ನನೆಗುದಿಗೆ ಬಿದ್ದ ಜಿಲ್ಲಾ ಡೇರಿ ಸ್ಥಾಪನೆ

ಚಿಕ್ಕಮಗಳೂರು: ಕಲಿತವರಿಗೆ ಹಾಗೂ ಕಲಿಯದವರಿಗೂ ಕಾಮಧೇನುವಾಗಿ, ದುಡಿವ ಕೈಗಳಿಗೆ ಕೆಲಸ ನೀಡುವ ಕೃಷಿ ಉಪ ಕಸುಬು ಹೈನುಗಾರಿಕೆಗೆ ಬೆಂಬಲವಾಗಬೇಕಿರುವ ಚಿಕ್ಕಮಗಳೂರು ಹಾಲು ಒಕ್ಕೂಟ ಸ್ಥಾಪನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ.

ಇಚ್ಛಾಶಕ್ತಿ ಕೊರತೆ ಹಾಗೂ ಅನುಪಯುಕ್ತ ಕೆಲ ವಿಚಾರಗಳಿಗಷ್ಟೇ ಪ್ರಾಮುಖ್ಯತೆ ಕೊಡುತ್ತಿರುವ ಜಿಲ್ಲೆಯ ರಾಜಕೀಯ ಧೋರಣೆಯಿಂದ ಒಕ್ಕೂಟ ಸ್ಥಾಪನೆ ಕನಸು ನನಸಾಗದೆ ಸಾವಿರಾರು ರೈತ ಕುಟುಂಬಗಳ ಉಪ ಕಸುಬಿನ ಕನಸು ಕಮರಿ ಹೋಗುತ್ತಿದೆ.

ಚಿಕ್ಕಮಗಳೂರು ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕು ಎಂಬುದು 10 ವರ್ಷಗಳ ಬೇಡಿಕೆ. ಜಿಪಂ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳುಹಿಸಲಾಗಿದೆ. ಶಾಸಕರೂ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಿದ ಜಿಪಂ ಪ್ರಗತಿಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ, ನಮ್ಮದೇನು ಅಭ್ಯಂತರ ಇಲ್ಲ. ಡೇರಿ ಆರಂಭಿಸಿ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಆದರೆ, ನಿಜವಾದ ಕಾಳಜಿ ಯಾರಿಗಿದೆ ಎಂಬ ಪ್ರಶ್ನೆ ಎಲ್ಲರದ್ದಾಗಿದೆ.

ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶ ಹೊಂದಿರುವ ಜಿಲ್ಲೆ ಭೌಗೋಳಿಕವಾಗಿ ಅಕ್ಕಪಕ್ಕದ ಜಿಲ್ಲೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಹೈನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ ಪೂರಕ ವಾತಾವರಣ ನಿರ್ವಿುಸುವಲ್ಲಿ ಜಿಲ್ಲಾಡಳಿತ ಹಾಗೂ ಇಲ್ಲಿನ ರಾಜಕೀಯ ಪಕ್ಷಗಳ ನಾಯಕರು ಬದ್ಧತೆ ಪ್ರಯತ್ನ ಮಾಡುತ್ತಿಲ್ಲ. ಹೈನುಗಾರಿಕೆ ಉಪ ಕಸುಬು ಕೈಗೊಳ್ಳಲು ಹಳ್ಳಿಗಳಲ್ಲಿ ಸೊಸೈಟಿಗಳು ಆಗಬೇಕು. ಸೊಸೈಟಿಗಳು ಆಗಬೇಕೆಂದರೆ ಜಿಲ್ಲೆಯಲ್ಲಿ ಹಾಲು ಒಕ್ಕೂಟ ರಚನೆ ಆಗಬೇಕು. ಒಕ್ಕೂಟ ರಚನೆಯಾಗದೆ ಹೈನುಗಾರಿಕೆ ಉದ್ಯಮ ನಡೆಸಲು ರೈತರಿಗೆ ಆಗುವುದಿಲ್ಲ.

ಕೆಲಸ ಹುಡುಕಿಕೊಂಡು ಬೆಂಗಳೂರು, ಮೈಸೂರಿನಂತಹ ನಗರಗಳಿಗೆ ಹಲವು ರೈತ ಮಕ್ಕಳು ವಲಸೆ ಹೋಗುತ್ತಿದ್ದಾರೆ. ಬಹುತೇಕರು 10-12 ಸಾವಿರ ರೂ. ಸಂಬಳದ ಕೆಲಸಕ್ಕೆ ಬೆಂಗಳೂರು ಸೇರಿಕೊಳ್ಳುತ್ತಿದ್ದಾರೆ. ಆದರೆ, ಒಂದೆರಡು ಹಸು ಕಟ್ಟಿ ಹೈನುಗಾರಿಕೆ ಮಾಡಿದರೆ 15-20 ಸಾವಿರ ರೂ. ಸಂಪಾದಿಸುವ ಹೈನುಗಾರಿಕೆ ಮಾಡಬಹುದು. ಆದರೆ, ಹೈನುಗಾರಿಕೆ ಮಾಡಿ ಉತ್ಪಾದಿಸಿದ ಹಾಲನ್ನು ಮಾರಾಟ ಮಾಡಲು ಜಿಲ್ಲೆಯಲ್ಲಿ ಬೇಕಾದಷ್ಟು ಸೊಸೈಟಿಗಳೇ ಇಲ್ಲ. ಹಸು ಕಟ್ಟಿ ಹೈನುಗಾರಿಕೆ ಮಾಡಿದರೆ ಮನೆ ಮನೆಗೆ ಹಾಲು ಮಾರಾಟ ಬೇಕಾದ ಸಮಸ್ಯೆ ಉಂಟಾಗುತ್ತದೆ. ಆದರೆ ಹಳ್ಳಿಗಳಲ್ಲಿಯೇ ಒಕ್ಕೂಟದ ಸೊಸೈಟಿಗಳಿದ್ದರೆ ಹಾಲನ್ನು ಸೊಸೈಟಿಗಳಿಗೆ ಹಾಕಿ ಪ್ರತಿ ವಾರ ಹಣ ಸಂಪಾದನೆ ಮಾಡಬಹುದು.

80 ಸಾವಿರ ಲೀ. ಹಾಲು ಉತ್ಪಾದನೆ: ಜಿಲ್ಲೆಯಲ್ಲಿ 80 ಸಾವಿರ ಲೀ. ಹಾಲು ಉತ್ಪಾದನೆ ತಿಂಗಳಿಗೆ ಆಗುತ್ತಿದೆ. ಇದು ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರಿನ ತಾಲೂಕಿನ ಎರಡು ಹೋಬಳಿಯಲ್ಲಿ ಮಾತ್ರ. ಇಲ್ಲಿಯೂ ಅಲ್ಲಲ್ಲಿ ಸೊಸೈಟಿಗಳಿದ್ದು, ಇಲ್ಲಿಂದ ಹಾಸನ ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಲಾಗುತ್ತಿದೆ.

ಆದರೆ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಹಾಲು ಸಂಗ್ರಹಿಸುವ ಸೊಸೈಟಿಗಳೇ ಇಲ್ಲ. ಈ ಭಾಗದಲ್ಲಿ ಹಾಲು ಸಂಗ್ರಹ ಹಾಸನ ಹಾಲು ಒಕ್ಕೂಟ ಮಾಡುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸಮರ್ಥವಾಗಿ ಹಾಲು ಉತ್ಪಾದನೆಯಾಗುವ ಅವಕಾಶವಿದೆ. ಇದಕ್ಕೆ ಬೇಕಾದ ಮೂಲ ವ್ಯವಸ್ಥೆ ಇಲ್ಲದೆ ಇರುವುದರಿಂದ ಹಲವು ರೈತ ಕುಟುಂಬಗಳು ಹೈನುಗಾರಿಕೆ ಉಪ ಕಸುಬು ಮಾಡಲು ಹಿಂದೇಟು ಹಾಕುತ್ತಿವೆ.

ಬ್ಯಾಂಕ್​ಗಳು ಸಾಲ ಕೊಡಲ್ಲ: ಜಿಲ್ಲೆಯಲ್ಲಿ ಬಹುತೇಕ ಬ್ಯಾಂಕುಗಳು ಹೈನುಗಾರಿಕೆ ಮಾಡಲು ಮುಂದೆ ಬರುವ ರೈತ ಕುಟುಂಬಗಳಿಗೆ ಸಾಲ ನೀಡುವುದಿಲ್ಲ. ಉತ್ಪಾದಿಸಿದ ಹಾಲು ಯಾವ ರೀತಿ ಮಾರಾಟ ಮಾಡುತ್ತೀರ? ಸಾಲ ಹೇಗೆ ಮರು ಪಾವತಿ ಮಾಡುತ್ತೀರ? ಎಂಬಿತ್ಯಾದಿ ಪ್ರಶ್ನೆ ಕೇಳಿ ಸಾಗ ಹಾಕುತ್ತಿದ್ದಾರೆ.

ಹೈನುಗಾರಿಕೆ ಯಶಸ್ವಿಯಾಗಬೇಕಾದರೆ ಹಾಲು ಖರೀದಿ ಮಾಡುವ ಸೊಸೈಟಿಗಳು ಇರಬೇಕು. ಇಲ್ಲದಿದ್ದರೆ ಉತ್ಪಾದಿಸಿದ ಹಾಲು ಮಾರಾಟ ಮಾಡುವುದು ರೈತರಿಗೆ ಕಷ್ಟವಾಗುತ್ತದೆ. ಈ ಕಾರಣದಿಂದ ಬ್ಯಾಂಕುಗಳ ಸಹ ಸಾಲ ನೀಡುತ್ತಿಲ್ಲ.

3.44 ಲಕ್ಷ ಜಾನುವಾರು ಸಂಖ್ಯೆ: ಜಿಲ್ಲೆಯಲ್ಲಿ 2012ರ ಜನಗಣತಿ ಪ್ರಕಾರ 3,44,663 ಜಾನುವಾರುಗಳಿವೆ. 2018-19ನೇ ಸಾಲಿ ಜಾನುವಾರು ಗಣಿತ ನಡೆಯುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನುತ್ತಿದೆ ಪಶು ಪಾಲನೆ ಇಲಾಖೆ. ಇಷ್ಟೊಂದು ಪ್ರಮಾಣದಲ್ಲಿ ಹಸುಗಳ ಸಂಖ್ಯೆ ಇದ್ದರೂ ಹಾಲು ಉತ್ಪಾದನೆಗೆ ಬೇಕಾದ ಸೌಲಭ್ಯ ಕೈಗೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ.

ಇದರ ಜತೆ ಪ್ರತಿ ವರ್ಷ ಪಶು ಭಾಗ್ಯ ಯೋಜನೆಯಡಿ ಸರ್ಕಾರವೇ ಪಶು ಭಾಗ್ಯ 130 ಘಟಕ ಹಾಗೂ ಕರುಗಳ ಸಾಕಣೆಗೆ 329 ಘಟಕದ ಫಲಾನುಭವಿಗಳಿಗೆ ಸಹಾಯಧನ ನೀಡುತ್ತಿದೆ. ಈ ಹಸುಗಳಿಂದ ಮತ್ತಷ್ಟು ಹಸುಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುವ ಅವಕಾಶವಿದೆ. ಹೈನುಗಾರಿಕೆಗೆ ಬೆಂಬಲ ಇಲ್ಲದಿರುವುದರಿಂದ ರೈತರು ಹಸು ಸಂಖ್ಯೆ ಹೆಚ್ಚಿಗೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ವಾರ್ಷಿಕ 1.24 ಸಾವಿರ ಟನ್ ಹಾಲು ಉತ್ಪಾದನೆಯಾಗುತ್ತಿದೆ.

ಸರ್ಕಾರ ನಿರ್ಧರಿಸಿದರೆ ಅಭಿವೃದ್ಧಿ:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಬರುತ್ತಿದ್ದು, ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಕೆಎಂಎಫ್ ಅಧಿಕಾರಿ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಡೇರಿ ಆಗಬೇಕಾದರೆ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ (ಎನ್​ಡಿಡಿಬಿ) ಅನುಮತಿ ನೀಡಬೇಕು. ಜಿಲ್ಲೆಯಿಂದ ಪ್ರಸ್ತಾವನೆ ಬಂದರೂ ರಾಜ್ಯ ಸರ್ಕಾರ ಎನ್​ಡಿಡಿಬಿಗೆ ಈ ಬಗ್ಗೆ ಮನವಿ ಮಾಡಿಲ್ಲ. ಮಲೆನಾಡು, ಬಯಲು ಸೀಮೆ ಹೊಂದಿರುವ ಚಿಕ್ಕಮಗಳೂರಿನಲ್ಲಿ ಡೇರಿ ಆರಂಭಿಸಿದರೆ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ಸಿಗುವ ಸಾಧ್ಯತೆ ಇದೆ ಎಂದರು. ರಾಜಕೀಯ ನಿರ್ಧಾರ ಇದಾಗಿರುವುದರಿಂದ ಸರ್ಕಾರವೇ ಯೋಚಿಸಬೇಕಿದೆ. ಪ್ರಾರಂಭದಲ್ಲಿ ಡೇರಿ ಮಾಡಿದರೆ, ಉಳಿದಂತೆ ಸೊಸೈಟಿ ಸ್ಥಾಪನೆ ಹಳ್ಳಿಗಳಲ್ಲಿ ನಿಧಾನಕ್ಕೆ ಆಗುತ್ತದೆ. ಸೊಸೈಟಿ ಆರಂಭವಾದರೆ ಹಳ್ಳಿಗರು ಹಾಲು ತಂದು ಮಾರಾಟ ಮಾಡುವುದು ಶುರುವಾಗುತ್ತದೆ ಎಂದು ಹೇಳಿದರು.