ಡೊಂಗರಗಾಂವ ಬಳಿ ರೈತನ ಮೇಲೆ ಕರಡಿ ದಾಳಿ

ಖಾನಾಪುರ: ತಾಲೂಕಿನ ಲೋಂಡಾ ಅರಣ್ಯ ವಲಯದ ಡೊಂಗರಗಾಂವ ಗ್ರಾಮದ ಬಳಿ ಮಂಗಳವಾರ ಸಂಜೆ ಹೊಲದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕೃಷಿಕನ ಮೇಲೆ ಮೂರು ಕರಡಿಗಳ ಗುಂಪೊಂದು ಎರಗಿ ರೈತನನ್ನು ಗಂಭೀರವಾಗಿ ಪರಚಿ ಗಾಯಗೊಳಿಸಿವೆ.

ಕರಡಿ ದಾಳಿಗೊಳಗಾದವರನ್ನು ಡೊಂಗರಗಾಂವ ಗ್ರಾಮದ ರೈತ ನಾಮದೇವ ಪಾಲಕರ (55) ಎಂದು ಗುರುತಿಸಲಾಗಿದೆ. ಡೊಂಗರಗಾಂವ ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ತಮ್ಮ ಭತ್ತದ ಜಮೀನಿನಲ್ಲಿ ಕೃಷಿ ಕೆಲಸಕ್ಕಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿದ್ದ ನಾಮದೇವ ಮುಸ್ಸಂಜೆ ಹೊತ್ತಿಗೆ ದಿನದ ಕೆಲಸ ಮುಗಿಸಿ ಹೊಲದಿಂದ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಡೊಂಗರಗಾಂವ ಗ್ರಾಮದಿಂದ ಅರ್ಧ ಕಿಮೀ ಅಂತರದ ಕಾಲುದಾರಿಯಲ್ಲಿ ಅವರಿಗೆ ಎದುರಾದ ಮೂರು ಕರಡಿಗಳು ನಾಮದೇವ ಅವರ ಮೇಲೆ ದಾಳಿ ನಡೆಸಿವೆ.

ತಮ್ಮ ಕಾಲು ಮತ್ತು ಸೊಂಟದ ಭಾಗಕ್ಕೆ ಪರಚಿ ಗಾಯಗೊಳಿಸಿದ ಕರಡಿಗಳ ದಾಳಿಯಿಂದ ಭಯಭೀತರಾದ ನಾಮದೇವ ಕರಡಿಗಳಿಂದ ತಪ್ಪಿಸಿಕೊಂಡು ಊರಿನತ್ತ ಓಡಲಾರಂಭಿಸಿ ಕೆಲ ದೂರ ಸಾಗಿ ಜೀವ ರಕ್ಷಣೆಗಾಗಿ ಕೂಗಿದಾಗ ಗ್ರಾಮಸ್ಥರು ನಾಮದೇವ ಅವರ ನೆರವಿಗೆ ಧಾವಿಸಿದ್ದಾರೆ. ಕರಡಿಗಳ ದಾಳಿಯ ಸುದ್ದಿಯನ್ನು ಸ್ಥಳೀಯರ ಮೂಲಕ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲಾಖೆಯ ವಾಹನದೊಂದಿಗೆ ಗ್ರಾಮಕ್ಕೆ ತೆರಳಿ ನಾಮದೇವ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಕೂಡಲೇ ಅವರನ್ನು ಪಟ್ಟಣಕ್ಕೆ ಕರೆತಂದು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ವೈದ್ಯರ ಸೂಚನೆಯ ಮೇಲೆ ನಾಮದೇವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸುದ್ದಿ ತಿಳಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ ಸಂಗೊಳ್ಳಿ, ವಲಯ ಅರಣ್ಯಾಧಿಕಾರಿ ಎಸ್.ಎಸ್ ನಿಂಗಾಣಿ ಮತ್ತು ಸಿಬ್ಬಂದಿ ಡೊಂಗರಗಾಂವ ಗ್ರಾಮಕ್ಕೆ ತೆರಳಿ ಕರಡಿ ದಾಳಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ನಾಮದೇವ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಬೆಳಗಾವಿ ಡಿ.ಎಫ್.ಒ ಎಂ.ವಿ ಅಮರನಾಥ ಅವರಿಗೂ ಈ ವಿಷಯವನ್ನು ಮುಟ್ಟಿಸಿದ್ದು, ಗಾಯಾಳು ನಾಮದೇವ ಅವರಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಅವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಡಿ.ಎಫ್.ಒ ಅಮರನಾಥ ಇಲಾಖೆಯಿಂದ ನಾಮದೇವ ಅವರ ಚಿಕಿತ್ಸಾ ವೆಚ್ಚ ಭರಿಸುವ ಜತೆಗೆ ಇಲಾಖೆಯಿಂದಲೂ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಗಾಬರಿಗೊಂಡಿರುವ ನಾಮದೇವ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಲೋಂಡಾ ವಲಯ ಅರಣ್ಯ ಅಧಿಕಾರಿ ಎಸ್.ಎಸ್ ನಿಂಗಾಣಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *