ಮಸ್ಕಿ: ಪಟ್ಟಣದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳಗೆ ಮನವಿ ಸಲ್ಲಿಸಿದರು.
ಅಕ್ರಮವಾಗಿ ಮಟ್ಕಾ, ಮದ್ಯ ಮಾರಾಟ, ಜೂಜಾಟ ಹಾಗೂ ಮರಂ, ಉಸುಕು ಸಾಗಣೆ ನಿರಂತರವಾಗಿ ನಡೆದಿದೆ. ತುಂಗಭದ್ರಾ ಜಲಾಶಯದ ನೀರಾವರಿ ಇಲಾಖೆ ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡು ಲೇಔಟ್ ಮಾಡಿ ಸೈಟ್ ಮಾರಾಟ ಮಾಡುತ್ತಿದ್ದು, ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಪಟ್ಟಣದ ಅಶೋಕ ಶಾಸನ ಪ್ರದೇಶ ಅಭಿವೃದ್ಧಿ ಕಾಣದೆ ಪ್ರವಾಸಿಗರನ್ನು ನಿರಾಸೆ ಉಂಟು ಮಾಡುತ್ತಿದೆ.
ಸರ್ಕಾರ 10 ಕೋಟಿ ರೂ. ಮಂಜೂರು ಮಾಡಿದ್ದು, ಆದಷ್ಟು ಬೇಗ ಯೋಜನಾ ವರದಿ ತಯಾರಿಸಿ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು. ಕರವೇ (ನಾರಾಯಣ ಬಣ) ತಾಲೂಕು ಅಧ್ಯಕ್ಷ ದುರ್ಗಾರಾಜ ವಟಗಲ್, ಶಿವರಾಮೇಗೌಡ ಬಣದ ಅಧ್ಯಕ್ಷ ಆರ್.ಕೆ.ನಾಯಕ ಇತರರಿದ್ದರು.