ಪ್ರತ್ಯೇಕತೆಯ ತಂತ್ರ ಪ್ರಗತಿಯೇ ಏಕಮಂತ್ರ

ಬೆಳಗಾವಿ: ‘ಸರ್ಕಾರವನ್ನು ಎಚ್ಚರಿಸಲು ಪ್ರತಿಭಟಿಸುತ್ತಿದ್ದೇವೆಯೇ ಹೊರತು, ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ. ಆದರೆ, ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಅನಿವಾರ್ಯವಾಗಲಿದೆ. ಉತ್ತರ ಕರ್ನಾಟಕದ 93 ಶಾಸಕರು ಅಭಿವೃದ್ಧಿ ವಿಷಯದಲ್ಲಿ ಧ್ವನಿ ಎತ್ತುತ್ತಿಲ್ಲ. ಹಾಗಾಗಿ ಜನರೇ ಸೊಲ್ಲೆತ್ತಿದ್ದಾರೆ. ಈ ಭಾಗದ ಜನ ಪರದೇಶಿಗಳು, ಕೈಲಾಗದವರು ಎಂದು ತಿಳಿದುಕೊಂಡರೆ ಅದು ಮೂರ್ಖತನ’.

ಇದು ಉತ್ತರ ಕರ್ನಾಟಕ ಭಾಗದ ವಿವಿಧ ಮಠಗಳ 65 ಸ್ವಾಮೀಜಿಗಳು, ಉತ್ತರ ಕರ್ನಾಟಕ ವೇದಿಕೆ ಸೇರಿ ಹಲವು ರೈತ ಸಂಘಟನೆಗಳ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ನೀಡಿದ ಖಡಕ್ ಎಚ್ಚರಿಕೆ. ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಕೇತಿಕ ಧರಣಿ ವೇಳೆ ಈ ಎಚ್ಚರಿಕೆ ನೀಡಿದ್ದು, ಅಭಿವೃದ್ಧಿ ಹೋರಾಟದಲ್ಲಿ ಜಾತಿ ವಿಷಯ ಬಿತ್ತಿ, ಜನರನ್ನು ದಾರಿ ತಪ್ಪಿಸಬೇಡಿ ಎಂದೂ ಕಿಡಿಕಾರಿದ್ದಾರೆ.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬಾಗಲಕೋಟೆಯ ಪರಮ ರಾಮಾರೂಡೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ವಿಜಯಪುರದ ಸಿದ್ದಾರೂಢ ಸ್ವಾಮೀಜಿ ಒಳಗೊಂಡು ವಿವಿಧ ಮಠಗಳ 65 ಸ್ವಾಮೀಜಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


ಮುಗಿಯದ ಸಿಎಂ ವಿರುದ್ಧದ ಬಿಸಿ

ಬೆಂಗಳೂರು: ಉತ್ತರ ಕರ್ನಾಟಕದ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕಾಂಗ್ರೆಸ್​ನ ಮಾಜಿ ಸಚಿವದ್ವಯರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕುಮಾರಸ್ವಾಮಿ ಕೇವಲ ರಾಮನಗರ, ಚನ್ನಪಟ್ಟಣದ ಸಿಎಂ ಅಲ್ಲ. ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ಈ ವಿಚಾರದಲ್ಲಿ ನೀಡಿರುವ ಹೇಳಿಕೆ ಹಿಂಪಡೆಯಲು ಸಿಎಂಗೆ ಮನವಿ ಮಾಡುತ್ತೇನೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಅಷ್ಟರಲ್ಲಿ ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಮೈತ್ರಿ ಸರ್ಕಾರಕ್ಕೆ ಉಂಟಾಗಿರುವ ಹಾನಿ ಸರಿಪಡಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಸ್ಥಾನಗಳ ಭರ್ತಿಯಲ್ಲೂ ಅಸಮತೋಲನವಾಗಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಿಂದ ಹೆಚ್ಚು ಶಾಸಕರು ಆಯ್ಕೆಯಾದರೂ ಸಚಿವ ಸ್ಥಾನ ಮಾತ್ರ ಹೆಚ್ಚು ಸಿಗುತ್ತಿಲ್ಲ. ರಾಮಕೃಷ್ಣ ಹೆಗಡೆ ಕಾಲದಿಂದಲೂ ಈ ಪ್ರವೃತ್ತಿ ಬೆಳೆದು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಧ್ಯೇಯ. ಕುಮಾರಸ್ವಾಮಿ ಉತ್ತರ ಕರ್ನಾಟಕ ಜನರ ಬಗ್ಗೆ ಮಾತನಾಡಿರೋದು ಗೊತ್ತಿಲ್ಲ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿರುವಾಗ ಎಲ್ಲವನ್ನೂ ಅರಿತು ಮಾತನಾಡಬೇಕು. ಅವರ ಜತೆ ಹಾಗೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದರು.

ಸಂಪುಟ ಸಭೆ ನಡೆಯಲಿ

ಬೆಳಗಾವಿ ಸುವರ್ಣಸೌಧ ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿದ್ದು, ಪ್ರತಿ ತಿಂಗಳು ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಬೇಕು. ಅಲ್ಲದೆ, ಬೆಳಗಾವಿಗೆ 2ನೇ ರಾಜಧಾನಿ ಸ್ಥಾನ ನೀಡಬೇಕು ಎಂಬಿತ್ಯಾದಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.

ಅಭಿವೃದ್ಧಿ ಮಾತು ಬಂದಾಗ ಬೆಂಗಳೂರಿನ ದುಡ್ಡು ಉತ್ತರ ಕರ್ನಾಟಕಕ್ಕೆ ಬಳಸುತ್ತಿದ್ದೇವೆ ಎನ್ನುವುದು ಸರಿಯಲ್ಲ. ರಾಣಿ ಚನ್ನಮ್ಮ ವಿವಿಗೆ ಸರ್ಕಾರ ಜಾಗ ನೀಡಿಲ್ಲ. ಕೃಷಿ, ಶಿಕ್ಷಣ, ಕೈಗಾರಿಕೆ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ. ಸುವರ್ಣಸೌಧ ಬಳಕೆಯಾಗಿಲ್ಲ. ತೆಲಂಗಾಣ ಪ್ರತ್ಯೇಕ ರಾಜ್ಯ ಆಯ್ತು. ಅನಿವಾರ್ಯವಾದರೆ ಉಕ ಪ್ರತ್ಯೇಕ ರಾಜ್ಯ ಆಗಬೇಕಾಗುತ್ತದೆ.

| ನಾಗನೂರು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠ

ಪ್ರತ್ಯೇಕ ಧ್ವಜಕ್ಕೆ ವಿರೋಧ

ಮಠಾಧೀಶರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದ ವೇಳೆ ಕೆಲವರು ಪ್ರತ್ಯೇಕ ರಾಜ್ಯದ ಧ್ವಜ ಪ್ರದರ್ಶಿಸಿ ಹಾರಿಸಲು ಮುಂದಾದಾಗ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿ, ಧ್ವಜ ಪಡೆದರು.

ರೈತರ ಸಮಗ್ರ ಸಾಲಮನ್ನಾ ಮಾಡುವಂತೆ ಬಿಜೆಪಿಯವರು ಪಾದಯಾತ್ರೆ ಮಾಡಿದ್ದರು. ಕೇಂದ್ರದಿಂದ ಸಾಲಮನ್ನಾ ಮಾಡಿಸಲು ಆಗಲಿಲ್ಲ. ರಾಜ್ಯ ಇಬ್ಭಾಗ ಮಾಡುವ ಕುತಂತ್ರದಲ್ಲೂ ಆ ಪಕ್ಷ ಯಶಸ್ಸು ಕಾಣುವುದಿಲ್ಲ.

| ಸಿ.ಎಸ್.ಪುಟ್ಟರಾಜು ಸಚಿವ

ಪ್ರತ್ಯೇಕ ರಾಜ್ಯ ಕೂಗನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ನಾವು ಯಾವತ್ತೂ ರಾಜ್ಯದ ನೆಲ, ಜಲಕ್ಕಾಗಿ ಹೋರಾಡಿದವರು. ನಂಜುಂಡಪ್ಪ ವರದಿ ಆಧಾರದ ಮೇಲೆ ಅಭಿವೃದ್ಧಿ ಯೋಜನೆ ಕೈಗೊಳ್ಳುತ್ತಿದ್ದೇವೆ. ಮುಂದೆಯೂ ಮುಂದುವರಿಸುತ್ತೇವೆ.

| ಡಾ.ಜಿ.ಪರಮೇಶ್ವರ್ ಡಿಸಿಎಂ

ಏಕೀಕರಣದ ತ್ಯಾಗ ಬಲಿದಾನ ಗೊತ್ತಿಲ್ಲದವರು ಇಬ್ಭಾಗದ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯ ಒಡೆಯಲು ಮುಂದಾದರೆ, ಅವರನ್ನು ರಾಜ್ಯ ದ್ರೋಹಿಗಳು ಎನ್ನಬೇಕಾಗುತ್ತದೆ.

| ಸಾ.ರಾ ಮಹೇಶ್ ಸಚಿವ

ಉತ್ತರ ಕರ್ನಾಟಕ ಸಾಕಷ್ಟು ಹಿಂದುಳಿದಿದೆ. ಈ ಹೋರಾಟ ಕೈಬಿಡಬೇಕು. ಅಖಂಡ ಕರ್ನಾಟಕದ ಭಾಗವಾಗಿ ಉಳಿಯಬೇಕು. ಸರ್ಕಾರ ಆ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು.

| ಪ್ರಮೋದಾದೇವಿ ಒಡೆಯರ್ ಮೈಸೂರು ರಾಜ ವಂಶಸ್ಥೆ

15 ದಿನ ಕಾದು ನೋಡಿ..

ನಿರೀಕ್ಷೆಯಂತೆ ಉಕ ಅಭಿವೃದ್ಧಿ ಆಗಿಲ್ಲ ಎನ್ನುವುದಕ್ಕೆ ಸಹಮತ ಇದೆ. ಸುವರ್ಣಸೌಧವನ್ನು ಶಕ್ತಿ ಕೇಂದ್ರ ಮಾಡಲು ಹಾಗೂ ಅಖಂಡ ಕರ್ನಾಟಕ ಏಕತೆಗಾಗಿ ಹೋರಾಟ ಮಾಡುತ್ತೇವೆ. ಸ್ವಾಮೀಜಿಗಳ ಮನವಿಯಂತೆ ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ. ಮಹದಾಯಿ ಸೇರಿ ನೀರಾವರಿಗೆ ಮಹತ್ವ ಕೊಡೋದು ಪ್ರತಿ ಸರ್ಕಾರದ ಕರ್ತವ್ಯ. ಆ. 2ರಂದು ಕರೆಕೊಟ್ಟಿರುವ 13 ಜಿಲ್ಲೆಗಳ ಬಂದ್ ಹಿಂದೆ ಪಡೆಯಬೇಕು. 13 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಇನ್ನು 15 ದಿನಗಳಲ್ಲಿ ಸರ್ಕಾರದ ಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ


ರಾಜ್ಯ ಒಡೆದಾಳುವ ಕುಮಾರಸ್ವಾಮಿ, ದೇವೇಗೌಡ

ಹುಬ್ಬಳ್ಳಿ: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಜತೆಗೂಡಿ ರಾಜ್ಯ ಒಡೆಯಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಎಚ್​ಡಿಕೆ ಹೇಳಿಕೆಗೆ ದೇವೇಗೌಡರ ಸಮ್ಮತಿ ಇದೆ. ಅನ್ನ, ಬೇಳೆ, ಚಿನ್ನ, ವಿದ್ಯುತ್ ಪೂರೈಕೆಯಾಗುತ್ತಿರುವುದು ಉತ್ತರ ಕರ್ನಾಟಕದಿಂದಲೇ ಎನ್ನುವುದು ಇವರಿಗೆ ನೆನಪಿರಲಿ ಎಂದು ಎಚ್ಚರಿಸಿದರು.

ಬಿಜೆಪಿ ಪ್ರತಿಭಟನೆ: ಉತ್ತರ ಕರ್ನಾಟಕ ನಿರ್ಲಕ್ಷ್ಯ ಹಾಗೂ ಮುಖ್ಯಮಂತ್ರಿಯವರ ಒಡೆದಾಳುವ ನೀತಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಭೈರಿದೇವರಕೊಪ್ಪ ಮಾಯಕಾರ ಕಾಲನಿಯಲ್ಲಿರುವ ಸಿಎಂ ಕುಮಾರಸ್ವಾಮಿ ಅವರ ಬಾಡಿಗೆ ಮನೆಗೆ ಮುತ್ತಿಗೆ ಯತ್ನ ನಡೆದರೂ, ಮನೆಯ ನಾಲ್ಕೂ ದಿಕ್ಕಿನಿಂದ ಸುತ್ತುವರಿದಿದ್ದ ಪೊಲೀಸರು ತಡೆದರು.

ಅಭಿವೃದ್ಧಿ ಬೇಕು, ಬಂದ್​ಗೆ ನಮ್ಮ ಬೆಂಬಲವಿಲ್ಲ…

ನಾಡು ಮುನ್ನಡೆಸುವ ಹೊಣೆ ಹೊತ್ತ ನಾಯಕರು, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರೆ ಪ್ರತ್ಯೇಕ ರಾಜ್ಯದ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಉತ್ತರ ಕರ್ನಾಟಕದ ಭಾಗಗಳು ಮೂಲ ಸೌಲಭ್ಯ ವಂಚಿತವಾಗಿವೆ. ಶೀಘ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

| ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತರಳಬಾಳು ಶಾಖಾ ಮಠ ಸಾಣೇಹಳ್ಳಿ

ಯಾರಲ್ಲಿಯೂ ಪ್ರತ್ಯೇಕವಾಗಬೇಕು ಎಂಬ ವಿಚಾರವಿಲ್ಲ. ಹೋರಾಟ ಬಲಗೊಳ್ಳುವ ಮುನ್ನ ಸರ್ಕಾರವು ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೊಷಿಸಬೇಕು.

| ಬಸವಜಯ ಮೃತ್ಯುಂಜಯ ಶ್ರೀಗಳು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠ

ಹದಿಮೂರು ಜಿಲ್ಲೆಗಳ ಅಭಿವೃದ್ಧಿಯಲ್ಲಿ ಆದ ಅನ್ಯಾಯದ ಬಗ್ಗೆ ಜನರ ಸಲಹೆ ಪಡೆದು ಹೋರಾಟದ ಹೆಜ್ಜೆ ಇಡಬೇಕಿತ್ತು. ಉ.ಕ.ಬಂದ್​ಗೆ ಕರೆ ನೀಡಿರುವುದಕ್ಕೆ ನಮ್ಮ ಬೆಂಬಲವಿಲ್ಲ.

| ಎಸ್. ಶಂಕರ್ ಉ.ಕ. ಜನಶಕ್ತಿ ಅಧ್ಯಕ್ಷ

ಕರ್ನಾಟಕ ಏಕೀಕರಣದ ಹಿಂದೆ ಹಲವು ಮಹನೀಯರ ಶ್ರಮ ಅಡಗಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆ.2 ರಂದು ನೀಡಲಾಗಿರುವ ಬಂದ್​ಗೆ ನಮ್ಮ ಬೆಂಬಲವಿಲ್ಲ.

| ಮಲ್ಲಿಕಾರ್ಜುನ ಕುಂಬಾರ ಕರ್ನಾಟಕ ಜನಬೆಂಬಲ ವೇದಿಕೆ ರಾಜ್ಯಾಧ್ಯಕ್ಷ

ಬಜೆಟ್​ನಲ್ಲಿ ಕಡೆಗಣಿಸಲ್ಪಟ್ಟ ಜಿಲ್ಲೆಗಳು ಇಂದು ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿವೆ. ಈ ಕೂಗಿಗೆ ರಾಜ್ಯ ಸರ್ಕಾರ, ಜೆಡಿಎಸ್, ಕಾಂಗ್ರೆಸ್ ಪರೋಕ್ಷ ಹೊಣೆ. ಈ ಹೋರಾಟಕ್ಕೆ ಬಿಜೆಪಿ ಬೆಂಬಲ ಇಲ್ಲ.

| ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ


ಎಚ್​ಡಿಕೆ ಹುಬ್ಬಳ್ಳಿ ಮನೆ ಮಾರಾಟಕ್ಕಿದೆ

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ ಮಾಯಕಾರ ಕಾಲನಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಾಡಿಗೆ ಪಡೆದಿದ್ದ ಮನೆಯನ್ನು ಅದರ ಮಾಲೀಕರು ಇದೀಗ ಮಾರಾಟ ಮಾಡಲು ಮುಂದಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಮನೆ ಮಾಡುವ ಆಶಯದೊಂದಿಗೆ 2016ರಲ್ಲಿ ಈ ಮನೆ ಪಡೆದು, ಈ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಜನರಿಗೆ ಹತ್ತಿರವಾಗುವ ಯೋಜನೆ ಹೊಂದಿದ್ದರು. ಕುಮಾರಸ್ವಾಮಿ ಮೇಲಿನ ಅಭಿಮಾನದಿಂದ ಮಾಲೀಕ ಸುರೇಶ ರಾಯರಡ್ಡಿ ಯಾವುದೇ ಬಾಡಿಗೆ ಪಡೆಯದೆ ಮನೆ ನೀಡಿದ್ದರು. ಈಗ ನನ್ನ ವೈಯಕ್ತಿಕ ಕಾರಣದಿಂದಾಗಿ ಕುಮಾರಸ್ವಾಮಿ ಅವರಿದ್ದ ಮನೆ ಸೇರಿ ಎರಡ್ಮೂರು ಆಸ್ತಿಗಳನ್ನು ಮಾರುತ್ತಿದ್ದೇನೆ. ಕುಮಾರಸ್ವಾಮಿ ಸದ್ಯಕ್ಕೆ ಆ ಮನೆಯಲ್ಲಿ ಇರಬಹುದು. ಆದರೆ, ಮಾರಾಟ ಮಾಡಿದ ಬಳಿಕ ಅದು ಖರೀದಿಸಿದವರಿಗೆ ಸೇರುತ್ತದೆ ಎಂದು ಮಾಲೀಕ ರಾಯರೆಡ್ಡಿ ಅವರು ಹೇಳಿಕೊಂಡಿದ್ದಲ್ಲದೆ, ಮನೆ ಮಾರುವುದಾಗಿ ಜಾಹೀರಾತು ಕೂಡ ನೀಡಿದ್ದಾರೆ.