ಸರ್ಕಾರಿ ವಸತಿ ಶಾಲೆಗಳಿಗೆ ಅನ್ಯಾಯ: ವಿದ್ಯಾರ್ಥಿಗಳಿಗೆ ಕೊನೆಗೂ ಕೊಡಲೇ ಇಲ್ಲ ಶೂ-ಸಾಕ್ಸ್, ಸ್ವೆಟರ್, ರಾತ್ರಿ ದಿರಿಸು

| ಶ್ರೀಕಾಂತ ಶೇಷಾದ್ರಿ ಬೆಂಗಳೂರು

ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ನವೋದಯ ಮಾದರಿಯಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ವಸತಿ ಶಾಲೆಗಳ ಸಮೂಹ ಕಡೆಗಣನೆಗೊಳಗಾಗುತ್ತಲೇ ಇದ್ದು, ಇದರ ಪರಿಣಾಮ ಎದುರಿಸುತ್ತಿರುವವರು ಮಾತ್ರ ಮಕ್ಕಳು ಹಾಗೂ ಅಲ್ಲಿನ ಸಿಬ್ಬಂದಿ. 2018-19ನೇ ಶೈಕ್ಷಣಿಕ ವರ್ಷ ಪರೀಕ್ಷೆ ಮುಗಿದು ಫಲಿತಾಂಶ ಬಂದು ಮಕ್ಕಳೆಲ್ಲ ರಜೆ ಮೂಡ್​ನಲ್ಲಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರ ವಸತಿ ಶಾಲೆಗೆ ನ್ಯಾಯ ಒದಗಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ವರ್ಷದ ಕೊನೇ ಹಂತದಲ್ಲಿ ನೋಟ್​ಬುಕ್, ಪಠ್ಯಪುಸ್ತಕ, ಸಮವಸ್ತ್ರ ಒದಗಿಸಿದ್ದೇ ಸಾಧನೆ ಎಂದು ಸರ್ಕಾರ ಸಮಾಧಾನಪಟ್ಟುಕೊಂಡಿತ್ತು. ಮಕ್ಕಳಿಗೆ 2018ರ ಜೂನ್​ನಲ್ಲಿ ನೀಡಬೇಕಿದ್ದ ಶೂ-ಸಾಕ್ಸ್, ಸ್ವೆಟರ್, ರಾತ್ರಿ ದಿರಿಸು ನೀಡದೆ ವರ್ಷವನ್ನೇ ಮುಗಿಸಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗ್ರಾಮೀಣ ಮಕ್ಕಳಿಗಾಗಿಯೇ ಆರಂಭಿಸಿದ ಈ ಶಿಕ್ಷಣ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ನೀಡಬೇಕಾದ ಸೌಲಭ್ಯ ನೀಡದ ಸರ್ಕಾರಕ್ಕೆ ಏನು ಶಿಕ್ಷೆ ಎಂಬುದು ಈಗಿರುವ ಪ್ರಶ್ನೆ. ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ, ಅಟಲ್ ಬಿಹಾರಿ ವಾಜಪೇಯಿ, ಅಂಬೇಡ್ಕರ್ ಹೆಸರಿನಲ್ಲಿ ರಾಜ್ಯಾದ್ಯಂತ 826 ಶಾಲೆಗಳಿವೆ. ಇದರಲ್ಲಿ ಎಸ್ಸಿ ವರ್ಗಕ್ಕಾಗಿ 504, ಎಸ್ಟಿ ವರ್ಗಕ್ಕಾಗಿ 155 ಮತ್ತು ಹಿಂದುಳಿದ ವರ್ಗಕ್ಕಾಗಿ 167 ಶಾಲೆಗಳಿವೆ. ಒಟ್ಟಾರೆ 1.49 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಈ ಹಿಂದೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಅಲ್ಪಸಂಖ್ಯಾತ ವಸತಿ ಶಾಲೆಗಳು ಬರುತ್ತಿದ್ದವು. ಸರ್ಕಾರ ಆ ಶಾಲೆಗಳನ್ನು ಪ್ರತ್ಯೇಕಿಸಿ ಇಲಾಖೆಯೊಂದಿಗೆ ವಿಲೀನಗೊಳಿಸಿತು. ಎಸ್ಸಿ-ಎಸ್ಟಿ, ಒಬಿಸಿ ಮಕ್ಕಳನ್ನು ಮಾತ್ರ ಇದೇ ಸಂಸ್ಥೆಯಡಿ ಉಳಿಸಿತು. ಬಳಿಕ ಇದನ್ನು ನಿಗಮ-ಮಂಡಳಿಯಂತೆ ನೋಡುತ್ತದೆ ವಿನಾ ಸರ್ಕಾರದ ಭಾಗ ಎಂದು ಭಾವಿಸಿಯೇ ಇಲ್ಲ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, 145 ಶಾಲೆಗಳಿಗೆ ಸರ್ಕಾರ ಡೆಸ್ಕ್ ಬೆಂಚ್ ನೀಡಿಲ್ಲ. ಇದರಿಂದ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ. ಈ ಕುರಿತಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಸರ್ಕಾರದ ಕಡೆ ಬೊಟ್ಟು ಮಾಡುತ್ತಾರೆ. ಸಮಾಜ ಕಲ್ಯಾಣ ಇಲಾಖೆ ಸೂಕ್ತ ನಿರ್ಧಾರ ಮಾಡಬೇಕಾಗಿತ್ತು, ತಾಂತ್ರಿಕ ಕಾರಣದಿಂದ ಆಗಿಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ವಸತಿ ಶಾಲೆ ಸಮಸ್ಯೆ ಬಗ್ಗೆ ಒಂದು ವರ್ಷದಿಂದ ಗಮನ ಸೆಳೆದರೂ ಸಮಾಜ ಕಲ್ಯಾಣ ಸಚಿವರು ಗಮನ ನೀಡಿಲ್ಲ. ಪರಿಶಿಷ್ಟ ಹಾಗೂ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳಿಗೆ ಪ್ರವೇಶ ನೀಡಿ ಸೌಲಭ್ಯ ಕೊಡದೆ ಹೋದಲ್ಲಿ ಆ ವರ್ಗಕ್ಕೆ ಮಾಡುವ ದೊಡ್ಡ ಅನ್ಯಾಯವಿದು.

| ಅರುಣ್ ಶಹಾಪುರ ವಿಧಾನಪರಿಷತ್ ಸದಸ್ಯ

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರು ತಿಂಗಳಿಂದ ವಿನಮ್ರವಾಗಿ ಕೇಳಿಕೊಂಡರೂ ಇದುವರೆಗೂ ಒಂದೇ ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

| ವಸತಿ ಶಾಲೆಗಳ ನೌಕರರ ಸಂಘ

ಶಿಕ್ಷಕರ ಗೋಳು ಆಲಿಸದ ಇಲಾಖೆ

ವಸತಿ ಸಹಿತವಾಗಿ ನಡೆಯುತ್ತಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಶಾಲೆಗಳಂತೆ ಪರಿಗಣಿಸುತ್ತಿಲ್ಲ, ಸಮಾಜ ಕಲ್ಯಾಣ ಇಲಾಖೆ ಅಂತಲೂ ಪರಿಗಣಿಸುತ್ತಿಲ್ಲ. ಒಂದರ್ಥದಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಇಲ್ಲಿನ ಸಿಬ್ಬಂದಿ ಇದ್ದಾರೆ. ಶಿಕ್ಷಕರ ಈ ಸಮಸ್ಯೆ ಬಗ್ಗೆ ವಿಜಯವಾಣಿ ಹಿಂದೆ ವಿಸ್ತೃ ವರದಿ ಮಾಡಿತ್ತು, ಸರ್ಕಾರ ಕೂಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿತ್ತು. ಆದರೆ, ಪರಿಸ್ಥಿತಿ ಸುಧಾರಿಸಿಲ್ಲ. ಡಿಸೆಂಬರ್​ನಲ್ಲಿ ನಡೆದ ಬೆಳಗಾವಿ ಅಧಿವೇಶನ ವೇಳೆ ಧರಣಿ ನಡೆಸಲು ಶಿಕ್ಷಕರು ಮುಂದಾದಾಗ, ಸರ್ಕಾರ ಸಭೆ ಕರೆದು ರ್ಚಚಿಸಿತ್ತು. ಈಗಲೂ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಇಲ್ಲಿನ 4 ಸಾವಿರಕ್ಕೂ ಹೆಚ್ಚು ಶಿಕ್ಷಕರು, ಸಿಬ್ಬಂದಿ ಫೆಬ್ರವರಿಯಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೋರಾಟ ಕೈ ಬಿಟ್ಟಿದ್ದರು.

ಏನೇನು ಬೇಡಿಕೆ?

1. ಎಸ್​ಸಿ-ಎಸ್​ಟಿ, ಒಬಿಸಿ ವಸತಿ ಶಾಲೆಗಳನ್ನು ಆಯಾ ಇಲಾಖೆಗಳಿಗೆ ಅಂದರೆ ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆಗೆ ವಿಲೀನಗೊಳಿಸಬೇಕು.

2. ಇಲ್ಲಿನ ಸಿಬ್ಬಂದಿಗೆ ಕೆಜಿಐಡಿ ಇಲ್ಲ, ಸೇವಾನಿರತರಾಗಿದ್ದಾಗ ಮೃತಪಟ್ಟರೆ ಕುಟುಂಬಕ್ಕೆ ಅನುಕಂಪದ ಕೆಲಸವೂ ಸಿಗುತ್ತಿಲ್ಲ, ಆರ್ಥಿಕ ನೆರವೂ ನೀಡುತ್ತಿಲ್ಲ.

3. ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಕುಮಾರನಾಯಕ್ ವರದಿಯಂತೆ ಭತ್ಯೆ ನೀಡಲಾಯಿತು. ಈ ಶಾಲೆ ಶಿಕ್ಷಕರಿಗೆ ಭತ್ಯೆ ನೀಡಲಿಲ್ಲ. ಕೇಳಿದರೆ, ನೀವು ಶಿಕ್ಷಣ ಇಲಾಖೆಯಲ್ಲ ಎಂಬ ಉತ್ತರ ಬಂತು.

4. ಪ್ರತ್ಯೇಕ ವರ್ಗಾವಣೆ ನೀತಿ ರೂಪಿಸಿದ್ದು, ಸಾಕಷ್ಟು ಸಮಸ್ಯೆ ಇದೆ. ವೃಂದ ಮತ್ತು ನೇಮಕ ನಿಯಮ ತಿದ್ದುಪಡಿ ಆಗಿಲ್ಲ.

5. ವಸತಿ ಶಾಲೆ ಬೋರ್ಡ್ ಕಾಪೋರೇಷನ್ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ವೇತನ ಪರಿಷ್ಕರಣೆ ಅಥವಾ ಸರ್ಕಾರದ ಯಾವುದೇ ತೀರ್ವನವಾದಾಗ ಅದು ತಲುಪಲು ಸಮಯವಾಗುತ್ತಿದೆ.

Leave a Reply

Your email address will not be published. Required fields are marked *