ವಾರ್ಡನ್ ಅಕ್ರಮ ಆಸ್ತಿ 250 ಕೋಟಿ ರೂ.!?

ಹಾರೋಹಳ್ಳಿ (ಕನಕಪುರ): ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪದ ಮೇರೆಗೆ ಹಾಸ್ಟೆಲ್ ವಾರ್ಡನ್ ಬಿ. ನಟರಾಜ್ ವಿರುದ್ಧ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕನಕಪುರ ತಾಲೂಕು ಹುಣಸನಹಳ್ಳಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಜೂನಿಯರ್ ವಾರ್ಡನ್ ಬಿ. ನಟರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಬಂಧಿಕರು ಹಾಗೂ ಸಹೋದರನ ಹೆಸರಲ್ಲಿ ನಟರಾಜ್ ಕನಕಪುರ ತಾಲೂಕಿನಲ್ಲಿ 40 ಎಕರೆ, ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನಲ್ಲಿ 15.24 ಎಕರೆ ಮತ್ತು ಬೆಂಗಳೂರು ನಗರ ಸೇರಿ ವಿವಿಧೆಡೆ 250 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಕನಕಪುರ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ದೂರು ದಾಖಲಿಸಿದ್ದರು. ಈ ಬಗ್ಗೆ ನ. 22ರಂದು ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಅದರಂತೆ ಎಸಿಬಿ ಡಿವೈಎಸ್​ಪಿ ಚಂದ್ರಶೇಖರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?: ಸಮಾಜ ಕಲ್ಯಾಣ ಇಲಾಖೆಯ ಚನ್ನಪಟ್ಟಣ ತಾಲೂಕು ವಿದ್ಯಾರ್ಥಿ ನಿಲಯದಲ್ಲಿ ನಟರಾಜು 1995ರಲ್ಲಿ ಜೂನಿಯರ್ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದರು. ದಿನಗೂಲಿ ಆಧಾರದಲ್ಲಿ 700 ರೂ. ವೇತನ ಪಡೆಯುತ್ತಿದ್ದರು. ನಂತರ ಕನಕಪುರ ತಾಲೂಕಿಗೆ ವರ್ಗಾವಣೆಗೊಂಡು ಕಾಯಂ ನೌಕರರಾಗಿದ್ದರು. ನಟರಾಜ್​ಗೆ ಪಿತ್ರಾರ್ಜಿತ ಆಸ್ತಿಯಾಗಿ ಕನಕಪುರದ ಕೋಡಿಹಳ್ಳಿ ಹೋಬಳಿ ಎರಂಗೆರೆ ಗ್ರಾಮದ ಸರ್ವೆ ನಂಬರ್ 40ರಲ್ಲಿ 4 ಎಕರೆ ಕೃಷಿ ಜಮೀನಿದೆ. ಸರ್ಕಾರಿ ಸಂಬಳ ಹೊರತುಪಡಿಸಿ ಅವರಿಗೆ ಬೇರೆ ಆದಾಯ ಮೂಲಗಳಿಲ್ಲ. ಕನಕಪುರಕ್ಕೆ ವರ್ಗಾವಣೆಯಾದ ಬಳಿಕ ಏರಂಗೆರೆ, ಎಡಮಡು, ಹಾರೋಹಳ್ಳಿ, ಚಿಕ್ಕಏರಂಗೆರೆ, ಕಗ್ಗಲಹಳ್ಳಿ, ಕೊಳ್ಳೇಗಾಲ ತಾಲೂಕಿನ ಮಣಹಳ್ಳಿ ಸೇರಿ ಕೆಲವೆಡೆ ಎಕರೆಗಟ್ಟಲೆ ಜಮೀನು ಖರೀದಿಸಿದ್ದಾರೆ. ಇದರಲ್ಲಿ ಕೆಲ ಜಮೀನು ಇವರ ಹೆಸರಿನಲ್ಲಿದ್ದು, ಕೆಲವನ್ನು ಸಹೋದರ ನಾಗರಾಜು ಮತ್ತು ತನ್ನ ಹೆಸರಿಗೆ ಜಂಟಿ ಖಾತೆ ಮಾಡಿಸಿಕೊಂಡಿದ್ದಾರೆ. ಉಳಿದ ಜಮೀನನ್ನು ತಂದೆ ಹೆಸರಿಗೆ ಮಾಡಿ, ದಾನ ಪತ್ರದ ಮೂಲಕ ಸಹೋದರನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಸಂಬಂಧಿಕರ ಹೆಸರಿನಲ್ಲೂ ಬೇನಾಮಿ ಆಸ್ತಿ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏರಂಗೆರೆಯಲ್ಲಿ 2 ಕೋಟಿ ರೂ.ಗೂ ಅಧಿಕ ಬಂಡವಾಳದ ಇಟ್ಟಿಗೆ ಕಾರ್ಖಾನೆ, ಜ್ಯೂಸ್ ಫ್ಯಾಕ್ಟರಿ, ವಾಸದ ಮನೆ ಸೇರಿ ವಿವಿಧ ಕಟ್ಟಡ ಹೊಂದಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಮೂರಂತಸ್ತಿನ ಮನೆ, ಕನಕಪುರದಲ್ಲೂ ಮನೆಯಿದ್ದು, ಎಲ್ಲವೂ ಅಕ್ರಮ ಆಸ್ತಿ ಎಂದು ಆರೋಪಿಸಲಾಗಿದೆ. ಸ್ಕಾರ್ಪಿಯೋ ಕಾರು, ಟಾಟಾ ಸುಮೋ, 3 ಬೈಕ್ ಸೇರಿ ಹಲವು ವಾಹನಗಳನ್ನು ಹೊಂದಿದ್ದು, ಮಕ್ಕಳು ಮತ್ತು ಸಂಬಂಧಿಕರ ಹೆಸರಲ್ಲೂ ವಾಹನಗಳಿವೆ ಎನ್ನಲಾಗಿದೆ.