ಸಹಜ ಸ್ಥಿತಿಗೆ ಮರಳದ ಸರ್ಕಾರಿ ಕಚೇರಿಗಳು

< ಅಧಿಕಾರಿ ವರ್ಗದ ಜತೆ ಸಾರ್ವಜನಿಕರೂ ವಿರಳ * ಹೆಚ್ಚಿನ ಸಿಬ್ಬಂದಿ ರಜೆ * ನಡೆಯದ ಸರ್ಕಾರಿ ಕೆಲಸಗಳು>

ಮಂಗಳೂರು: ಸರ್ಕಾರಿ ಕಚೇರಿಗಳು ಬಹುತೇಕ ಕಡೆ ಒಳಗೂ- ಹೊರಗೂ ಬಿಕೋ ಎನ್ನುತ್ತಿದ್ದವು. ಚುನಾವಣಾ ನೀತಿ ಸಂಹಿತೆ ಸಡಿಲಿಕೆಯ ಬಳಿಕವೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದ ಸರ್ಕಾರಿ ಕಚೇರಿಗಳು ಶನಿವಾರ ಸಹಜ ಸ್ಥಿತಿಗೆ ಮರಳಿದಂತೆ ಕಂಡುಬಂದಿಲ್ಲ.

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮತದಾನ ಗುರುವಾರ ನಡೆದು ನೀತಿ ಸಂಹಿತೆ ಸಡಿಲಿಕೆಯಾಗಿತ್ತು. ಆದರೆ ಅದರ ಮರುದಿನ ಶುಕ್ರವಾರ ಗುಡ್‌ಫ್ರೈಡೆ ಸರ್ಕಾರಿ ರಜೆ ಇತ್ತು. ಶನಿವಾರ ಒಂದು ದಿನ ‘ವರ್ಕಿಂಗ್ ಡೇ’, ಮತ್ತೆ ಭಾನುವಾರದ ರಜೆ. ಶನಿವಾರ ಒಂದು ದಿನ ರಜೆ ಹಾಕಿದರೆ ನಿರಂತರ ರಜೆ ಹಾಕಲು ಅವಕಾಶವಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಅಧಿಕ ಸಂಖ್ಯೆಯಲ್ಲಿ ರಜೆ ತೆಗೆದಿದ್ದಾರೆ. ಇನ್ನು ಕೆಲವು ಹಿರಿಯ ಅಧಿಕಾರಿಗಳು ಇವಿಎಂಗಳನ್ನಿಟ್ಟಿರುವ ಸ್ಟ್ರಾಂಗ್ ರೂಂ ಸಂಬಂಧಿಸಿ ಶನಿವಾರವೂ ಕರ್ತವ್ಯ ನಿರತರಾಗಿದ್ದರು.

ಮಿನಿ ವಿಧಾನಸೌಧದಲ್ಲಿ ಇವತ್ತು ಯಾವುದೇ ಕೆಲಸ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ಇಲ್ಲ. ಪ್ರಾಪರ್ಟಿ ಕಾರ್ಡ್ ಸಂಬಂಧಿಸಿ ಸರ್ವರ್ ಸರಿ ಇಲ್ಲ ಎಂದು ಸಾಮಾಜಿಕ ಕಾರ‌್ಯಕರ್ತರೋರ್ವರು ‘ವಿಜಯವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಸಹಿತ ವಿವಿಧ ಕಚೇರಿಗಳಲ್ಲಿ ಅಧಿಕಾರಿಗಳ ಹಾಜರಾತಿ ಕಡಿಮೆ ಇತ್ತು. ಕಚೇರಿಗಳಿಗೆ ಭೇಟಿ ನೀಡುತ್ತಿದ್ದ ಸಾರ್ವಜನಿಕರ ಸಂಖ್ಯೆಯೂ ಅತ್ಯಂತ ವಿರಳವಿತ್ತು. ಎಲ್ಲ ಪ್ರಮುಖ ಕಚೇರಿಗಳು ಇನ್ನೂ ಚುನಾವಣೆ ಮೂಡ್‌ನಿಂದ ಪೂರ್ಣ ಹೊರಬಂದಂತೆ ಕಾಣುತ್ತಿಲ್ಲ. ಚುನಾವಣೆ ಕಾರ್ಯಗಳಿಗೆ ಮೀಸಲಾಗಿದ್ದ ಕೊಠಡಿ ಹೊರಗೆ ಮತ್ತು ಒಳಗೆ ಹಾಕಿದ್ದ ಸೂಚನಾ ಫಲಕ, ಜಾಗೃತಿ ಫಲಕಗಳು ಹಾಗೆಯೇ ಇವೆ.

ಜಿಲ್ಲಾಧಿಕಾರಿ ಕಚೇರಿಗೆ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಭೇಟಿ ನೀಡಿದಾಗ ಕಚೇರಿ ವರಾಂಡ ಬಿಕೋ ಎನ್ನುತ್ತಿತ್ತು. ಒಳಗೆ ಅಧಿಕಾರಿಗಳ ಆಸನಗಳು ಸಾಕಷ್ಟು ಪ್ರಮಾಣದಲ್ಲಿ ಖಾಲಿ ಇತ್ತು.

ಮಹಾನಗರ ಪಾಲಿಕೆಯ ಪರಿಸ್ಥಿತಿಯೂ ಹೆಚ್ಚು ಭಿನ್ನವಿರಲಿಲ್ಲ. ಅಧಿಕಾರಿಗಳ ಕುರ್ಚಿಗಳು ಬಹುತೇಕ ಖಾಲಿ. ವರಾಂಡದಲ್ಲಿ ಬೆರಳೆಣಿಕೆಯ ಜನರು ಓಡಾಡುತ್ತಿದ್ದರು. ಖಾಲಿ ಆಸನಗಳಿರುವ ಕಡೆಯೂ ಮೇಲೆ ಫ್ಯಾನ್‌ಗಳು ತಿರುಗುತ್ತಿದ್ದವು. ಕೆಲವು ಸಿಬ್ಬಂದಿ ತಲೆಗೆ ಹೆಡ್‌ಫೋನ್ ಇಟ್ಟುಕೊಂಡು ಕುಳಿತಿದ್ದರು. ಪಾಲಿಕೆ ಆಯುಕ್ತರು ಬಾಕಿ ಫೈಲುಗಳಿಗೆ ರುಜು ಹಾಕುವುದರಲ್ಲಿ ವ್ಯಸ್ತರಾಗಿದ್ದರು.

ಸರ್ಕಾರಿ ಕಚೇರಿಗಳು ಸೋಮವಾರದ ನಂತರ ಸಹಜ ಸ್ಥಿತಿಗೆ ಮರಳಬಹುದು ಎಂದು ನಿರೀಕ್ಷಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ಹಾಜರಾತಿ ಕಡಿಮೆ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾನ ಮುಗಿದಿದೆ, ಏಪ್ರಿಲ್ 23ರಂದು ಮತದಾನ ನಡೆಯುವ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವುದರಿಂದ ಜಿಲ್ಲೆಯ ಹಲವು ಇಲಾಖೆಗಳು, ಜಿಲ್ಲಾಡಳಿತ ಚುನಾವಣಾ ಕರ್ತವ್ಯದಿಂದ ಪೂರ್ಣವಾಗಿ ವಿಮುಖವಾಗಲು ಸಾಧ್ಯವಾಗಿಲ್ಲ. ಆ ಕ್ಷೇತ್ರಕ್ಕೆ ಕೆಲವೇ ಅಧಿಕಾರಿ- ಸಿಬ್ಬಂದಿಯನ್ನು ಮಾತ್ರ ನಿಯೋಜಿಸಿದರೂ ಶನಿವಾರ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ- ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿತ್ತು.
ಇದುವರೆಗೆ ಚುನಾವಣೆ ಕೆಲಸಗಳಲ್ಲಿ ವ್ಯಸ್ತರಾಗಿದ್ದ ನೌಕರರಿಗೆ ಶುಕ್ರವಾರ (ಗುಡ್‌ಫ್ರೈಡೆ) ಮತ್ತು ಭಾನುವಾರ ರಜಾ ದಿನಗಳಾಗಿದ್ದು, ನಡುವಿನ ಶನಿವಾರವೂ ಹಲವರು ರಜೆ ತೆಗೆದುಕೊಂಡಿದ್ದಾರೆ. ಚುನಾವಣಾ ಕರ್ತವ್ಯ ಇಲ್ಲದವರಿಗೆ ನಾಲ್ಕು ದಿನಗಳ ರಜೆ ಅವಕಾಶ ಸಿಕ್ಕಿದೆ. ಹೀಗಾಗಿ ದೂರದ ಊರಿನ ಸಿಬ್ಬಂದಿ ದೀರ್ಘ ರಜೆಯಲ್ಲಿ ತಮ್ಮೂರಿಗೆ ತೆರಳಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಚುನಾವಣೆ ನೀತಿ ಸಂಹಿತೆ ಪೂರ್ಣವಾಗಿ ಸಡಿಲಗೊಂಡಿಲ್ಲ, ಹೀಗಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕುವ ಸಾರ್ವಜನಿಕರ ಸಂಖ್ಯೆಯೂ ಇಳಿಮುಖವಾಗಿದೆ.

ಜಿಲ್ಲಾ ಕೇಂದ್ರದ ಸರ್ಕಾರಿ ಕಚೇರಿಗಳಲ್ಲಿ ಶನಿವಾರ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಆಗಿಲ್ಲ. ಶುಕ್ರವಾರ ರಜೆ ದಿನ ಕೂಡ ಚುನಾವಣೆ ಸಂಬಂಧ ಕರ್ತವ್ಯ ನಿರತರಾಗಿದ್ದ ಕೆಲ ಅಧಿಕಾರಿಗಳು, ಸಿಬ್ಬಂದಿ ಅರ್ಧ ದಿನ ರಜೆ ಹಾಕಿದ್ದಾರೆ. ಸೋಮವಾರದಿಂದ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯಲಿದೆ.
ಆರ್.ವೆಂಕಟಾಚಲಪತಿ, ಅಪರ ಜಿಲ್ಲಾಧಿಕಾರಿ, ದ.ಕ.