ಸಿನಿಮಾ

ಸರ್ಕಾರಿ ಶಾಲೆ ಆರಂಭಕ್ಕೆ 29 ರ ಮುಹೂರ್ತ

ಧನಂಜಯ ಎಸ್. ಹಕಾರಿ ದಾವಣಗೆರೆ

ಇಷ್ಟು ದಿನವೂ ಬೇಸಿಗೆ ರಜೆ, ಮಜಾದಲ್ಲಿ ಮುಳುಗಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಮೇ 29ರಂದು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಲಿವೆ.

ಈ ಶೈಕ್ಷಣಿಕ ವರ್ಷವನ್ನು ಉತ್ತಮವಾಗಿ ಆರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಕೂಡ ಸಜ್ಜಾಗಿದೆ. ಆಯಾ ಶಾಲೆಗಳ ಸಿಬ್ಬಂದಿ ಮೇ 28 ರಂದೇ ಶಾಲೆ ತೆರೆದು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಬಿಸಿಯೂಟದ ಪರಿಕರಗಳಾದ ಅಕ್ಕಿ, ಬೇಳೆ, ಎಣ್ಣೆ ಹಾಗೂ ದಿನ ಬಳಕೆ ವಸ್ತುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

ಶಾಲೆ ಆರಂಭದ ಸಿದ್ಧತೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶೀಘ್ರ ಪೂರ್ವಭಾವಿ ಸಭೆ ನಡೆಸಲು ನೋಡಲ್ ಅಧಿಕಾರಿಗಳು ಸೂಚಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರಿವೀಕ್ಷಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಾಲೆಯಲ್ಲಿ ಪ್ರಖರ ಶಿಕ್ಷಣಕ್ಕಾಗಿ ಯಾವೆಲ್ಲ ಅಂಶ ಅಳವಡಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ಸಮವಸ್ತ್ರ ಹಾಗೂ ಪುಸ್ತಕ ವಿತರಣೆ

ರಾಜ್ಯ ಇಲಾಖೆಯಿಂದ ಪಠ್ಯಪುಸ್ತಕ, ಸಮವಸ್ತ್ರಗಳು ಬಂದಿದ್ದು, ಜಿಲ್ಲೆಯ ಎಲ್ಲ ಶಾಲೆಗಳಿಗೆ ಈಗಾಗಲೇ ರವಾನಿಸಲಾಗಿದೆ.

ಶಾಲೆ ಆರಂಭದ ದಿನವೇ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಪೈಪೋಟಿ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿ ರಾಜ್ಯದೆಲ್ಲೆಡೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಡಿಜಿಟಲೀಕರಣದ ಕೊರತೆ ಇರುವುದನ್ನು ಹೊರತುಪಡಿಸಿದರೆ ಉಳಿದ ಎಲ್ಲ ಅಂಶಗಳಲ್ಲಿ ಸರ್ಕಾರಿ ಶಾಲೆಗಳು ಬೆಸ್ಟ್ ಎನ್ನುವಂತಿವೆ.

ಶಿಕ್ಷಕರಿಂದ ಮನೆ ಮನೆಗೆ ಭೇಟಿ
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಸಲುವಾಗಿ ಶಿಕ್ಷಕರೇ ಮನೆ ಮನೆ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ದೂರವಾಣಿ ಕರೆ ಅಥವಾ ಮನೆಗಳಿಗೆ ಭೇಟಿ ನೀಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಶಿಕ್ಷಣ ಇಲಾಖೆ ಉಚಿತವಾಗಿ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಹೀಗಾಗಿ, ಗ್ರಾಮೀಣ ಭಾಗದ ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿರುತ್ತದೆ.

ಅತಿಥಿ ಶಿಕ್ಷಕರನ್ನು ನೇಮಿಸಿ
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಕೆಲವೊಂದು ಶಾಲೆಗಳಲ್ಲಿ ಒಬ್ಬ ಶಿಕ್ಷಕನೇ ಮುಖ್ಯಶಿಕ್ಷಕ, ಕ್ಲರ್ಕ್, ಕಚೇರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗುಣಮಟ್ಟದ ಶಿಕ್ಷಣ ನೀಡದೆ ಇದ್ದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾರೆ.

ಹೀಗಾಗಿ, ಖಾಸಗಿ ಶಾಲೆಗಳ ಸ್ಪರ್ಧಾತ್ಮಕ ಪೈಪೋಟಿ ಎದುರಿಸಲು ಇಲಾಖೆ ಶೀಘ್ರ ಅತಿಥಿ ಶಿಕ್ಷಕರನ್ನು ನೇಮಿಸಲು ಮುಂದಾಗಬೇಕಿದೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದರು.

ಮುಂದಿನ ಎರಡು ವಾರಗಳಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಲಿದ್ದು, ಪೂರ್ವಭಾವಿಯಾಗಿ ಶಾಲಾ ಕಟ್ಟಡದ ಕೋಣೆಗಳನ್ನು ಸ್ವಚ್ಛವಾಗಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಹಾಜರಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ತಿಪ್ಪೇಶಪ್ಪ, ಡಿಡಿಪಿಐ


Latest Posts

ಲೈಫ್‌ಸ್ಟೈಲ್