನೂ ಸರ್ಕಾರ ವಾಪಸ್ ಪಡೆದಿದೆ.

    24ರ ಹರೆಯದ ಆಯಿಷತ್ ಶಿಫಾನಾಳನ್ನು ಎಂಡೋಸಲ್ಫಾನ್ ಬಾಧೆ ಹಾಸಿಗೆ ಬಿಟ್ಟೇಳದಂತೆ ಹೊಸಕಿಹಾಕಿದೆ. ನರದೌರ್ಬಲ್ಯದಿಂದ ಕೈ, ಕಾಲುಗಳು ಸ್ವಂತಿಕೆ ಕಳೆದುಕೊಂಡಿದೆ. ಕಿವಿಯೂ ಕೇಳಿಸದೆ, ಮಾತೂ ಬಾರದೆ ಜೀವಚ್ಛವವಾಗಿ ಕಳೆಯುವ ದಯನೀಯ ಸ್ಥಿತಿಯಿದೆ. ಕೈಗಳು ಮುರುಟಿಕೊಂಡಿದ್ದು, ಅನ್ಯರ ಸಹಾಯವಿಲ್ಲದೆ ದೇಹವನ್ನು ಒಂದಿನಿತೂ ಕದಲಿಸಲಾಗದ ಸ್ಥಿತಿಯಿದೆ.

    ದಂಪತಿ ಅಹವಾಲು

    ಇಬ್ರಹಿಂ ಅವರಿಗೆ ಐವರು ಮಕ್ಕಳಿದ್ದು, ಮೂವರು ಪುತ್ರರು, ಇಬ್ಬರು ಪುತ್ರಿಯರಲ್ಲಿ ಆಯಿಷತ್ ಶಿಫಾನಾ ಸಣ್ಣವಳು. ತನ್ನ ಪಾಲಿನ 10 ಸೆಂಟ್ಸ್ ಸ್ಥಳದಲ್ಲಿ ಒಬ್ಬ ಪುತ್ರ ಮನೆ ಕಟ್ಟಿಸಿಕೊಂಡಿದ್ದು, ಅದಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡಿದ್ದಾನೆ. ಅಂಗವಿಕಲ ಪುತ್ರಿಯ ಹೆಸರಲ್ಲಿ ಸರ್ಕಾರ ಜಾಗ ಮಂಜೂರು ಮಾಡಿ, ಅದರ ಹಕ್ಕುಪತ್ರ ನೀಡಲಾಗಿತ್ತು. ಆದರೆ ಪುತ್ರನಿಗೆ 10 ಸೆಂಟ್ಸ್ ಜಾಗ ಇರುವುದಾಗಿ ತಿಳಿಸಿ, ಹಕ್ಕುಪತ್ರವನ್ನು ಸರ್ಕಾರ ವಾಪಸ್ ಪಡೆದುಕೊಂಡಿರುವುದಾಗಿ ಇಬ್ರಾಹಿಂ ತಿಳಿಸುತ್ತಾರೆ.

    ಮಕ್ಕಳು ಸಾಲ ಮಾಡಿ ದೊಡ್ಡ ಮನೆ ಕಟ್ಟಿಸಿಕೊಂಡಿದ್ದರೂ, ಪುತ್ರಿಯ ಪಾಲಿಗೆ ಮನೆಯಿಲ್ಲದ ಪರಿಸ್ಥಿತಿ ನಮ್ಮದಾಗಿದೆ. ನಮ್ಮ ಕಾಲಾನಂತರ ಪುತ್ರಿಯ ಭವಿಷ್ಯದ ಚಿಂತೆ ಕಾಡುತ್ತಿದೆ. ದಯನೀಯ ಸ್ಥಿತಿಯಲ್ಲಿರುವ ಪುತ್ರಿ ಆಯಿಷತ್ ಶಿಫಾನಾಳ ಹೆಸರಲ್ಲಿ ಮನೆಯೊಂದು ಲಭಿಸಿದಲ್ಲಿ ಸಂಕಷ್ಟದ ನಡುವೆ ಒಂದಷ್ಟು ನೆಮ್ಮದಿ ಜೀವನ ನಡೆಸಬಹುದು ಎಂದು ತಾಯಿ ಸಾಯಿರಾ ತಿಳಿಸುತ್ತಾರೆ.

    ಕುಟುಂಬಕ್ಕೆ ಜಾಗ ಹಾಗೂ ಮನೆ ಮಂಜೂರಾಗಿದ್ದರೂ, ಕೆಲವೊಂದು ತಾಂತ್ರಿಕ ಕಾರಣದಿಂದ ಅದನ್ನು ಹಿಂಪಡೆಯಬೇಕಾಗಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆ ಹೆಸರಲ್ಲಿ ಮನೆ ಮಂಜೂರಾಗುವಂತೆ ಮಾಡಲು ಪಂಚಾಯಿತಿ ವತಿಯಿಂದ ಶ್ರಮಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಪರಿಸ್ಥಿತಿ ಮನನ ಮಾಡಿಕೊಡಲಾಗುವುದು.
    -ಜೆ.ಎಸ್ ಸೋಮಶೇಖರ್, ಅಧ್ಯಕ್ಷ, ಎಣ್ಮಕಜೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts