ಬ್ಯಾಡಗಿ: ದಶಕದ ಹಿಂದೆ ಆರಂಭಗೊಂಡ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಮೂಲಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬಡ ವಿದ್ಯಾರ್ಥಿಗಳು ಅನುಕೂಲಕ್ಕಾಗಿ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆಗೆ ಶಾಸಕ ಬಸವರಾಜ ಶಿವಣ್ಣನವರ ಸ್ಪಂದಿಸಿ, 2014ರಲ್ಲಿ ಮಂಜೂರು ಮಾಡಿಸಿದರು. ಅಂದು ಗ್ರಾಮದ ಪ್ರವಾಸಿ ಮಂದಿರದಲ್ಲಿ ತಾತ್ಕಾಲಿಕವಾಗಿ ತರಗತಿ ಆರಂಭಿಸಲಾಗಿತ್ತು. ಬಳಿಕ ಆ ಕಟ್ಟಡವನ್ನು ಆಯುರ್ವೆದ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಆದರೂ, ಅಲ್ಲಿಯೇ ಕಾಲೇಜ್ ಮುಂದುವರಿದಿದೆ.
ಆಯುರ್ವೆದ ಆಸ್ಪತ್ರೆ ಕಟ್ಟಡದಲ್ಲಿ ಕೇವಲ ಎರಡು ಕೊಠಡಿಗಳಿವೆ. ಪ್ರಸಕ್ತ ವರ್ಷ 71 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರಿಗೆ ಪಾಠ ಮಾಡಲು ಜಾಗವಿಲ್ಲದಂತಾಗಿದೆ. ಪ್ರಾಚಾರ್ಯರ ಕುಳಿತುಕೊಳ್ಳುವ ಕೊಠಡಿಯಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಪ್ರತಿದಿನ ಎರಡು ತರಗತಿಗಳು ಕಟ್ಟಡದ ಹೊರಭಾಗದಲ್ಲಿ ನಡೆಯುತ್ತಿವೆ.
ಕಚೇರಿ, ಉಪನ್ಯಾಸಕರ ವಿಶ್ರಾಂತಿಗಾಗಿ ಕೊಠಡಿಗಳಿಲ್ಲ. ಮಳೆಗಾಲ ಹಾಗೂ ಬೇಸಿಗೆಯಲ್ಲೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಗೋಳಾಟ ತಪ್ಪಿಲ್ಲ. ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದರು. ಶೌಚಗೃಹ, ವಿಶ್ರಾಂತಿ ಕೊಠಡಿ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿನಿಯರ ದಾಖಲಾತಿಗೆ ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಪ್ರಾಯೋಗಿಕ ತರಬೇತಿಗಿಲ್ಲ ಅವಕಾಶ: ಕೇಂದ್ರಕ್ಕೆ ಅಗತ್ಯವಿರುವ ಹಲವು ಯಂತ್ರಗಳು, ಗಣಕಯಂತ್ರ ಸೇರಿದಂತೆ, ಆನ್ಲೈನ್ ಶಿಕ್ಷಣದ ವ್ಯವಸ್ಥೆಗಳನ್ನು ಸರ್ಕಾರ ಒದಗಿಸಿದೆ. ಆದರೆ, ಅವುಗಳ ಅಳವಡಿಕೆಗೆ ಜಾಗವೇ ಇಲ್ಲ. ಹೀಗಾಗಿ, ಪ್ರಾಯೋಗಿಕ ತರಬೇತಿ ಇಲ್ಲದಾಗಿದೆ. ಕಾಲೇಜಿನಲ್ಲಿ ಎಲೆಕ್ಟ್ರಿಕ್ ಹಾಗೂ ಪಿಟ್ಟರ್ ಕೋರ್ಸ್ ಕಲಿಸಲಾಗುತ್ತಿದ್ದು, ವಿದ್ಯುತ್ ಸೌಲಭ್ಯ ಇಲ್ಲವಾಗಿದೆ.
ಆರಂಭವಾಗಿ ದಶಕ ಕಳೆದರೂ ಕೈಗಾರಿಕೆ ತರಬೇತಿ ಕೇಂದ್ರ ಇಂದಿಗೂ ಸೌಲಭ್ಯ ವಂಚಿತವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಕಟ್ಟಡದ ಹೊರಭಾಗದಲ್ಲಿ ಕುಳಿತು ಪಾಠ ಕೇಳಬೇಕಾದ ದುಸ್ಥಿತಿ ಬಂದಿದೆ.
2014ರಲ್ಲಿ ಶಾಸಕನಿದ್ದಾಗ ಗ್ರಾಮಕ್ಕೆ ಐಟಿಐ ಮಾಡಿಸಿದ್ದೆ. ಬಳಿಕ ಗ್ರಾಮದಲ್ಲಿ 1 ಎಕರೆ ಕಾಲೇಜಿಗೆ ಭೂಮಿ ಮಂಜೂರಾಗಿದ್ದು, ಈ ಕುರಿತು ತಹಸೀಲ್ದಾರ್ ಬಳಿ ರ್ಚಚಿಸಿ ಅನುಕೂಲ ಕಲ್ಪಿಸಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆಗೆ ಸೂಚನೆ ನೀಡಲಾಗುವುದು.
| ಬಸವರಾಜ ಶಿವಣ್ಣನವರ, ಶಾಸಕ
ಕಾಲೇಜ್ಗೆ ಮಂಜೂರಾದ ಭೂಮಿಯ ಹಕ್ಕಿನ ಕುರಿತು ರೈತರೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಹೀಗಾಗಿ ಕಟ್ಟಡ ಇಲ್ಲವಾಗಿದ್ದು, ಆಯುರ್ವೆದ ಆಸ್ಪತ್ರೆ ಕಟ್ಟಡದಲ್ಲಿ ಪಾಠ ಮಾಡುತ್ತಿದ್ದೇವೆ. ಜಾಗದ ಸಮಸ್ಯೆ ಇತ್ಯರ್ಥವಾದಲ್ಲಿ ಕಾಯಂ ಪರಿಹಾರ ಸಿಗಲಿದೆ. ವಾಸ್ತವ ಸ್ಥಿತಿ ಕುರಿತು ಸ್ಥಳೀಯ ಶಾಸಕರು ಹಾಗೂ ಮೇಲಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ.
| ರಾಮಚಂದ್ರಪ್ಪ ಬಿರಾದಾರ, ನಿಯೋಜಿತ ಪ್ರಾಚಾರ್ಯ
ಐಟಿಐ ಆರಂಭವಾಗಿ 10 ವರ್ಷ ಗತಿಸಿದೆ. ಆದರೆ, ಈವರೆಗೂ ಸ್ವಂತ ಕಟ್ಟಡ ಹಾಗೂ ಮೂಲಸೌಲಭ್ಯಗಳು ಇಲ್ಲವಾಗಿವೆ. ಪರಿಣಾಮ ವಿದ್ಯಾರ್ಥಿನಿಯರು ದಾಖಲಾತಿಯಿಂದ ದೂರ ಉಳಿದಿದ್ದಾರೆ. ಕಾಲೇಜ್ಗೆ ಸ್ವಂತ ಕಟ್ಟಡ ನಿರ್ವಿುಸಲು ಕೂಡಲೇ ಸರ್ಕಾರ ಗಮನಹರಿಸಬೇಕು.
| ಶಿವಯೋಗಿ ಗಡಾದ, ಶಿಕ್ಷಣ ಪ್ರೇಮಿ