ಪರಿಶಿಷ್ಟರ ಮುಂಬಡ್ತಿ ಕಾನೂನಿಗೆ ಮತ್ತೆ ಅರ್ಜಿ

ಬೆಂಗಳೂರು: ಮುಂಬಡ್ತಿ ಮೀಸಲು ಪಡೆದವರನ್ನು ರಕ್ಷಿಸಲು ಜಾರಿ ಮಾಡಿದ್ದ ಕಾನೂನು ಅನುಷ್ಠಾನಕ್ಕೆ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಬಲ ವಾದ ಹೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ವಿಸõತ ಚರ್ಚೆ ನಡೆಯಿತು. ಸೆ.12ರಂದು ಸುಪ್ರಿಂಕೋರ್ಟ್​ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ವೇಳೆ ಹಿಂಬಡ್ತಿಗೊಂಡ ಎಸ್ಸಿ-ಎಸ್ಟಿ ನೌಕರರನ್ನು ರಕ್ಷಿಸಲು ಶಾಸನ ಸಭೆಯಿಂದ ಅಂಗೀಕಾರಗೊಂಡ ರೂಪದಲ್ಲಿರುವ ಕಾನೂನು ಜಾರಿಗೆ ಅನುಮತಿ ಕೋರಲು ಉದ್ದೇಶಿಸಲಾಯಿತು.

ಈ ಬಗ್ಗೆ ವಿವರಣೆ ನೀಡಿರುವ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ, ‘ಕಳೆದ ವಿಚಾರಣೆ ಸಂದರ್ಭದಲ್ಲಿಯೇ ಕಾನೂನು ಜಾರಿಗೆ ಅವಕಾಶ ಕೋರಿದ್ದೆವು. ಯಥಾಸ್ಥಿತಿ ಕಾಪಾಡುವಂತೆ ನ್ಯಾಯಪೀಠ ಮೌಖಿಕ ಸೂಚನೆ ನೀಡಿತು. ಈ ಕಾರಣಕ್ಕೆ ಗೌರವ ನೀಡಿ ಆದೇಶ ಪಾಲನೆ ಮಾಡುತ್ತಿದ್ದೇವೆ. ಮುಂದೇನು ಮಾಡಬೇಕೆಂಬ ಬಗ್ಗೆ ಸಂಪುಟದಲ್ಲಿ ವಿಸõತ ಚರ್ಚೆ ನಡೆಯಿತು’ ಎಂದರು.

‘ನ್ಯಾಯಾಲಯದಲ್ಲಿ ಪ್ರಬಲ ವಾದ ಮಾಡುವ ಬಗ್ಗೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. 12ರ ವಿಚಾರಣೆ ವೇಳೆ ಸರ್ಕಾರದ ಅಭಿಪ್ರಾಯ ತಿಳಿಸುತ್ತೇವೆ. ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಕಾನೂನು ಜಾರಿಗೆ ಅವಕಾಶ ಕೇಳುತ್ತೇವೆ’ ಎಂದು ವಿವರಿಸಿದರು.

ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಕಡೆಯಿಂದ ಕಾನೂನು ಜಾರಿಗೆ ಬಲವಾದ ಒತ್ತಾಯ ಬಂದಿದೆ. ಕಾನೂನು ಜಾರಿ ಮಾಡಿದರೆ ನ್ಯಾಯಾಂಗದ ಸೂಚನೆಯನ್ನು ಸರ್ಕಾರವೇ ಧಿಕ್ಕರಿಸಿದರೆ ಸಮಾಜದಲ್ಲಿ ಕೆಟ್ಟ ಸಂದೇಶ ಹೋಗಬಹುದು, ಬೇರೆ ಪ್ರಕರಣದಲ್ಲೂ ಇದೇ ರೀತಿಯ ನಿರ್ಧಾರ ಕೈಗೊಳ್ಳಬಹುದೆಂಬ ಅಭಿಪ್ರಾಯ ಬಂದಿದೆ. ಈ ಕಾರಣಕ್ಕೆ ಸೆ.12ರಂದು ನಡೆಯುವ ವಿಚಾರಣಲ್ಲಿ ವಾದ ಪ್ರಬಲವಾಗಿರಬೇಕು, ಜತೆಗೆ ಕಾನೂನು ಜಾರಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಮುಖ್ಯಕಾರ್ಯದರ್ಶಿಗೆ ಸೂಚಿಸಲಾಯಿತು.

ಕಾಂಪಿಟ್ ಟು ಚೀನಾಗೆ ತಯಾರಿ

ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ ಎಂಬ ಕಾರ್ಯಕ್ರಮ ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆಯಾಯ ಪ್ರದೇಶದ ಸಂಪನ್ಮೂಲ ಮತ್ತು ವೃತ್ತಿಕೌಶಲ ಆಧರಿಸಿ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಒಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾನಾ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ 9 ಕ್ಲಸ್ಟರ್ ಮಾದರಿ ರಚಿಸಲು ಒಪ್ಪಿಗೆ ನೀಡಲಾಯಿತು. ಇದಕ್ಕೆ ಪೂರಕವಾಗಿ ವಿಷನ್ ಗ್ರೂಪ್ ರಚಿಸಲಾಗುತ್ತದೆ. ಯೋಜನೆಗೆ 5 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಮುಂದಿನ ನಾಲ್ಕು ವರ್ಷದಲ್ಲಿ ಷೇರು ಬಂಡವಾಳ ರೂಪದಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ನೀಡುತ್ತದೆ ಹಾಗೂ ಖಾಸಗಿ ಸಂಸ್ಥೆಗಳು 3 ಸಾವಿರ ಕೋಟಿ ರೂ. ಬಂಡವಾಳ ಹೂಡಬೇಕಾಗುತ್ತದೆ.

ಬೆಳೆ ಸರ್ವೆಗೆ ಮೊಬೈಲ್ ಆಪ್

ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಮತ್ತು ರೈತರು ಒಳಗೊಂಡಂತೆ ಹಂಗಾಮಿ ಬೆಳೆಗಳ ಖಚಿತ ಅಂಕಿ ಅಂಶಗಳನ್ನು ಆಪ್​ನಿಂದ ಸಂಗ್ರಹಿಸಬಹುದಾಗಿದೆ. -ಠಿ;25 ಕೋಟಿ ವೆಚ್ಚದಲ್ಲಿ ಈ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಆರ್​ಟಿಸಿ ಅಪ್​ಡೇಟ್, ಬೆಳೆವಿಮೆ ಯೋಜನೆ, ಬೆಂಬಲ ಬೆಲೆ ಕೊಡಬೇಕಾದ ಸಂದರ್ಭ ಇತ್ಯಾದಿ ಸರ್ವೆ ಮಾಹಿತಿ ಪರಿಗಣಿಸಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಪ್ರಮುಖ ನಿರ್ಣಯಗಳು

 • ಇಂಡಿಯಾ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡ್ಟಕರ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸೆಮಿಕಂಡಕ್ಟರ್ ಫಾಬ್​ಲೆಸ್ ಆಕ್ಸಲರೇಟರ್ ಲ್ಯಾಬ್​ಗೆ 56.31 ಕೋಟಿ ರೂ.
 • ಯಲ್ಲಾಪುರ ತಾಲೂಕಿನ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬೇಡ್ತಿ ನದಿಗೆ ಸೇತುವೆ ನಿರ್ವಿುಸಲು 23.67 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ.
 • ರಾಮನಗರದಲ್ಲಿ ಕಚೇರಿ ಸಂಕೀರ್ಣಕ್ಕಾಗಿ 40.17 ಕೋಟಿ ರೂ. ಪರಿಷ್ಕೃತ ವೆಚ್ಚದ ಕಾಮಗಾರಿ.
 • ರಾಮನಗರ- ಚನ್ನಪಟ್ಟಣ ನಡುವೆ ಬರುವ 16 ಗ್ರಾಮಗಳಿಗೆ ನೆಟ್​ಕಲ್ ಜಲಾಶಯದಿಂದ ಕುಡಿಯುವ ನೀರಿಗೆ 450 ಕೋಟಿ ರೂ.
 • ಖಾಸಗಿ ಸಂಸ್ಥೆಗಳಿಗೆ ಸೋಲಾರ್ ಪ್ಲಾಂಟ್ ನಿರ್ವಿುಸಲು, ನೇರವಾಗಿ ರೈತರಿಂದ ಜಮೀನು ಖರೀದಿಸಲು ಒಪ್ಪಿಗೆ. ವಾಸವದತ್ತ ಸಿಮೆಂಟ್ ಕಂಪನಿಗೆ ಸೇಡಂನಲ್ಲಿ 665 ಎಕರೆ, ಆದಾನಿ ಗ್ರೂಪ್​ನ ಮೆ. ವಾರ್ಧಾ ಸೋಲಾರ್ ಪ್ರೖೆ. ಲಿ.ಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನಲ್ಲಿ 44 ಎಕರೆ, ವಿಜಯಪುರದಲ್ಲಿ 255 ಎಕರೆ, ಔರಾದ ತಾಲೂಕಿನಲ್ಲಿ 282 ಎಕರೆ ಖರೀದಿಸಲು ಅವಕಾಶ.
 • ಕೊಳ್ಳೇಗಾಲ ತಾಲೂಕಿನ ಟಗರಪುರ ಇತರ 19 ಗ್ರಾಮಗಳಿಗೆ ಹಾಗೂ ಯಳ್ಳಂದೂರು ತಾಲೂಕಿನ 44 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಸರಬರಾಜು ಯೋಜನೆಗೆ 113.06 ಕೋಟಿ ರೂ., ಇದೇ ರೀತಿ ಲಿಂಗಸಗೂರು ತಾಲೂಕಿನ ಯಲಗಟ್ಟ ಮತ್ತು ಇತರ 10 ಗ್ರಾಮಗಳಿಗೆ 1623.30 ಲಕ್ಷ ರೂ. ವೆಚ್ಚ
 • ಹಾಸನ ಜಿಲ್ಲೆ ಹರದನಹಳ್ಳಿಯಲ್ಲಿ ವಸತಿಯುತ ಸರ್ಕಾರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ 15 ಕೋಟಿ ರೂ. ?ಹಾವೇರಿ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಸೇರಿ ಹತ್ತು ಜಿಲ್ಲೆಗಳಲ್ಲಿ ವಸತಿಯುತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ. 250 ಕೋಟಿ ರೂ.
 • ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರೂಸಾ 2.0 ಯೋಜನೆಯಲ್ಲಿ ನೂತನ ಸರ್ಕಾರಿ ಮಾದರಿ ಪದವಿ ಕಾಲೇಜಿಗೆ 24 ಕೋಟಿ ರೂ. 
 • ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪೆಟ್ ಸಿಟಿ ಸ್ಕ್ಯಾನರ್​ಗೆ 15 ಕೋಟಿ ಹಾಗೂ ಬೋನ್ ಮ್ಯಾರೋ ಕಸಿ ಘಟಕಕ್ಕೆ 12 ಕೋಟಿ ರೂ.
 • ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ವತಿಯಿಂದ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ನಿರ್ಮಲ ಹಾಗೂ ಸ್ಪೂರ್ತಿ ಕಿಟ್​ಗಳನ್ನು 17.83 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ.
 • ಚಳ್ಳಕೆರೆ- ಹಾವೇರಿ- ಮಡಿಕೇರಿಗಳಲ್ಲಿ ನೂತನ ಸರಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಕ್ಕೆ 49.35 ಕೋಟಿ ರೂ.
 • ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಷ್ಠಾನಕ್ಕೆ ಬಾಣಸವಾಡಿಯಲ್ಲಿ ಮೆಮೂ ನಿರ್ವಹಣಾ ಶೆಡ್ ನಿರ್ವಣಕ್ಕೆ 29 ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ.
 • ಹಾಸನ ಮತ್ತು ಕಾರವಾರದ ಸರ್ಕಾರಿ ವೈದ್ಯಕಾಲೇಜಿನಲ್ಲಿ ತಲಾ 11.25 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆ.