| ನಬಿ ಆರ್. ಬಿ. ದೋಟಿಹಾಳ
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನಮ್ಮ ಜನಪ್ರತಿನಿಧಿಗಳು ಹೇಳುವುದು ಒಂದೇ ಮಾತು, ‘ಸರ್ಕಾರಿ ಶಾಲಾ, ಕಾಲೇಜುಗಳು ಉಳಿಯಬೇಕು’ ಎಂದು. ಆದರೆ ಸರ್ಕಾರಿ ಶಾಲಾ, ಕಾಲೇಜುಗಳ ಸಮಸ್ಯೆ ಬಗ್ಗೆ ಕೇಳವವರೇ ಇಲ್ಲದಂತಾಗಿದೆ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ 70,727 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಶಿಕ್ಷಣ ಇಲಾಖೆಯೊಂದರಲ್ಲೇ ಇಷ್ಟು ಹುದ್ದೆಗಳು ಖಾಲಿ ಇವೆ ಎಂದರೆ ಇನ್ನೂ ಬೇರೆ ಬೇರೆ ಇಲಾಖೆಗಳ ಸ್ಥಿತಿ ಏನಿರಬಹುದು? ಅಲ್ಲಿ ಎಷ್ಟು ಖಾಲಿ ಹುದ್ದೆ ಇರಬಹುದು ಎಂಬುದನ್ನು ಊಹಿಸಿಕೊಂಡರೆ ಗಾಬರಿಯಾಗುತ್ತದೆ.
ಎಲ್ಲ ಮಕ್ಕಳಿಗೂ ಶಿಕ್ಷಣ ಕಡ್ಡಾಯ ಎಂದು ಶಾಸನ ರೂಪಿಸಲಾಗಿದೆ. ಆದರೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಸಾಮಾಜಿಕ ಹೊಣೆಗಾರಿಕೆಯನ್ನು ಸರ್ಕಾರ ಮರೆತಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯನ್ನು ಯಾಕಿಷ್ಟು ನಿರ್ಲಕ್ಷಿಸುತ್ತಿದೆ? ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇರುವ ಅಡ್ಡಿ ಏನು? ಸರ್ಕಾರದ ಬಳಿ ಹಣ ಇಲ್ವಾ? ಅಥವಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಮನಸ್ಸು ಇಲ್ವಾ? ಶಿಕ್ಷಣ ಇಲಾಖೆಯ ಮೇಲೆ ಇಷ್ಟು ತಾತ್ಸಾರ ಧೋರಣೆ ಯಾಕೆ? ಕೆಲವು ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ ಮೂರು ತರಗತಿಗಳನ್ನು ಒಬ್ಬರೇ ಶಿಕ್ಷಕರು ನಿಭಾಯಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಕಲಿಯುತ್ತಿದ್ದಾರೆ. ಹೀಗಿರುವಾಗ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಶಿಕ್ಷಕರೇ ಇಲ್ಲದಿದ್ದಾಗ ಅವರು ಶಿಕ್ಷಣದಿಂದ ವಂಚಿತರಾದಂತಲ್ಲವೆ? ಅಗತ್ಯಕ್ಕೆ ತಕ್ಕಂತೆ ಶಾಲೆಗೆ ಶಿಕ್ಷಕರನ್ನು ನೇಮಿಸದಿರುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಸರ್ಕಾರಿ ಶಾಲಾ, ಕಾಲೇಜುಗಳ ಅವ್ಯವಸ್ಥೆಯನ್ನು ಸರಿಪಡಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಬೇಕು.
ಚಿನ್ನದ ಕತ್ತಿ, ಕಿರೀಟ… ಹರಾಜಿನತ್ತ ಕಣ್ಣು ಕುಕ್ಕುವ ಜಯಲಲಿತಾ ಆಭರಣಗಳು? ಹೀಗಿದೆ ವರದಿ | Jayalalithaa