ಮುದ್ದೇಬಿಹಾಳ: ಗ್ರಾಮ ಆಡಳಿತಾಧಿಕಾರಿಗಳ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಸಿ.ಎಸ್. ನಾಡಗೌಡ ಭರವಸೆ ನೀಡಿದರು.
ಸ್ಥಳೀಯ ತಾಲೂಕು ಆಡಳಿತ ಸೌಧ ಮುಂದೆ ಗ್ರಾಮ ಆಡಳಿತಾಧಿಕಾರಿಗಳ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮ ಆಡಳಿತಾಧಿಕಾರಿಗಳ ಕಾರ್ಯಭಾರದ ಹೊರೆ ಕಡಿಮೆ ಮಾಡುವುದು, ಸೌಲಭ್ಯ ಕೊಡುವುದು ಸೇರಿ ಅಗತ್ಯ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಜೂಲಗುಡ್ಡ, ಪ್ರಧಾನ ಕಾರ್ಯದರ್ಶಿ ರಿಯಾಜ್ ನಾಯ್ಕೋಡಿ, ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಮನೋಜ ರಾಠೋಡ ಇನ್ನಿತರರು ಮಾತನಾಡಿ, ತಮ್ಮ ಬೇಡಿಕೆಗಳು, ಮೊದಲ ಹಂತದ ಹೋರಾಟದಲ್ಲಿ ನಡೆದಿದ್ದ ಬೆಳವಣಿಗೆಗಳು ಸೇರಿ ಕೆಲ ಮಹತ್ವದ ಅಂಶಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಬಿಜೆಪಿ ಮುದ್ದೇಬಿಹಾಳ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ್ ನೇತೃತ್ವದ ಬಿಜೆಪಿ ತಂಡವು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಏತನ್ಮಧ್ಯೆ ಧರಣಿ ನಿರತರೆಲ್ಲರೂ ಸ್ಥಳದಲ್ಲೇ ಅಡುಗೆ ಮಾಡಿಸಿ ಊಟ ಮಾಡಿದರು.
ರಾಮು ಹೊಸೂರ, ಸುನೀಲ್ ರಾಠೋಡ, ಎ.ಎಸ್. ಬಾಬಾನಗರ, ಶ್ರೀನಿವಾಸ ಹುನಗುಂದ, ದೇವರಾಜ ಗುರಿಕಾರ, ರಫೀಕ್ ಮುಲ್ಲಾ, ಬಿ.ಕೆ. ನಂದಗೊಂಡ, ಎಚ್.ಸಿ. ಕೊರಬು, ಆರತಿ ಬಳವಾಟ, ಅನುಪಮ ಪೂಜಾರಿ, ಗಂಗಮ್ಮ ಕುಂಬಾರ, ಕಾವ್ಯ ಮುಲ್ಲಾಳ ಇತರರಿದ್ದರು.