ದತ್ತಪೀಠವನ್ನು ಆಕ್ರಮಣದಿಂದ ಮುಕ್ತಗೊಳಿಸಿ ಶ್ರೀ ದತ್ತಾತ್ರೇಯ ಪೀಠವೆಂದು ನಾಮಕರಣ ಮಾಡಿ

ಚಿಕ್ಕಮಗಳೂರು: ದತ್ತಪೀಠವನ್ನು ಆಕ್ರಮಣದಿಂದ ಮುಕ್ತಗೊಳಿಸಿ ಶ್ರೀ ದತ್ತಾತ್ರೇಯ ಪೀಠವೆಂದು ನಾಮಕರಣ ಮಾಡಬೇಕು ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ದತ್ತಪೀಠ ವಿವಿಧ ಕಾರಣದಿಂದ ಆಕ್ರಮಣಕ್ಕೆ ತುತ್ತಾಗಿದೆ. ಆಳುವವರ ನಿರ್ಲಕ್ಷ್ಯಂದ ಹಿಂದುಗಳು ಪೊಲೀಸ್ ರಕ್ಷಣೆಯಲ್ಲಿ ದತ್ತಮಾಲೆ ಕಾರ್ಯಕ್ರಮ ಮಾಡಬೇಕಿದೆ. ಅಲ್ಲಿರುವ ಗೋರಿಗಳನ್ನು ತೆರವುಗೊಳಿಸಿ ಗುಹಾಂತರ ದೇವಾಲಯದಲ್ಲಿ ಶಾಶ್ವತವಾಗಿ ಹಿಂದು ಅರ್ಚಕರನ್ನು ನೇಮಿಸಿ ಹಿಂದು ಭಕ್ತರಿಗೆ ಪೂಜೆ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎಲ್ಲ ವಿವಾದಕ್ಕೂ ಅಂತ್ಯ ಹಾಡಲು ಕಾಲ ಕೂಡಿಬಂದಿದೆ. ದತ್ತಪೀಠ ಹೋರಾಟದಲ್ಲಿ ಹಿಂದು ಸಂಘಟನೆಗಳ ಜತೆ ಬಿಜೆಪಿಯೂ ಭಾಗವಹಿಸಿತ್ತು. ಈಗ ಬಿಜೆಪಿ ಅಧಿಕಾರದಲ್ಲಿರುವುದರಿಂದ ಹಿಂದುಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ದತ್ತಪೀಠದಲ್ಲಿ ಕೂಡಲೆ ವಿಗ್ರಹ ಪ್ರತಿಷ್ಠಾಪಿಸಬೇಕು. ಪೀಠದಲ್ಲಿದ್ದ ಅಮೂಲ್ಯ ವಿಗ್ರಹಗಳು, ಕಾಣಿಕೆ ನಾಪತ್ತೆಯಾಗಿವೆ. ಆಸ್ತಿಗಳು ಹಸ್ತಾಂತರವಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅ.6ರಿಂದ ದತ್ತಮಾಲೆ ಅಭಿಯಾನ: ಅ.6ರಿಂದ 13ರವರೆಗೆ ದತ್ತಮಾಲೆ ಅಭಿಯಾನ ನಡೆಯಲಿದ್ದು, ಪೀಠದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ದೇಶದ ವಿವಿಧೆಡೆಯಿಂದ ಐದು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವರು. ನಾಗಾ ಸಾಧುಗಳು ಕುಂಭಮೇಳದಲ್ಲಿ ತೊಡಗಿರುವುದರಿಂದ ಕೆಲವರು ಮಾತ್ರ ಭಾಗವಹಿಸುವರು ಎಂದು ಗಂಗಾಧರ್ ಕುಲಕರ್ಣಿ ತಿಳಿಸಿದರು. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜತೆ ಪುನನ್ ಕಾಶ್ಮೀರದ ರಾಷ್ಟ್ರೀಯ ಸಂಯೋಜಕ ರಾಹುಲ್ ಕೌಲ್ ಭಾಗವಹಿಸುವರು. 6ರಂದು ದತ್ತಮಾಲೆ ಧರಿಸಲಿದ್ದು, 13ರಂದು ಬೆಳಗ್ಗೆ 9.30ಕ್ಕೆ ಶಂಕರಮಠದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಂಕರಮಠದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ನಂತರ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ, ಹೋಮ, ಪೂಜೆ ಹಾಗೂ ಸಾಧು ಸಂತರ ಧಾರ್ವಿುಕ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರಂಜಿತ್ ಶೆಟ್ಟಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ: ಶ್ರೀರಾಮ ಸೇನೆ ಜಿಲ್ಲಾ ಬೈಟಕ್​ನಲ್ಲಿ ರಂಜಿತ್ ಶೆಟ್ಟಿ ಅವರನ್ನು ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಧು (ನಗರಾಧ್ಯಕ್ಷ) ಅಭಿ (ಜಿಲ್ಲಾ ಸಂಘಟನಾ ಕಾರ್ಯದರ್ಶಿ), ರಾಘವೇಂದ್ರ ಕೆಸವೆ (ಜಿಲ್ಲಾ ಉಪಾಧ್ಯಕ್ಷ), ಅನಿಲ್ ನಾಯಕ್(ವಿಭಾಗ ಅಧ್ಯಕ್ಷ), ಅಭಿಲಾಷ್ (ವಿಭಾಗ ಗೌರವಾಧ್ಯಕ್ಷ ), ಸತೀಶ್ ಪೂಜಾರಿ (ವಿಭಾಗ ಪ್ರಧಾನ ಕಾರ್ಯದರ್ಶಿ) ಅವರು ಸಮಿತಿ ಇತರ ಪದಾಧಿಕಾರಿಗಳಾಗಿದ್ದಾರೆ.

Leave a Reply

Your email address will not be published. Required fields are marked *