ಎನ್.ಎಲ್. ಶಿವಮಾದು
ಗದಗ (ಲಕ್ಕುಂಡಿ): ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣ ಮಾಡಬೇಬ ಉದ್ದೇಶದಿಂದ ಪ್ರವಾಸೋದ್ಯಮ ಸಚಿವ ಎಚ್..ಕೆ. ಪಾಟೀಲ್ ಅವರು ಕೈಗೊಂಡಿರುವ ಪ್ರಾಚ್ಯ ವಸ್ತು ಅವಶೇಷಗಳ ಸಂಗ್ರಹ ಕಾರ್ಯವು ಹಬ್ಬದ ವಾತಾವರಣವಾಗಿ ಸಂಭ್ರಮಿಸಿತು.

ಇಡೀ ಲಕ್ಕುಂಡಿ ಪಟ್ಟಣವು ಭಾನುವಾರ ಜಾತ್ರೆಯಂತೆ ಕಲಕೆಗಟ್ಟಿತ್ತು. ಸಚಿವರು ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ್ ಆದಿಯಾಗಿ ಜಿಲ್ಲಾಧಿಕಾರಿಗಳು ಹಾಗೂ ಇಲಾಖರ ಅಧಿಕಾರಿಗಳನ್ನು ಪೂರ್ಣಕುಂಭ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಗ್ರಾಮಸ್ಥರು ತಮ್ಮಲ್ಲಿರುವ ಮೂರ್ತಿಗಳು, ಸ್ಮಾರಕಗಳು, ನಾಣ್ಯಗಳು, ಶಿಲಾಶಾಸನಗಳು, ತಾಮ್ರದ ಪತ್ರಗಳನ್ನು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದರು. ಪ್ರಾಚ್ಯವಸ್ತುಗಳನ್ನು ಸಂಗ್ತಹಿಸಲು ಮನೆ ಮುಂದೆ ಬಂದಂತಹ ಸಚಿವರಿಗೆ ಅರಸಿ ಬೆಳಗಿ ಮನೆಗೆ ಬರಮಾಂಡರು. ಬಳಿಕ ಹತ್ತಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ಪ್ರಾಚ್ಯ ವಸ್ತುಗಳನ್ನು ಸರ್ಕಾರದ ವಶಕ್ಕೆ ನೀಡಿದರು. ಈ ಘಳಿಗೆಯಲ್ಲಿ ಆ ವಸ್ರುಗಳಿಗೊಂದಿಗೆ ಇದ್ದ ಭಾವನಾತ್ಮಕ ಸಂಬಂಧವನ್ನು ನೆನೆದು ಭಾವುಕರಾದರು.
1,050 ಅವಶೇಷಗಳ ಸಂಗ್ರಹ
ಹಾಲಗುಂಡಿ ಬಸವೇಶ್ವರ ದೇವಸ್ಥಾನ ಆವರಣದಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಆರಂಭವಾಯಿತು. ಕಳೆದು ಮೂರು ದಿನಗಳಿಂದ (ನ.22ರಿಂದ 24ರವರೆಗೆ) ಒಟ್ಟು 1,050 ಅವಶೇಷಗಳನ್ನು ಸಂಗ್ರಹಿಸಲಾಯಿತು
ಶಿಲಾಯುಧಗಳು, ಶಿಲಾಯುಗ ಕಾಲದಲ್ಲಿ ಬಳಸುತ್ತಿದ್ದ ಮಡಿಕೆಗಳು, ರೇಖಾಚಿತ್ರವಿರುವ ಮತ್ತು ಲಿಪಿಗಳಿರುವ ಮಡಿಕೆಗಳು, ಬೌದ್ಧ ಧರ್ಮ ಆರಂಭದ ಸಮಯದ ಶಿಲ್ಪಗಳು, ಲಕ್ಕುಂಡಿಯಲ್ಕಿದ್ದ ಟಂಕಸಾಲೆಯಿಂದ ಲೊಕ್ಕಿಗದ್ಯಾಣರ ನಾಣ್ಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆಯು ಶಾಂತಿನಾಥ ಪುರಾಣದ ತಾಳೇಗರಿ, ಕಡತಗಳ ಸಂಗ್ರಹ, ಚಿತ್ರಪಟಗಳು, ಹಳ್ಳಿ ಮನೆಯಲ್ಲಿರುವ ಪಾರಂಪರಿಕ ವಸ್ತುಗಳು.
ಲಕ್ಕುಂಡಿ ಗತ ವೈಭವ ಮರು ಕಳಿಸುವ ಉದ್ದೇಶ
ಮನೆ ಮನೆಗಳಲ್ಲಿ ಪ್ರಾಚ್ಯಾಚಶೇಷಗಳನ್ನು ಸಂಗ್ರಹಿಸಿದ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಇಷ್ಟು ದಿನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಲಕ್ಕುಂಡಿ ಇತಿಹಾಸ, ಪರಂಪರೆಯನ್ನು ಮರಳಿ ಇರುವುದು ಮತ್ತು ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಲಕ್ಕುಂಡಿಯಲ್ಲಿ ಒಟ್ಟು 101 ದೇವಾಲಯ ಮತ್ತು 101 ಬಾವಿಗಳಿದ್ದು, ಇದರಲ್ಲಿ ಸುಮಾರು 60 ದೇವಾಲಯಗಳು ಕಾಣಿಸುತ್ತಿದೆ. ಉಳಿದ ದೇವಾಲಯಗಳನ್ನು ಉತ್ಖನನದ ಮೂಲಕ ಪತ್ತೆ ಹಚ್ಚಿ ಮರು ರಚನೆ ಮಾಡಲಾಗುವುದು. ಇತಿಹಾಸಕಾರರು ಮತ್ತು ಪ್ರಾಚ್ಯವಸ್ತು ಇಲಾಖೆಯ ಸಹಯೋಗದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಒಟ್ಟಾರೆ ಲಕ್ಕುಂಡಿಯನ್ನು ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪಾರಂಪರಿಕವಾಗಿ ಉಳಿಸಲು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಲಕ್ಕುಂಡಿಯನ್ನು ಆಳಿದ ರಾಜ ಮನೆತನಗಳು ಯಾವುವು?
ಲಕ್ಕುಂಡಿಯಲ್ಲಿ 10 ರಿಂದ 12ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಕಲಚೂರರು, ಹೊಯ್ಸಳರು, ವಿಜಯನಗರ ಅರಸರು ಆಳಿದ ಕಾಲದಲ್ಲಿ ದೇವಾಲಯಗಳ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು 5ನೇ ಶತಮಾನದಲ್ಲಿಯೂ ಲಕ್ಕುಂಡಿಯ ಪ್ರತೀತಿ ಇದೆ. ಶಿಲಾಯುಗದಿಂದ ಅಧುನಿಕ ಕಾಲದ ಹಸ್ತಪ್ರತಿವರೆಗೆ ಲಕ್ಕುಂಡಿ ಪರಂಪರೆ ಹೊಂದಿದೆ ಎಂದರು.
3,500 ವರ್ಷಕ್ಕೂ ಹಿಂದಿನ ಆಯುಧ ಪತ್ತೆ;
ಮಾನವವನು ಕಬ್ಬಿಣದ ಆಯುಧಗಳನ್ನು ಬಳಕೆ ಮಾಡುವ ಮುನ್ನವಿದ್ದ ಕಲ್ಲಿನ ಆಯುಧ ಪತ್ತೆಯಾಗಿವೆ. ಬ್ರಿಟಿಷರ ಕಾಲದ ನಾಣ್ಯಗಳು ದೊರೆತಿವೆ.
ರಾಮಾಯಣದ ಸ್ಮಾರಕಗಳ ಪತ್ತೆ
ಲಕ್ಕುಂಡಿ ಪಟ್ಟಣದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ರಾಮಾಯಣದ ಸ್ಮಾರಕಗಳು ಪತ್ತೆಯಾಗಿವೆ. ಮಾಯಾಜಿಂಕೆ, ರಾವಣನಿಗೆ ಸಂಬಂಧಿಸಿದ ಸ್ಮಾರಕಗಳನ್ನು ಕೆತ್ತಲಾಗಿದೆ.
ವಸ್ತು ಸಂಗ್ರಹಾಲಯ ನಿರ್ಮಾಣ
ಅವಶೇಷಗಳನ್ನು ಪತ್ತೆ ಹಚ್ಚಿದ ನಂತರ ಲಕ್ಕುಂಡಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ಪಾಟೀಲ್ ತಿಳಿಸಿದತು.
ಡಿಸೆಂಬರ್ ಗೆ ಉತ್ಖನನ ಆರಂಭ
ಭೂಮಿಯ ಮೇಲಿರುವ ಪ್ರಾಚ್ಯ ವಸ್ತುಗಳ ಜತೆಗೆ ಭೂಮಿಯೊಳಗೆ ಹುದುಗಿ ಹೋಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ಡಿಸೆಂಬರ್ ನಿಂದ ಉತ್ಖನನ ಮಾಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಹವಳ, ಮುತ್ತು, ಬಿಲ್ಲಿ, ಸುತ್ತಿನ ಬಿಲ್ಲಿ, ಬಂಗಾರದ ನಾಣ್ಯ, ಹಾಲಮಣಿ, ಹಸಿರುಮಣಿಯನ್ನು ಕಳೆದ 40 ವರ್ಷಗಳಿಂದ ಸಂಗ್ರಹ ಮಾಡಿದ್ದೆ. ಇದನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿ ಮಗನಿಗೆ ಉದ್ಯೋಗ ನೀಡುತ್ತಿದ್ದೇನೆ ಎಂದು ಪಾಟೀಲರು ಭರವಸೆ ನೀಡಿದ್ದಾರೆ.
– ಬಸಪ್ಪ ರಾಮಚಂದ್ರಪ್ಪ ಬಡಿಗೇರಲಕ್ಕುಂಡಿಯನ್ನು ಪಾರಂಪರಿಕ ಪ್ರದೇಶ ಮಾಡುವುದರಿಂದ ತಮ್ಮ ಜಾಗ ಹೋಗುತ್ತೆ ಅಂತೆಲ್ಲ ಸ್ಥಳೀಯರು ಆತಂಕ ಪಡಬೇಕಿಲ್ಲ. ಯುನೆಸ್ಕೋ ಪಟ್ಟಿ ಸೇರಲು ಸರ್ಕಾರ ಕೇಂದ್ರಕ್ಕೆ ಶೀಘ್ರ ಶಿಫಾರಸು ಮಾಡಲಿದೆ. ಲಕ್ಕುಂಡಿ ವಿಶ್ವ ಪಾರಂಪರಿಕ ತಾಣ ಆಗಲು ತುಂಬಾ ಸೂಕ್ತ ಪ್ರದೇಶವಾಗಿದೆ.
– ಎಚ್.ಕೆ. ಪಾಟೀಲ್, ಗದಗ ಜಿಲ್ಕಾ ಉಸ್ತುವಾರಿ ಸಚಿವರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಥಮ ಬಾರಿಗೆ ಲಕ್ಕುಂಡಿಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಇತರೆ ಜಿಲ್ಲೆ ಮತ್ತು ರಾಜ್ಯಗಳಿಗೂ ಇದು ಪ್ರೇರಣೆಯಾಗಲಿ.
_ ಸಿ.ಸಿ. ಪಾಟೀಲ್, ಮಾಜಿ ಸಚಿವ
ಕಾರ್ಯಕ್ರಮದಲ್ಲಿ ಭಾಗಿಯಾದವರು
ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್.ಪಿ. ಬಿ.ಎಸ್. ನ್ಯಾಮಗೌಡ, ಪ್ರಾಚ್ಯವಸ್ತು ಇಲಾಖೆ ಕಾರ್ಯದರ್ಶಿ ಸಲ್ಮಾ ಫಹೀಮ್, ಆಯುಕ್ತ ದೇವರಾಜ್, ನಿರ್ದೇಶಕ ಕೆ.ವಿ. ರಾಜೇಂದ್ರ, ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಯ್ಯ ಪೂಜಾರ್, ಉಪಾಧ್ಯಕ್ಷ ಪೀರ್ ಸಾಬ್ ನದಾಫ್, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ್ ಭಾಗವಹಿಸಿದ್ದರು.