ಬೆಂಗಳೂರು: ಅರಣ್ಯ ವೀಕ್ಷಕರು ಮತ್ತು ರಕ್ಷಕರ ನೌಕರಿ ಕೊಡಿಸುವುದಾಗಿ ನಂಬಿಸಿ 6 ಲಕ್ಷ ರೂ. ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಜಾಜಿನಗರದ ನಿವಾಸಿ ಪಿ.ಎಚ್. ಅಡವಿ ನೀಡಿರುವ ದೂರಿನ ಅನ್ವಯ ರಾಜಾಜಿನಗರದ ಬನಗಿರಿನಗರ ನಿವಾಸಿ ಕೆ.ಪಿ. ವೀರೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.
2023ರ ಡಿಸೆಂಬರ್‌ನಲ್ಲಿ ವೀರೇಶ್ ಪರಿಚಯವಾಗಿತ್ತು. ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರು ಮತ್ತು ಅರಣ್ಯ ರಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರಣ್ಯ ಸಚಿವರು ನನಗೆ ತುಂಬಾ ಆತ್ಮೀಯರು. ನಿನ್ನ ಮಕ್ಕಳಿಗೆ ಮತ್ತು ಸಹೋದರನ ಮಕ್ಕಳ ಕಡೆಯಿಂದ ಧಾರವಾಡ, ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ ಕೆಲಸ ಮಾಡಿಸಿ ಕೊಡುತ್ತೇನೆ. ಮುಂಗಡವಾಗಿ ತಲಾ 2 ಲಕ್ಷ ರೂ.ನಂತೆ 6 ಲಕ್ಷ ರೂ. ನೀಡಿದರೆ ಉಳಿದ ಕೆಲಸವನ್ನು ನಾನು ನೋಡಿಕೊಳ್ಳುತ್ತೆನೆ ಎಂದು ನಂಬಿಸಿದನು.
ಮಕ್ಕಳಿಗೆ ನೌಕರಿ ಕೊಡಿಸುವ ಸಲುವಾಗಿ ಹಂತಹಂತವಾಗಿ 6 ಲಕ್ಷ ರೂ. ನೀಡಿದೆ. ಆದರೆ, ವರ್ಷ ಕಳೆದರೂ ಸರ್ಕಾರಿ ಕೆಲಸ ಕೊಡಿಸದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಅಡವಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.