ರಾಜ್ಯ ಸರ್ಕಾರಕ್ಕೆ ಮುಂಬಡ್ತಿ ಮೀಸಲು ಧರ್ಮಸಂಕಟ

>

ಬೆಂಗಳೂರು: ಮುಂಬಡ್ತಿ ಮೀಸಲು ವಿಚಾರ ಸಮ್ಮಿಶ್ರ ಸರ್ಕಾರಕ್ಕೆ ಧರ್ಮ ಸಂಕಟವಾಗಿ ಕಾಡಲಾರಂಭಿಸಿದೆ.

ನ್ಯಾಯಾಲಯದ ಆದೇಶ ಪಾಲಿಸಬೇಕೋ? ಶಾಸನ ಸಭೆಯಿಂದ ಒಪ್ಪಿಗೆ ಆಗಿರುವ ಕಾನೂನು ಪಾಲಿಸಬೇಕೋ ಎಂಬ ಸಂದಿಗ್ಧತೆಯಿಂದ ಹೊರಬರಲು ಗುರುವಾರ ನಡೆಯುವ ಸಂಪುಟ ಸಭೆ ಯಲ್ಲಿ ತೀರ್ಮಾನ ಮಾಡಲಾ ಗುತ್ತದೆ. ಹಿಂದಿನ ಸರ್ಕಾರದ ಅವಧಿ ಯಲ್ಲಿ ಮೀಸಲು ಬಡ್ತಿಗೊಂಡವ ರನ್ನು ಅದೇ ಹುದ್ದೆಯಲ್ಲಿ ರಕ್ಷಿಸಲು ಕಾನೂನು ಜಾರಿ ಮಾಡ ಲಾಯಿತು. ಆದರೆ, ಈ ಕಾನೂನು ಜಾರಿಗೊಳಿಸದೇ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ.

ಇಷ್ಟರ ನಡುವೆ ಸಮ್ಮಿಶ್ರ ಸರ್ಕಾರದ ಎರಡು ಪಕ್ಷಗಳಲ್ಲಿ ನ್ಯಾಯಪೀಠದ ತೀರ್ಪು ಪಾಲಿಸುವ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಇದೆ. ಸುಪ್ರೀಂ ಹೇಳಿದ್ದನ್ನು ಕೇಳಬೇಕಾಗುತ್ತದೆ ಎಂಬುದು ಜೆಡಿಎಸ್ ವಾದವಾದರೆ, ಶಾಸಕಾಂಗ ಒಪ್ಪಿರುವ ರಾಷ್ಟ್ರಪತಿ ಸಹಿ ಹಾಕಿರುವ ಕಾನೂನನ್ನು ಅನುಷ್ಠಾನ ಮಾಡಬೇಕೆಂಬುದು ಕಾಂಗ್ರೆಸ್ ಹಠ. ಈ ಹಿಂದಿನ ಸಂಪುಟ ಸಭೆಯಲ್ಲಿ ಕೂಡ ಇದೇ ವಿಚಾರದಲ್ಲಿ ಎರಡೂ ಪಕ್ಷದ ಸಚಿವರ ನಡುವೆ ಚರ್ಚೆಯಾಗಿತ್ತು. ಆದರೆ, ಸುಪ್ರೀಂ ತೀರ್ಪಿನ ಬಳಿಕ ನಿರ್ಧಾರ ಮಾಡೋಣ ಎಂದು ಕಾಂಗ್ರೆಸ್ ಸಚಿವರನ್ನು ಸಿಎಂ ಸಮಾಧಾನಪಡಿಸಿದ್ದರು.

ಕಳೆದ ವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲೂ ಕಾನೂನು ಜಾರಿ ಬಗ್ಗೆ ಕಾಂಗ್ರೆಸ್ ಒತ್ತಾಯ ಮಾಡಿತ್ತು. ಆದರೆ, ಸೆ.5ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿ ರುವ ಕಾರಣ, ಅಂದು ನಿರ್ದೇಶನ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲು ಸಿಎಂ ಎಲ್ಲರನ್ನು ಒಪ್ಪಿಸಿದ್ದರು.

ಎದುರಾದ ಸಂಕಟ: ಸುಪ್ರೀಂ ಕೋರ್ಟ್ ಬುಧವಾರ ಪುನಃ ಪ್ರಕರಣದ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದೆ. ಈ ತೀರ್ವನದಿಂದ ಸರ್ಕಾರಕ್ಕೆ ಪುನಃ ಸಂಕಟ ಎದುರಾಗಿದೆ. ಸುಪ್ರೀಂ ಹೇಳಿರುವಂತೆ ಯಥಾಸ್ಥಿತಿ ಕಾಪಾಡಬೇಕೋ ಅಥವಾ ಕಾಂಗ್ರೆಸ್ ಒತ್ತಾಯಕ್ಕೆ ಮಣಿಯಬೇಕೋ ಎಂಬಂತಾಗಿದೆ.

ಇಂದು ನಿರ್ಧಾರ: ಜುಲೈನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಸುಪ್ರೀಂ ಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಸಿ, 2017ರ ಫೆಬ್ರವರಿ 9ರಂದು ಪವಿತ್ರ ಪ್ರಕರಣದಲ್ಲಿ ನ್ಯಾಯಪೀಠ ನೀಡಿದ ತೀರ್ಮಾನ ಪಾಲಿಸಬೇಕೋ ಅಥವಾ ಶಾಸಕಾಂಗ ಜಾರಿ ಮಾಡಿದ ಕಾನೂನು ಜಾರಿಮಾಡಬೇಕೋ ಎಂಬ ಬಗ್ಗೆ ಮಾರ್ಗದರ್ಶನ ಮಾಡುವಂತೆ ಕೋರಿದ್ದರು.

ಈ ಬೆಳವಣಿಗೆ ಬಳಿಕ ಮೂರು ಬಾರಿ ವಿಚಾರಣೆ ನಡೆದಿದ್ದು, ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡುತ್ತಲೇ ಇದೆ. ಈಗ ಗುರುವಾರ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಒಂದು ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸಂಪುಟ ಸಭೆಯಲ್ಲಿ ಕಾನೂನು ಜಾರಿಗೆ ಒತ್ತಾಯ ಮಾಡುವ ಬಗ್ಗೆ ಕಾಂಗ್ರೆಸ್​ನ ಪ್ರಮುಖ ಸಚಿವರು ತೀರ್ಮಾನ ಮಾಡಿದ್ದು, ಚರ್ಚೆ ಕೂಡ ನಡೆಸಿದ್ದಾರೆ. ಅಡ್ವೊಕೇಟ್ ಜನರಲ್, ಮುಖ್ಯಕಾರ್ಯದರ್ಶಿಯಾದಿಯಾಗಿ ಪ್ರಮುಖ ಅಧಿಕಾರಿಗಳೆಲ್ಲ, ಕಾನೂನು ಜಾರಿ ಮಾಡಿದರೆ ಸುಪ್ರೀಂ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ವಿಚಿತ್ರ ಧರ್ಮಸಂಕಟಕ್ಕೆ ಸಿಎಂ ಸಿಲುಕಿದ್ದಾರೆ.

ಆಕ್ಷೇಪಣೆ ಸಲ್ಲಿಕೆಯಲ್ಲಿ ಗೊಂದಲ

ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನ ಅನುಸಾರ ಎಲ್ಲ ಇಲಾಖೆಯಲ್ಲಿ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿದ್ದು, ಈ ಪಟ್ಟಿಗಳ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿವೆ. ಈ ಕಾರಣಕ್ಕೆ ಸರ್ಕಾರ ಪಟ್ಟಿ ಶುದ್ಧಗೊಳಿಸಲು ಸಮಾಲೋಚಕರ ಸಮಿತಿ ರಚಿಸಿದೆ. ಆದರೆ, ಈ ಸಮಿತಿಗೆ ಆಕ್ಷೇಪಣೆ ನೌಕರರು ನೀಡಿದ ಅರ್ಜಿ ಸಲ್ಲಿಕೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ್ಲ ಇಲಾಖೆ ಮುಖ್ಯಸ್ಥರಿಗೆ ಸುತ್ತೋಲೆ ಕಳಿಸಿ, ಆಕ್ಷೇಪಣೆ ಅರ್ಜಿಗಳನ್ನು ಏಕರೂಪದ ಕಾರ್ಯವಿಧಾನವನ್ನು ಪಾಲಿಸಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಕಾನೂನು ಜಾರಿ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುತ್ತದೆ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ