ಅಧಿಕಾರಿಗಳಿಗೆ ಮುಂಬಡ್ತಿ ಇಕ್ಕಟ್ಟು

<< ಯಥಾಸ್ಥಿತಿಗೆ ಒಪ್ಪಿಯೂ ಅನುಷ್ಠಾನಕ್ಕೆ ಅರ್ಜಿ | ಸರ್ಕಾರದ ನಿಲುವಿಗೆ ಬೇಸರ >>

ಬೆಂಗಳೂರು: ಮುಂಬಡ್ತಿ ಮೀಸಲು ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವುದಾಗಿ ನ್ಯಾಯಪೀಠದ ಮುಂದೆ ಒಪ್ಪಿ ಐದು ತಿಂಗಳಾಗುವುದರೊಳಗೆ ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಕಾನೂನು ಪ್ರತಿನಿಧಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈಗ ಯಥಾಸ್ಥಿತಿ ಸಾಧ್ಯವಿಲ್ಲ, ಕಾನೂನು ಜಾರಿಗೆ ಅವಕಾಶ ಮಾಡಿ ಕೊಡಬೇಕೆಂದು ಅದೇ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದೆ.

ಮುಂಬಡ್ತಿ ಮೀಸಲು ಕಾನೂನು ಜಾರಿಗೆ ಅನುವು ಮಾಡಿಕೊಡಬೇಕೆಂದು ಸುಪ್ರೀಂಕೋರ್ಟ್​ನಲ್ಲಿ ಸೆ.12ರಂದು ಅರ್ಜಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿಯವರಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸೂಚನೆ ನೀಡಲಾಗಿದೆ. ವಾದ ಪ್ರಬಲವಾಗಿ ಇರಬೇಕೆಂದೂ ತಿಳಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಅಧಿಕಾರಿ ವಲಯ ಹಾಗೂ ಕಾನೂನು ವಿಭಾಗದಲ್ಲಿ ತಣ್ಣನೆ ಅಸಮಾಧಾನ ವ್ಯಕ್ತವಾಗಿದೆ. ಸುಪ್ರೀಂಕೋರ್ಟ್ ತನ್ನ ಆದೇಶ ಪಾಲಿಸುವಂತೆ ಆದೇಶಿಸಿ 15 ತಿಂಗಳಾದರೂ ಪಾಲಿಸದ ಸರ್ಕಾರ, ಕಾಯ್ದೆ ಜಾರಿಗೆ ಅವಕಾಶ ಕೊಡುವಂತೆ ತರಾತುರಿ ಮಾಡುವುದನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವುದು ಕಷ್ಟ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆ.12ರಂದು ವಿಚಾರಣೆ: ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸರ್ಕಾರ ದಿಂದ ನ್ಯಾಯಾಂಗ ಉಲ್ಲಂಘನೆ, ಸರ್ಕಾರ ಜಾರಿ ಮಾಡಿದ ಕಾನೂನು ಪ್ರಶ್ನೆ ಮಾಡಿದ ಹತ್ತು ಅರ್ಜಿ ಸೇರಿ ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದೆ. ಸೆ. 5ರಂದು ನಡೆದ ವಿಚಾರಣೆ ವೇಳೆ ಎಸ್ಸಿ-ಎಸ್ಟಿ ನೌಕರರ ಪರವಾಗಿ ಇಂದಿರಾ ಜೈಸಿಂಗ್ ವಾದಿಸಿ ತತ್ಪರಿಣಾಮ ಬಡ್ತಿ ರಕ್ಷಿಸುವ (ಎಸ್ಸಿ, ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ನೀಡಿದ ಬಡ್ತಿ) ಕಾನೂನು ಜಾರಿಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕಿರಣ್ ಶೌರಿ ವಾದ ಮಾಡಿ, ಸುಪ್ರೀಂ ಆದೇಶ ಪಾಲನೆ ಆಗಬೇಕೆಂದು ಒತ್ತಾಯಿಸಿದ್ದೇವೆ. ಈ ಕಾರಣಕ್ಕೆ ಪ್ರತಿವಾದಿಯ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿದ್ದರು. ಅಂತಿಮವಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆ ಯನ್ನು ಸೆ.12ಕ್ಕೆ ಮುಂದೂಡಿತ್ತು. ಜತೆಗೆ ಈ ವಿಚಾರದಲ್ಲಿ ಇನ್ನೊಂದು ವಾರದಲ್ಲಿ ಅಂತಿಮ ತೀರ್ವನಕ್ಕೆ ಬರುತ್ತೇವೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ಸಂದರ್ಭದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಬೇಕೆಂದು ಸರ್ಕಾರ ಸೂಚಿಸಿದೆ. ಆದರೆ, ಈ ಪ್ರಯತ್ನ ಪರಿಣಾಮ ಬೀರುವುದು ಅನುಮಾನ. ಇನ್ನೊಂದು ಪ್ರಮುಖ ಅಂಶವೆಂದರೆ ಯಾವುದೇ ಕಾನೂನು ಜಾರಿ ವಿಚಾರದಲ್ಲಿ ಸಲ್ಲಿಕೆಯಾಗುವ ಅರ್ಜಿಯನ್ನು ತಕ್ಷಣದಲ್ಲಿ ವಿಚಾರಣೆ ನಡೆಸಿ ತೀರ್ಪಕೊಟ್ಟ ಪ್ರಕರಣ ಅತಿ ವಿರಳ ಎಂದು ಕಾನೂನು ಇಲಾಖೆ ಅಧಿಕಾರಿಗಳೇ ಅಭಿಪ್ರಾಯಪಡುತ್ತಾರೆ.

ಅಡ್ವೋಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರಿಗೆ ಈ ಎಲ್ಲ ವಿಚಾರದ ಬಗ್ಗೆ ಅರಿವಿದ್ದು ಸರ್ಕಾರದ ಗಮನಕ್ಕೂ ತಂದಿದ್ದಾರೆ. ಆದರೆ, ಕಾಂಗ್ರೆಸ್​ನ ಕೆಲವು ಸಚಿವರ ಒತ್ತಡದಿಂದಾಗಿ ಕಾನೂನು ಸಂಘರ್ಷಕ್ಕೆ ಮುಂದಡಿ ಇಡಲಾಗುತ್ತಿದೆ ಎಂಬ ಅಭಿಪ್ರಾಯ ಸರ್ಕಾರದಲ್ಲೇ ಇದೆ. ಸೆ.12-13ರಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಬಹುತೇಕ ಅಂತಿಮಗೊಳ್ಳಲಿದೆ.