More

    ಗ್ರಾಮಸ್ಥರಿಂದ ಸ್ವಯಂರಕ್ಷಣೆ; ಜಮ್ಮುವಿನಲ್ಲಿ ವಿಡಿಜಿ ಪುನಾರಚನೆ | ಉಗ್ರ ದಾಳಿ ಕಾರಣ

    ಕೆಲ ದಿನಗಳ ಹಿಂದೆ ಏಳು ಹಿಂದೂಗಳನ್ನು ಹತ್ಯೆಗೈದ ನಂತರ ಭಾರತ ಸರ್ಕಾರವು ದಕ್ಷಿಣ ಜಮ್ಮು ಪ್ರದೇಶದಲ್ಲಿ ಗ್ರಾಮ ರಕ್ಷಣಾ ಪಡೆಗಳನ್ನು ಪುನರುಜ್ಜೀವನಗೊಳಿಸುತ್ತಿದೆ. ಈ ಮೂಲಕ ಗ್ರಾಮಸ್ಥರೇ ಶಸ್ತ್ರಸಜ್ಜಿತರಾಗಿ ಭಯೋತ್ಪಾದಕರ ದಾಳಿಗಳ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಸನ್ನದ್ಧರಾಗಿದ್ದಾರೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಹಾಕಿತು. ಭಯೋತ್ಪಾದನೆ ದಮನ ಮಾಡಲು ಅನುಕೂಲವಾಗಲಿದೆ ಎಂಬುದು ಈ ಕ್ರಮದ ಹಿಂದಿನ ಉದ್ದೇಶವಾಗಿತ್ತು. ಒಟ್ಟಾರೆಯಾಗಿ ಕಾಶ್ಮೀರ ದಲ್ಲಿ ಭಯೋತ್ಪಾದನೆ ಚಟುವಟಿಕೆಗಳ ಪ್ರಮಾಣ ತಗ್ಗಿದ್ದರೂ ವರ್ಷಾರಂಭದಲ್ಲೇ ಜಮ್ಮು ಪ್ರದೇಶದ ಗ್ರಾಮವೊಂದು ಭಯೋತ್ಪಾದನಾ ದಾಳಿಗೆ ತುತ್ತಾದ ಹಿನ್ನೆಲೆಯಲ್ಲಿ ದಕ್ಷಿಣ ಜಮ್ಮು ಪ್ರದೇಶದಲ್ಲಿ ಗ್ರಾಮ ರಕ್ಷಣಾ ಕಾವಲುಗಾರರು (ವಿಡಿಜಿ) ಎಂಬ ನಾಗರಿಕ ಸೇನೆಯ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.

    ಜಮ್ಮು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ 1995ರಲ್ಲಿ ವಿಡಿಜಿ ವ್ಯವಸ್ಥೆ ರೂಪಿಸಲಾಗಿತ್ತು. ಆಗ ಇವುಗಳನ್ನು ಗ್ರಾಮ ರಕ್ಷಣಾ ಸಮಿತಿಗಳು ಎಂದು ಕರೆಯಲಾಗುತ್ತಿತ್ತು. ಕಾಶ್ಮೀರದಲ್ಲಿ ಭಯೋತ್ಪಾದಕರ, ಬಂಡುಕೋರರ ಸಶಸ್ತ್ರ ದಂಗೆಯನ್ನು ಎದುರಿಸುವ ಕಾರ್ಯವನ್ನು ಇವುಗಳಿಗೆ ವಹಿಸಲಾಗಿತ್ತು. 4,000 ಸದಸ್ಯರು ಮತ್ತು 27,000ಕ್ಕೂ ಹೆಚ್ಚು ಸ್ವಯಂಸೇವಕರು ಈ ಸಮಿತಿಗಳಲ್ಲಿದ್ದರು.

    2000ನೇ ಇಸವಿಯ ನಂತರದ ದಿನಗಳಲ್ಲಿ ಭಯೋತ್ಪಾಕರ ಹಾವಳಿ, ಬಂಡುಕೋರರ ದಂಗೆ ಕ್ಷೀಣಿಸತೊಡಗಿತು. ಅಲ್ಲದೆ, ಬಂಡಾಯ ಗುಂಪುಗಳು ಪ್ರಭಾವ ಕಳೆದುಕೊಳ್ಳತೊಡಗಿದವು. ಈ ಹಿನ್ನೆಲೆಯಲ್ಲಿ ಗ್ರಾಮ ರಕ್ಷಣಾ ಸಮಿತಿಗಳು ಕಣ್ಮರೆಯಾದವು.

    ಕೇಂದ್ರದಿಂದ ಕ್ರಮ: ಈಗ ಮತ್ತೆ ಈ ಪ್ರದೇಶದಲ್ಲಿನ ಅಲ್ಪಸಂಖ್ಯಾತರು, ಮುಖ್ಯವಾಗಿ ಹಿಂದೂಗಳು ಮತ್ತು ಸಿಖ್ಖರು ಭಯೋತ್ಪಾದಕರು, ಬಂಡುಕೋರರಿಂದ ದಾಳಿಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಮಾರ್ಚ್​ನಲ್ಲಿ ಕೇಂದ್ರ ಗೃಹ ಸಚಿವಾಲಯವು ವಿಡಿಜಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಈ ವರ್ಷದ ಜನವರಿಯಲ್ಲಿ ಭಯೋತ್ಪಾದಕರು ಏಳು ಹಿಂದೂ ನಾಗರಿಕರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ವಿಡಿಜಿ ಸ್ಥಾಪನೆಗೆ ತುರ್ತು ಕ್ರಮ ಕೈಗೊಂಡಿದೆ.

    2023ನೇ ವರ್ಷದ ಮೊದಲನೇ ದಿನವಾದ ಜನವರಿ 1ರಂದೇ ಜಮ್ಮು ಪ್ರದೇಶದ ರಜೌರಿ ಜಿಲ್ಲೆಯ ಧಂಗ್ರಿ ಎಂಬ ಹಳ್ಳಿ ನಿದ್ರಿಸುತ್ತಿರುವಾಗ ಬಂದೂಕುಗಳ ಘರ್ಜನೆ ಕೇಳಿಬಂದಿತು. ಭಾರತೀಯ ಸೇನೆಯ ಮಾಜಿ ಯೋಧ 42 ವರ್ಷದ ಸತೀಶ್ ಶರ್ಮಾ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಹದಿಹರೆಯದ ಮಗ ಮತ್ತು ಕಿರಿಯ ಸಹೋದರನಿಗೂ ಬುಲೆಟ್ ಗಾಯಗಳಾದವು. ಅದೇ ರಾತ್ರಿ, ಧಂಗ್ರಿಯಲ್ಲಿ ಇನ್ನೂ ಮೂವರು ನಾಗರಿಕರು ಕೊಲ್ಲಲ್ಪಟ್ಟರು. ಮರುದಿನ, ಸಾವಿನ ಸಂತ್ರಸ್ತರ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಅಸುನೀಗಿದರು. ಇದು ಉದ್ದೇಶಿತ ದಾಳಿ ಎಂದೇ ಗ್ರಾಮಸ್ಥರು ಭಾವಿಸಿ, ವಿಡಿಜಿಗಳನ್ನು ಪುನರುಜ್ಜೀವನಗೊಳಿಸಬೇಕೆಂಬ ಬೇಡಿಕೆಗಳು ಬಲವಾಗಿ ಕೇಳಿಬರತೊಡಗಿದವು.

    ಶಸ್ತ್ರ ಬೇಕು ಎನ್ನುವ ಜನರು: ಧಂಗ್ರಿ ಗ್ರಾಮವು ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವ ನಿಯಂತ್ರಣ ರೇಖೆಯ (ಎಲ್​ಒಸಿ) ಸಮೀಪದಲ್ಲೇ ಇದೆ. ಆದರೂ, ಭಯೋತ್ಪಾದಕರು ಮತ್ತು ಭಾರತೀಯ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಸಾಮಾನ್ಯವಾಗಿರುವ ಕಾಶ್ಮೀರ ಕಣಿವೆಯಂತಿರದೆ ಈ ಪ್ರದೇಶವು ಬಹುತೇಕ ಶಾಂತಿಯುತವಾಗಿದೆ. ಜನವರಿಯಲ್ಲಿ ಭಯೋತ್ಪಾದಕರ ದಾಳಿ ನಂತರ ಜನರಲ್ಲಿ ಭೀತಿ ಆವರಿಸಿದೆ. ‘ನಾವೀಗ ಧ್ವನಿ ಎತ್ತಿದ್ದೇವೆ. ಹೊಸ ಜನರು ಸೇರಿದ್ದಾರೆ.

    ಹಳೆಯ ಸದಸ್ಯರು ಮತ್ತೆ ಸಕ್ರಿಯರಾಗಿದ್ದಾರೆ. ನಮಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಬೇಕು’ ಎನ್ನುತ್ತಾರೆ ಕಥುವಾ ಜಿಲ್ಲೆಯ ವಿಡಿಜಿ ಉಪಾಧ್ಯಕ್ಷ ಉತ್ತಮ್ ಚಂದ್. ‘ನಮ್ಮ ಮತ್ತು ನೆರೆಹೊರೆಯವರ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳು ಅಗತ್ಯ. 1990ರ ದಶಕದಿಂದಲೂ ನಾನು ಸೇನಾಪಡೆಯ ಭಾಗವಾಗಿದ್ದೇನೆ. ರಾಜೌರಿಯಲ್ಲಿ ಅನೇಕ ಪುರುಷರು ವಿಡಿಜಿಗೆ ಸೇರಲು ಸಿದ್ಧರಾಗಿದ್ದಾರೆ, ಆದರೆ, ಸಾಕಷ್ಟು ಶಸ್ತ್ರಾಸ್ತ್ರಗಳಿಲ್ಲ’ ಎನ್ನುತ್ತಾರೆ 55 ವರ್ಷದ ಮಾಜಿ ಸೈನಿಕ ಹಾಗೂ ವಿಡಿಜಿ ಸದಸ್ಯ ಅಂಗ್ರೇಜ್ ಸಿಂಗ್.

    ವಿಡಿಜಿಗಳು ತುರ್ತು ಪಡೆಗಳಾಗಿದ್ದು, ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ಬಳಸಲಾಗುತ್ತದೆ. ಇವು ರಾತ್ರಿಯಲ್ಲೂ ಗಸ್ತು ತಿರುಗಬೇಕು. ಭಯೋತ್ಪಾದಕರ ಹುಡುಕಾಟದ ಕಾರ್ಯಾಚರಣೆಗಳಲ್ಲಿಯೂ ನೆರವು ನೀಡಬೇಕು. ಆದರೆ, ಎಲ್ಲಿಯೂ ಯಾವುದೇ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅಥವಾ ಹಳ್ಳಿಗಳ ಹೊರಗೆ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿ ಇರುವುದಿಲ್ಲ. ಇವು ಪೊಲೀಸ್ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತವೆ.

    ನೂರಾರು ಮಂದಿ ನೇಮಕ

    ಕಳೆದ ಜನವರಿಯಿಂದ ಜಮ್ಮು ಸುತ್ತಮುತ್ತಲಿನ ಧಂಗ್ರಿ ಮತ್ತು ಇತರ ಹಳ್ಳಿಗಳ ನೂರಾರು ಜನರನ್ನು ಗ್ರಾಮ ರಕ್ಷಣಾ ಕಾವಲುಗಾರರನ್ನಾಗಿ (ವಿಡಿಜಿ) ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಅರೆಸೈನಿಕ ಗುಂಪಿನಿಂದ ತರಬೇತಿ ನೀಡಿ, ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತಿದೆ. ಪ್ರತಿ ವಿಡಿಜಿಗೆ 4000ದಿಂದ 4500 ರೂಪಾಯಿ ಗೌರವಧನ ನೀಡಲಾಗುತ್ತದೆ.

    ದುರುಪಯೋಗದ ಭೀತಿ

    ನಾಗರಿಕರನ್ನು ಶಸ್ತ್ರಸಜ್ಜಿತಗೊಳಿಸುವ ಕ್ರಮವನ್ನು ಕೆಲವರು ಸ್ವಾಗತಿಸುವುದಿಲ್ಲ. ಈ ಹಿಂದೆ ನಡೆದಂತೆ ಜನರು ವೈಯಕ್ತಿಕ ಧ್ವೇಷಕ್ಕಾಗಿ, ಸಣ್ಣಪುಟ್ಟ ಸಮಸ್ಯೆಗಳಿಗೂಶಸ್ತ್ರಾಸ್ತ್ರಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಇದರ ಬದಲು ಈ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ನಿಯೋಜನೆಯನ್ನು ಸರ್ಕಾರ ಬಲಪಡಿಸಬೇಕು ಎಂದು ಹೇಳುತ್ತಾರೆ. 1990ರ ದಶಕದಲ್ಲಿ ಇಂತಹ ಸಮಿತಿಗಳ ವಿರುದ್ಧ ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಅನೇಕ ಕ್ರಿಮಿನಲ್ ಚಟುವಟಿಕೆಗಳ ಆರೋಪಗಳಿವೆ. ಅಧಿಕೃತ ಮಾಹಿತಿಯ ಪ್ರಕಾರ, 1990ರ ದಶಕದಲ್ಲಿ ವಿಡಿಜಿಗಳ ಸದಸ್ಯರ ವಿರುದ್ಧ 221 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಎರಡು ಡಜನ್ ಕೊಲೆ ಹಾಗೂ ಏಳು ಅತ್ಯಾಚಾರಕ್ಕೆ ಸಂಬಂಧಿಸಿ ಪ್ರಕರಣಗಳಿದ್ದರೆ, 15 ಪ್ರಕರಣಗಳು ಗಲಭೆಗೆ ಸಂಬಂಧಿಸಿದ್ದವು.

    ‘ರಾಜೌರಿಯಲ್ಲಿ 700 ವಿಡಿಜಿ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಕೆಲವರಿಗೆ ಸ್ವಯಂ-ಲೋಡಿಂಗ್ ರೈಫಲ್​ಗಳನ್ನು (ಎಸ್​ಎಲ್​ಆರ್) ನೀಡಲಾಗಿದೆ. ಹೆಚ್ಚಿನವರು ಲೀ-ಎನ್​ಫೀಲ್ಡ್ ರೈಫಲ್ ಹೊಂದಿದ್ದಾರೆ.
    | ಮುಹಮ್ಮದ್ ಅಸ್ಲಾಮ್ ಚೌಧರಿ, ರಾಜೌರಿಯ ಹಿರಿಯ ಪೊಲೀಸ್ ಅಧಿಕಾರಿ

    ನಾವು ಈಗ ಗ್ರಾಮದಲ್ಲಿ 50ಕ್ಕೂ ಹೆಚ್ಚು ವಿಡಿಜಿ ಸದಸ್ಯರನ್ನು ಹೊಂದಿದ್ದೇವೆ. ಆಯುಧಗಳೊಂದಿಗೆ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.
    ಧೀರಜ್ ಶರ್ಮಾ ಧಂಗ್ರಿ ಗ್ರಾಮದ ಮುಖ್ಯಸ್ಥ, ಪೊಲೀಸ್ ಮೇಲ್ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts