ಬೆಳೆಹಾನಿ ಪರಿಹಾರ ವಿತರಣೆಗೆ ನೀತಿ ಸಂಹಿತೆ ಅಡ್ಡಿ !

| ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾದ ಬೆಳೆಹಾನಿ ಪರಿಹಾರ ವಿತರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ನಿತ್ಯ ಸರ್ಕಾರಿ ಕಚೇರಿಗಳಿಗೆ ಪರಿಹಾರಕ್ಕಾಗಿ ಅಲೆದಾಡುತ್ತಿದ್ದ ರೈತರು ನಿರಾಸೆ ಅನುಭವಿಸುತ್ತಿದ್ದಾರೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ 1,89,664 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಿಂದ ರೈತರಿಗೆ 142 ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿತ್ತು. ಆದರೆ, ರಾಜ್ಯ ಸರ್ಕಾರವು ಆರ್ಥಿಕ ಸಮಸ್ಯೆ, ಕೇಂದ್ರದಿಂದ ಪರಿಹಾರ ಹಣ ಬಾರದಿರುವುದು ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ 5 ತಿಂಗಳುಗಳಿಂದ ರೈತರಿಗೆ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಿಲ್ಲ. ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆ ಮತ್ತು ನದಿಗಳ ಪ್ರವಾಹದಿಂದ 3,525 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಮುಳುಗಡೆಯಾಗಿ 127.92 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿತ್ತು. ಮತ್ತೊಂದೆಡೆ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವ ಹಿನ್ನೆಲೆಯಲ್ಲಿ 80,500 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ 58.5 ಕೋಟಿ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತ 2018 ಅಕ್ಟೋಬರ್‌ನಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಇಲ್ಲಿಯವರೆಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಮತ್ತೊಂದೆಡೆ ಹಿಂಗಾರು ಹಂಗಾಮಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಆದರೆ ಜಿಲ್ಲೆಯ 35 ಹೋಬಳಿಗಳ ವ್ಯಾಪ್ತಿಯ 2.91ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಾಗಿತ್ತು. ಇದರಲ್ಲಿ 1.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಎಲ್ಲ ಬೆಳೆಗಳು ಸಂಪೂರ್ಣ ಹಾನಿಯಾಗಿತ್ತು. ಪರಿಣಾಮ ರೈತರಿಗೆ ಸುಮಾರು 84.56 ಕೋಟಿ ರೂ. ನಷ್ಟ ಉಂಟಾಗಿತ್ತು. ಈ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ 2019 ಜನವರಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಇಲ್ಲಿಯವರೆಗೆ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಕಾಕ, ಬೈಲಹೊಂಗಲ, ಕಿತ್ತೂರು, ಖಾನಾಪುರ, ರಾಯಬಾಗ, ಹುಕ್ಕೇರಿ,ಅಥಣಿ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಹೀಗಾಗಿ ಬೆಳೆಗಳೆಲ್ಲಾ ಸಂಪೂರ್ಣ ಒಣಗಿವೆ. ಜಿಲ್ಲೆಯನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿತ್ತು. ಜತೆಗೆ ಕುಡಿಯುವ ನೀರು, ಜಾನುವಾರ ಮೇವು ಇನ್ನಿತರ ತುರ್ತು ಕಾಮಗಾರಿ ಕೈಗೊಳ್ಳಲು 14 ತಾಲೂಕುಗಳಿಗೆ ತಲಾ 1 ಕೋಟಿ ರೂ.ನಂತೆ ಅನುದಾನ ಬಿಡುಗಡೆ ಮಾಡಿದೆ. ಆದರೆ, ಬೆಳೆಹಾನಿ ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈ ಕೊಟ್ಟ ಮೈತ್ರಿ ಸರ್ಕಾರ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ ಜುಲೈನಲ್ಲಿ ಸುರಿದ ಮಳೆಗೆ ನದಿಗಳು, ನಾಲಾ ಪ್ರವಾಹದಿಂದ ಅಥಣಿ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಬೆಳಗಾವಿ ತಾಲೂಕುಗಳಲ್ಲಿ 3.52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಮುಳುಗಡೆಯಾಗಿದ್ದವು. ಅದರಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಬೆಳೆಗಳು ಮುಳುಗಡೆಯಾಗಿವೆ.48 ಗಂಟೆಗಳ ಒಳಗಾಗಿ ಪರಿಹಾರ ನೀಡುವುದಾಗಿ ಘೋಷಿಸಿದ್ದ ಮೈತ್ರಿ ಸರ್ಕಾರ ಇಲ್ಲಿಯವರೆಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಭರವಸೆಯ ಹೆಸರಿನಲ್ಲಿ ಸರ್ಕಾರ ಕೈ ಕೊಟ್ಟಿದೆ ಎಂದು ರೈತರು ದೂರಿದರು.

ಜಿಲ್ಲೆಯಲ್ಲಿ ಬೆಳಹಾನಿ ಸಮಗ್ರ ವಿವರ

ತಾಲೂಕು ಬೆಳೆಹಾನಿ (ಹೆಕ್ಟರ್)
ಬೆಳಗಾವಿ 8,199
ಸವದತ್ತಿ 53,413
ಚಿಕ್ಕೋಡಿ 9,685
ರಾಯಬಾಗ 18,547
ಅಥಣಿ 71,314
ಬೈಲಹೊಂಗಲ 38,527
ಹುಕ್ಕೇರಿ 9,820
ರಾಮದುರ್ಗ 53,165
ಗೋಕಾಕ 28,930

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆಹಾನಿ ಪರಿಹಾರ ಬಿಡುಗಡೆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕು. ಈಗಾಗಲೇ ಜಿಲ್ಲೆಯಲ್ಲಿ ಬೆಳೆಹಾನಿ ಉಂಟಾಗಿರುವ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ. |ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಚುನಾವಣಾಧಿಕಾರಿ