ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ಹಿಂಪಡೆದರೆ ತೆರಿಗೆ ಕಟ್ಟಬೇಕಾದೀತು! ಹೊಸ ನಿಯಮ ಜಾರಿ ಸಾಧ್ಯತೆ

ನವದೆಹಲಿ: ಒಂದು ವರ್ಷದಲ್ಲಿ 10 ಲಕ್ಷ ರೂಪಾಯಿ ನಗದು ಹಿಂಪಡೆದರೆ, ಅದಕ್ಕೆ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆ ಮೂಲಕ ನಗದು ವಹಿವಾಟಿಗೆ ಕಡಿವಾಣ ಹಾಕುವ ಜತೆಗೆ ಕಪ್ಪು ಹಣಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಜಿಟಲ್​ ವಹಿವಾಟನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಇಂತಹ ಚಿಂತನೆ ನಡೆಸಿದೆ ಎನ್ನಲಾಗಿದೆ.

ಆಧಾರ್​ ಕಾರ್ಡ್​ ದೃಢೀಕರಣ ಕಡ್ಡಾಯ ಸಾಧ್ಯತೆ
ಅಕ್ರಮ ನಗದು ವಹಿವಾಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೊಡ್ಡ ಮೊತ್ತದ ನಗದನ್ನು ಹಿಂಪಡೆದರೆ ಅದಕ್ಕೆ ಆಧಾರ್​ ಕಾರ್ಡ್​ ದೃಢೀಕರಣವನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ರೀತಿ ಮಾಡುವುದರಿಂದ ತೆರಿಗೆ ಪಾವತಿದಾರರು ಸಲ್ಲಿಸುವ ವಾರ್ಷಿಕ ಲೆಕ್ಕಪತ್ರ ವಿವರವನ್ನು ಸುಲಭವಾಗಿ ಪರಿಶೀಲಿಸಲು ಅನುಕುಲವಾಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿದೆ.

ಪ್ರಸ್ತುತ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಜಮೆ ಮತ್ತು ಹಿಂಪಡೆಯುವಿಕೆಗೆ ವ್ಯಕ್ತಿಗತ ಪ್ಯಾನ್​ ಸಂಖ್ಯೆ ದಾಖಲಿಸುವುದು ಕಡ್ಡಾಯವಾಗಿದೆ. ಇದೀಗ ದೊಡ್ಡ ಮೊತ್ತದ ವಹಿವಾಟಿಗೆ ಆಧಾರ್​ ಕಾರ್ಡ್​ ದೃಢೀಕರಣ ಕಡ್ಡಾಯಗೊಳಿಸುವ ಮೂಲಕ ಅದಕ್ಕಿಂತಲೂ ಮುಂದೆ ಸಾಗುವ ಇರಾದೆ ಸರ್ಕಾರದ್ದಾಗಿದೆ ಎನ್ನಲಾಗಿದೆ.

ಬಜೆಟ್​ನಲ್ಲಿ ಘೋಷಣೆ ಸಾಧ್ಯತೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಜುಲೈ 5ರಂದು ಮಂಡಿಸಲಿರುವ ಕೇಂದ್ರ ಬಜೆಟ್​ನಲ್ಲಿ ಈ ಕುರಿತು ಸ್ಪಷ್ಟ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಜೆಟ್​ ಮಂಡಿಸುವ ಮುನ್ನ ಸರ್ಕಾರ ನಡೆಸಿರುವ ಚರ್ಚೆಗಳಲ್ಲಿ ಈ ವಿಷಯ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುವುದು ಈ ಶಂಕೆಗೆ ಕಾರಣವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *