ಬೆಳಗಾವಿ: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ರದ್ದುಪಡಿಸಿ

ಬೆಳಗಾವಿ : ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿರುವುದು ಖಂಡನೀಯವಾಗಿದ್ದು, ತಕ್ಷಣ ಆದೇಶ ರದ್ದುಪಡಿಸಬೇಕು ಎಂದು ಕರ್ನಾಟಕ ಸಂಗ್ರಾಮ ಸೇನೆಯ ರಾಜ್ಯಾಧ್ಯಕ್ಷ ಸಜೀವ ದುಮ್ಮಕನಾಳ ಆಗ್ರಹಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಈ ಕೂಡಲೇ ಆಂಗ್ಲ ಮಾಧ್ಯಮ ರದ್ದು ಪಡಿಸಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಕಾನ್ವೆಂಟ್‌ಗಳ ಹಾವಳಿಯಿಂದ ಸರ್ಕಾರಿ ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಬಂದಾಗುತ್ತಿವೆ. ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಬೇಕಾಗಿದ್ದ ಸರ್ಕಾರ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದನ್ನು ರದ್ದು ಪಡಿಸಬೇಕು.ಖಾಸಗಿ ಶಾಲಾ, ಕಾಲೇಜುಗಳಿಗೆ ಜನಪ್ರತಿನಿಧಿಗಳು ನೀಡುವ ವಂತಿಕೆಯನ್ನು ಸರ್ಕಾರ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಿಗೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದ ಬೆಂಗಳೂರು, ತುಮಕೂರು, ಶಿವಮೊಗ್ಗ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡಲಾಗಿದೆ. ಆದರೆ ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಯಾಗಿಲ್ಲ. ಇಲ್ಲಿ ನಗರ ಸೇವಕರು ಬೇಕ್ಕಾಬಿಟ್ಟಿಯಾಗಿ ಕೆಲಸ ಮಾಡಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷೆ ಶ್ವೇತಾ ಜಗದಾಳೆ, ನಗರ ಘಟಕದ ಅಧ್ಯಕ್ಷೆ ಸಹನಾ ಪಟೇಲ, ಇಸ್ಮಾಯಿಲ್ ಫೀರಜಾದೆ, ರೇಣುಕಾ ನಾವಗೇಕರ, ಸುಜಾತಾ ಕಡಲೆಕಾಯಿ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *