ನಿವೃತ್ತಿ ವೇತನ ವಿಳಂಬಕ್ಕೆ ಬಡ್ಡಿ

| ಕೀರ್ತಿನಾರಾಯಣ ಸಿ.

ಬೆಂಗಳೂರು: ಹುದ್ದೆಯಿಂದ ನಿವೃತ್ತಿಯಾಗಿ ತಿಂಗಳುಗಳು, ವರ್ಷ ಕಳೆದರೂ ನಿವೃತ್ತಿ ವೇತನ ಬಿಡುಗಡೆಯಾಗಿಲ್ಲ ಎಂದು ಸರ್ಕಾರಿ ಅಧಿಕಾರಿ ಹಾಗೂ ನೌಕರರು ಇನ್ನು ಮುಂದೆ ಕೊರಗಬೇಕಿಲ್ಲ. ನಿಗದಿತ ಕಾಲಮಿತಿಯಲ್ಲಿ ಬಿಡುಗಡೆ ಮಾಡಲು ಸರ್ಕಾರ ಮಾರ್ಪಾಡು ಯೋಜನೆ ರೂಪಿಸಿದೆ. ಒಂದು ವೇಳೆ ವಿಳಂಬವಾದರೆ ಬಡ್ಡಿ ಪಾವತಿಸಲಿದ್ದು, ಆ ಹಣವನ್ನು ವಿಳಂಬಕ್ಕೆ ಕಾರಣವಾಗುವ ಅಧಿಕಾರಿ ಅಥವಾ ನೌಕರರಿಂದಲೇ ವಸೂಲಿ ಮಾಡಲು ಆದೇಶಿಸಿದೆ.

ನಿವೃತ್ತಿ ವೇತನ ಬಿಡುಗಡೆ ಪ್ರಕರಣಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಗೊಳಿಸದೆ ಸತಾಯಿಸಲಾಗುತ್ತಿದೆ ಎಂದು ನಿವೃತ್ತ ಅಧಿಕಾರಿ ಮತ್ತು ನೌಕರರಿಂದ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈವರೆಗಿದ್ದ ರೂಢಿಗತ ಪದ್ಧತಿ ಮಾರ್ಪಾಡುಗೊಳಿಸಿ ಹೊಸ ಪದ್ಧತಿ ಜಾರಿಗೆ ತಂದಿದೆ.

ವಯೋನಿವೃತ್ತಿ ಹೊಂದಲಿರುವ ನೌಕರರ ನಿವೃತ್ತಿ ವೇತನದ ದಾಖಲಾತಿಗಳನ್ನು ಅವರು ನಿವೃತ್ತಿಯಾಗುವ 6 ತಿಂಗಳು ಮುಂಚಿತವಾಗಿ ಸಿದ್ಧಪಡಿಸುವ ಪದ್ಧತಿ ಪ್ರಸ್ತುತ ಜಾರಿಯಲ್ಲಿದೆ. ಇನ್ನು ಮುಂದೆ 12 ತಿಂಗಳ ಮುಂಚಿತವಾಗಿಯೇ ದಾಖಲಾತಿ ತಯಾರಿಸುವ ಕೆಲಸ ಆರಂಭಿಸಿ, ನಿವೃತ್ತಿಗೆ ಕನಿಷ್ಠ 3 ತಿಂಗಳು ಬಾಕಿ ಇರುವಂತೆಯೇ ಮಹಾಲೇಖಪಾಲರಿಗೆ ಕಡ್ಡಾಯವಾಗಿ ದಾಖಲಾತಿ ಕಳುಹಿಸಬೇಕು.

ವಾರ್ಷಿಕ 10 ಸಾವಿರ ಸಿಬ್ಬಂದಿ ನಿವೃತ್ತಿ

ಸರ್ಕಾರದಲ್ಲಿ ಒಟ್ಟು 84 ಇಲಾಖೆಗಳಿವೆ. 2500ಕ್ಕೂ ಹೆಚ್ಚು ವೃಂದಗಳಿದ್ದು, 7.73 ಲಕ್ಷ ಹುದ್ದೆಗಳು ಮಂಜೂರಾಗಿವೆ. 5.20 ಲಕ್ಷ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇದರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಇನ್ನೂ ಶೇ.30ಕ್ಕಿಂತ ಹೆಚ್ಚು ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಉಳಿದಿವೆ. ವಾರ್ಷಿಕ ಅಂದಾಜು 10 ಸಾವಿರ ಅಧಿಕಾರಿ ಮತ್ತು ನೌಕರರು ನಿವೃತ್ತಿ ಹೊಂದುತ್ತಾರೆ. ಇದರಲ್ಲಿ ಬಹುತೇಕ ಪ್ರಕರಣಗಳಲ್ಲಿ ನಿವೃತ್ತಿ ವೇತನ ಮಂಜೂರು ಮಾಡಲು ವಿಳಂಬ ಮಾಡಲಾಗುತ್ತದೆ ಎಂಬು ದೂರುಗಳಿವೆ.

ತಿಂಗಳು ಮುಂಚೆ ಸಲ್ಲಿಕೆ

ಪತ್ರಾಂಕಿತ ಸರ್ಕಾರಿ ಅಧಿಕಾರಿಗಳ ವಿಚಾರದಲ್ಲಿ ನಮೂನೆ 7(ಎ)ದಲ್ಲಿ ಅವಶ್ಯ ಮಾಹಿತಿಯನ್ನು ಮಂಜೂರಾತಿಯೊಂದಿಗೆ ವಯೋನಿವೃತ್ತಿಯ ದಿನಾಂಕಕ್ಕೆ 1 ತಿಂಗಳ ಮುಂಚಿತವಾಗಿ ಮಹಾಲೇಖಪಾಲರಿಗೆ ಕಳುಹಿಸಬೇಕು. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲ ಘಟಕಗಳ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ಸರ್ಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೂಚಿಸಿದ್ದಾರೆ.

ವಿಳಂಬವಾದ್ರೆ ಶಿಸ್ತುಕ್ರಮ

ನಿವೃತ್ತಿ ವೇತನವನ್ನು ತಡವಾಗಿ ಪಾವತಿ ಮಾಡಿದರೆ ಅದಕ್ಕೆ ಬಡ್ಡಿ ಸಮೇತ ಕೊಡಬೇಕಾಗುತ್ತದೆ. ಆದ್ದರಿಂದ ವಿಳಂಬಕ್ಕೆ ಕಾರಣವಾಗುವ ನಿವೃತ್ತಿ ವೇತನ ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರದಿಂದ ಅಥವಾ ಸಂಬಂಧಪಟ್ಟ ಅಧಿಕಾರಿ/ನೌಕರರಿಂದಲೇ ವಸೂಲಿ ಮಾಡಲು ತೀರ್ವನಿಸಲಾಗಿದೆ. ಅಲ್ಲದೆ, ಅಂಥ ಅಧಿಕಾರಿ, ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸರ್ಕಾರಿ ನೌಕರರು ನಿವೃತ್ತಿಯಾದ ಸಂದರ್ಭದಲ್ಲಿ ನಿವೃತ್ತಿ ಸೌಲಭ್ಯಗಳ ಮಂಜೂರು ವಿಳಂಬವಾದಲ್ಲಿ ಕಾರಣರಾದ ಅಧಿಕಾರಿ ಹಾಗೂ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಆ ಬಡ್ಡಿ ಮೊತ್ತವನ್ನು ಇವರಿಂದಲೇ ವಸೂಲಿ ಮಾಡಲಾಗುವುದು.

| ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *