ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಸೈಕಲ್ ಪೂರೈಕೆ

| ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಬಡ ವಿದ್ಯಾರ್ಥಿಗಳ ಶಾಲೆಗಳಿಗೆ ಹೋಗಿ ಬರಲು ಮತ್ತು ಕಲಿಕೆಯ ಮೇಲೆ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತವಾಗಿ ನೀಡುತ್ತಿರುವ ಸೈಕಲ್‌ಗಳು ಇದೀಗ ವಿತರಣೆಯಾದ ದಿನವೇ ದುರಸ್ತಿಗಾಗಿ ಸೈಕಲ್‌ಶಾಪ್ ಸೇರುತ್ತಿವೆ.!

2019-10ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕಿನ ವ್ಯಾಪ್ತಿಯ 18,097 ವಿದ್ಯಾರ್ಥಿಗಳಿಗೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ 8 ತಾಲೂಕಿನ ವ್ಯಾಪ್ತಿಯ 11812 ವಿದ್ಯಾರ್ಥಿಗಳಿಗೆ ಜುಲೈ ಕೊನೆಯ ವಾರದಿಂದ ಉಚಿತ ಸೈಕಲ್ ವಿತರಿಸಲಾಗುತ್ತಿದೆ. ಈ ಬಾರಿ ವಿತರಣೆಯಾಗುತ್ತಿರುವ ಸೈಕಲ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸರ್ಕಾರ ವಿದ್ಯಾರ್ಥಿಗಳಿಗೆ ಸೈಕಲ್ ಪೂರೈಕೆ ಮಾಡಲು ರಾಜ್ಯಮಟ್ಟದಲ್ಲಿ ಟೆಂಡರ್ ನೀಡಿರುವುದರಿಂದ ಗುತ್ತಿಗೆದಾರರು ಸೈಕಲ್ ಬಿಡಿಭಾಗಗಳನ್ನು ತಂದು, ತಾಲೂಕು, ಹೋಬಳಿ ಮಟ್ಟದ ಶಾಲಾ ಆವರಣದಲ್ಲಿ ಸಿದ್ಧಪಡಿಸಿ ಎಲ್ಲ ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಸೈಕಲ್ ಪೂರೈಕೆಯಾಗುವಾಗಲೇ ಚಕ್ರ ಬೆಂಡಾಗಿರುವ, ಬೆಲ್ ಬಾಗಿರುವ, ಹ್ಯಾಂಡಲ್ ಅಲುಗಾಡುವ ಹಾಗೂ ಚಕ್ರಗಳು ಚೈನ್‌ಕವರ್‌ಗೆ ಉಜ್ಜಿ ಶಬ್ದಮಾಡುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಚಕ್ರಗಳು ಕಳಪೆ ಗುಣ ಮಟ್ಟದಿಂದ ಕೂಡಿದೆ.

ಗ್ರಾಮೀಣ ರಸ್ತೆ ಯಲ್ಲಿ ಸಂಚರಿಸಿದೊಡನೆ ಚಕ್ರಗಳು ಬೆಂಡಾಗುತ್ತಿವೆ. ಈ ಬಾರಿಯ ಸೈಕಲ್‌ಗಳು ಕಳೆದ ಬಾರಿಯ ಸೈಕಲ್‌ಗಳಿಗಿಂತ ಕಡಿಮೆ ತೂಕ ಹೊಂದಿದ್ದು, ಬ್ಯಾಲೆನ್ಸ್ ಸಿಗುವುದಿಲ್ಲ. ಮಕ್ಕಳಿಗೆ ನೀಡಿದ ಸೈಕಲ್‌ಗಳು ನೇರವಾಗಿ ಸೈಕಲ್‌ಶಾಪ್‌ಗೆ ಕೊಂಡೊಯ್ದು 100 ರಿಂದ 200 ರೂ. ವರೆಗೆ ಖರ್ಚು ಮಾಡಬೇಕಾಗಿದೆ ಎಂದು ಪೋಷಕರು,ವಿದ್ಯಾರ್ಥಿಗಳು ದೂರಿದ್ದಾರೆ.

2018-19ನೇ ಸಾಲಿನಲ್ಲಿ ವಿತರಣೆಯಾಗಿರುವ ಸೈಕಲ್‌ಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದರಿಂದ ವಿದ್ಯಾರ್ಥಿಗಳು ದುರಸ್ತಿ ಮಾಡಿಕೊಳ್ಳಲು ಸಾಧ್ಯವಾಗದೆ ಗುಜರಿಗೆ ಹಾಕಿದ್ದಾರೆ. ಕೆಲವರು 500 ರಿಂದ 1000 ರೂ. ಖರ್ಚು ಮಾಡಿ ಬಳಕೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸೈಕಲ್‌ಗಳು ಮತ್ತು ಗುತ್ತಿಗೆದಾರರು ವಿತರಣೆ ಮಾಡುತ್ತಿರುವ ಸೈಕಲ್‌ಗಳ ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.ಕಡಿಮೆ ದರದಲ್ಲಿ ಸೈಕಲ್‌ಗಳನ್ನು ನೀಡಿದರೆ ಗುಣಮಟ್ಟದಾಗಿರಬೇಕು. ಹಾಗಂತ ಕಳಪೆ ಮಟ್ಟದ ಸೈಕಲ್ ವಿತರಣೆ ಮಾಡುವುದು ಸರಿಯಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೌಢ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಸೈಕಲ್‌ಗಳು ಸಂಪೂರ್ಣ ಕಳಪೆಮಟ್ಟದಿಂದ ಕೂಡಿವೆ. ಸೈಕಲ್‌ಗಳನ್ನು ವಿತರಣೆ ಮಾಡಿದ ಮರುದಿನವೇ ಮಕ್ಕಳು ದುರಸ್ತಿಗಾಗಿ ಸೈಕಲ್‌ಶಾಪ್ ತೆಗೆದುಕೊಂಡು ಹೋಗುತ್ತಿದ್ದಾರೆ. ಕಳಪೆ ಮಟ್ಟದ ಸೈಕಲ್‌ಗಳನ್ನು ವಿತರಣೆ ಮಾಡುತ್ತಿದ್ದರೂ ಡಿಡಿಪಿಐ, ಬಿಇಒಗಳ ಕ್ರಮ ಕೈಗೊಂಡಿಲ್ಲ. ಈಗಾಗಲೇ ಜಿಪಂ ಸಿಇಒ ಅವರ ಗಮನಕ್ಕೆ ತಂದಿದ್ದು, ಗುಣಮಟ್ಟದ ಸೈಕಲ್‌ಗಳ ವಿತರಣೆಗೆ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಆ.31ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಲಾಗುವುದು.
| ರಮೇಶ ಗೋರಲ, ಅಧ್ಯಕ್ಷ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸಮಿತಿ

ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುತ್ತಿರುವ ಸೈಕಲ್‌ಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ನಿಯಮದ ಅನುಸಾರ ಸೈಕಲ್‌ಗಳನ್ನು ಪೂರೈಕೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದುಕೊಂಡು ಕಳಪೆ ಮಟ್ಟದಾಗಿರುವುದು ಖಚಿತವಾದರೆ ಅಂತಹ ಸೈಕಲ್‌ಗಳನ್ನು ವಾಪಸ್ ಕಳುಹಿಸಿಕೊಡಲಾಗುವುದು.
| ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ.

Leave a Reply

Your email address will not be published. Required fields are marked *